ಪ್ರಮುಖ ಸುದ್ದಿ

ಏತನೀರಾವರಿ ಯೋಜನೆಯಲ್ಲಿ 12 ಗ್ರಾಮಗಳ ಸೇರ್ಪಡೆಗೆ ಶಾಸಕ ಶಿರವಾಳ ಆಗ್ರಹ

ಯಾದಗಿರಿ : ಶಹಾಪುರ ಮತಕ್ಷೇತ್ರದ ಸುರಪುರ ತಾಲೂಕಿನ 12 ಗ್ರಾಮಗಳನ್ನು ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯಡಿಯಲ್ಲಿ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಶಹಾಪುರ ಶಾಸಕ ಗುರುಪಾಟೀಲ ಶಿರವಾಳ ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ರೈತರೊಂದಿಗೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗುರು ಪಾಟೀಲ್, ಈಗಾಗಲೇ ಬರಗಾಲದಿಂದ ನೂರಾರು ರೈತರು ತತ್ತರಿಸಿ, ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಬೂದಿಹಾಳ- ಪೀರಾಪುರ ಏತನೀರವಾರಿ ಯೋಜನೆಯಲ್ಲಿ ನೀರವಾರಿ ಇಲಾಖೆ ನೀರು ಹಂಚಿಕೆ ಮಾಡಿ ಏತನೀರಾವರಿ ಕಾಮಗಾರಿಗೆ ಟೆಂಡರ್ ಕರೆದಿದೆ, ನನ್ನ ಮತಕ್ಷೇತ್ರದ ಐನಾಪೂರ, ಮಲ್ಕಾಪುರ, ದೋರನಹಳ್ಳಿ, ಬೇವಿನಹಾಳ, ಕಾಚಾಪುರ, ಆಲ್ದಾಳ, ಎಂ.ಬೊಮ್ಮನಳ್ಳಿ, ಚಿಂಚೋಳಿ, ವಂದಗನೂರ ಗ್ರಾಮಗಳನ್ನು ಸೇರ್ಪಡೆ ಮಾಡಿ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದರು.

ಆಲಮಟ್ಟಿ ಜಲಾಶಯದಿಂದ ಅಧಿಸೂಚನೆ ಆಗದಿರುವ ಇಲಕಲ್ ಕಾಲುವೆ, ಮಣಘಾಣ ಕಾಲುವೆ, ಬಿಜಾಪೂರ ಕಾಲುವೆಗಳಿಗೆ ಅಕ್ರಮವಾಗಿ ನೀರು ಸರಬರಾಜು ಮಾಡಲಾಗುತ್ತಿದೆ ಇದರ ಪರಿಣಾಮ ನಮ್ಮ ಭಾಗದ ರೈತರ ಹಿಂಗಾರು ಬೆಳೆಗಳಿಗೆ ನೀರಿನ ತೊಂದರೆ ಉಂಟಾಗಿ ಮಾರ್ಚ 31ರ ವರಗೆ ಸರಳವಾಗಿ ನೀರು ಕಾಲುವೆಗೆ ಬರುವುದಿಲ್ಲ, ಇದನ್ನು ಗಮನಿಸಿ ಬೃಹತ್ ನೀರಾವರಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ನೀರು ಬಿಡುಗಡೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮತಕ್ಷೇತ್ರದ ಮೂಡಬೂಳ ಹಾಗೂ ಶಹಾಪೂರ ಶಾಖಾ ಕಾಲುವೆಗಳಲ್ಲಿ ವಾರ ಬಂದಿಯಲ್ಲಿ ಒಂದು ವಾರದಲ್ಲಿ ಮೂರು ದಿನ ಮೂಡಬೂಳ ಶಾಖಾ ಕಾಲುವೆಗೆ ಹಾಗೂ ಮೂರು ದಿನ ಶಹಾಪೂರ ಶಾಖಾ ಕಾಲುವೆಗೆ ನೀರು ಹರಿಸಲಾಗುತ್ತಿದೆ, ಅಧಿಕಾರಿಗಳ ಅವೈಜ್ಞಾನಿಕ ವಾರಬಂದಿಯಿಂದ ರೈತರಿಗೆ ಒಟ್ಟಿನಲ್ಲಿ ಏಳುದಿ ಬದಲಾಗಿ ಹತ್ತು ದಿನ ವಾರಬಂದಿ ಮಾಡಿದಂತ್ತಾಗುತ್ತದೆ, ಕೂಡಲೇ ಅಧಿಕಾರಿಗಳ ರೈತರ ಹಿತದೃಷ್ಠಿಯಿಂದ ನಿರಂತರ ನೀರು ಬಿಡುಗಡೆ ಮಾಡಬೇಕೆಂದು ತಿಳಿಸಿದರು.

ಸತ್ಯಾಗ್ರಹದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರು, ಬಸವರಾಜ ಆನೇಗುಂದಿ, ಅತೀಕ್‍ಸಾಬ್, ಮಲ್ಲು ಸಾಹು ಹೊಸರು, ವಸಂತಕುಮಾರ ಸುರಪುರಕರ್, ಕಲ್ಲಣ ಸಾಹು ಹೂವಿನಹಳ್ಳಿ, ನಾನಾಗೌಡ, ಪ್ರಶಾಂತಗೌಡ ದೊಡ್ಮನಿ, ನಿಂಗಪ್ಪ ಯಕ್ತಾಪುರ, ಬಸಲಿಂಗಪ್ಪ ಚೌದ್ರಿ, ಬಸವರಾಜ ಐನಾಪೂರ, ನಿಂಗಪ್ಪ ಮಲ್ಕಾಪುರ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button