ಅಂಕಣ

ಇಷ್ಟದಂತೆ ಬದುಕಲು ಕಷ್ಟಗಳನು ಇಲ್ಲವಾಗಿಸಿ..ಅಬ್ಬಿಗೇರಿ ಬರಹ

 

-ಜಯಶ್ರೀ.ಜೆ. ಅಬ್ಬಿಗೇರಿ. ಬೆಳಗಾವಿ.

ಬದುಕಿನ ಬೊಗಸೆಯ ತುಂಬಾ ಸವಿ ಸವಿ ನೆನಪುಗಳೇ ತುಂಬಿರಬೇಕೆಂದು ಎಲ್ಲ ಸಮಯದಲ್ಲೂ ನಾವು ಹಂಬಲಿಸುತ್ತೇವೆ. ಕಲ್ಪನಾ ಲೋಕದಲ್ಲಿಯಂತೂ ನಾವು ಒಬ್ಬರಿಗಿಂತ ಒಬ್ಬರು ಅತಿರಥ ಮಹಾರಥರು. ಮಳೆ ಬಿಲ್ಲಿಗೆ ಏಣಿ ಇಡಬಲ್ಲ ಸಾಹಸ ನಮ್ಮದು. ಪಡುವಣದ ರವಿಯ ತಂದು ನಲ್ಲೆಯ ಮುಡಿಗೆ ಮುಡಿಸುವ ಆಸೆ ಕೆಲವರದಾದರೆ, ತಂಪು ಸೂಸುವ ತುಂಬು ಚಂದಿರನ ತನ್ನ ಪ್ರಿಯತಮೆಗೆ ಕಿವಿಯೋಲೆಯಾಗಿ ನೀಡುವಾಸೆ. ಅಬ್ಬಬ್ಬಾ! ಕುಳಿತಲ್ಲೇ ಮನಮೋಹಕ ದೃಶ್ಯ ಕಾವ್ಯವನ್ನು ಸೃಷ್ಟಿಸುವ ನಮ್ಮ ಚಾತುರ್ಯಕ್ಕೆ ನಮಗೆ ನಾವೇ ವ್ಹಾ ವ್ಹಾ ಎನ್ನಲೇಬೇಕು.

ಆದರೆ ಬದುಕಿನ ನಿಜವಾದ ಗುಣ ಅದಾಗಿರುವುದಿಲ್ಲ. ಬದುಕಿನ ರೀತಿಯೇ ಬೇರೆ ಅದು ಎದುರಿಡುವ ಸಂದರ್ಭಗಳಿಗೆ ನಮ್ಮನ್ನು ಸಹಿಸಿಕೊಳ್ಳದ ಅನಿವಾರ್ಯತೆಗೆ ಸಿಕ್ಕಿಸಿಬಿಡುತ್ತವೆ. ಕಷ್ಟಗಳ ಸುಳಿಗೆ ಸಿಕ್ಕಾಗಲೆಲ್ಲ ಮನಸ್ಸು ಕ್ಷಣ ಕ್ಷಣಕ್ಕೂ ನೋವಿನ ಕುಲುಮೆಯಲ್ಲಿ ಬೇಯುತ್ತಿರುತ್ತದೆ. ಮಾನಸಿಕವಾಗಿ ಸಾಕಷ್ಟು ಹೊಯ್ದಾಟದಲ್ಲಿ ನೊಂದು ಹೋಗುತ್ತೇವೆ.

ಒಂದು ಸಮಸ್ಯೆಯ ಬಲೆಯಿಂದ ತಪ್ಪಿಸಿಕೊಂಡು ನಿರಾಳವಾದೆವು ಎನ್ನುವಷ್ಟರಲ್ಲಿ ದಿಢೀರ್‍ನೇ ಎಲ್ಲಿಂದಲೋ ಇನ್ನೊಂದು ಸಮಸ್ಯೆ ಎದುರಿಗೆ ಬಂದು ಹಲ್ಲು ಕಿರಿಯುತ್ತದೆ. ಆ ಸಮಸ್ಯೆಯಿಂದ ಅಷ್ಟು ಸುಲಭಕ್ಕೆ ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತೇವೆ. ಇಷ್ಟದ ಬದುಕು ಮರೀಚಿಕೆಯೇ ಸರಿ ಎಂದು ಗೊಣುಗುತ್ತೇವೆ.

ಕೊನೆಗೊಂದು ದಿನ ಒಳಗಿನ ದುಃಖ ಹೊರಗೆ ಆಸ್ಪೋಟಿಸಿಯೇ ಬಿಡುತ್ತದೆ. ಅಷ್ಟು ದಿನ ತುಟಿ ಕಚ್ಚಿ ಸಹಿಸಿ  ಕೊಂಡಿದ್ದನ್ನೆಲ್ಲ ಒಂದೇ ಬಾರಿಗೆ ಹೊರ ಹಾಕುತ್ತೇವೆ. ನಮ್ಮ ಹುಚ್ಚಾಟ ಕೂಗಾಟ ಹಾರಾಟಗಳನ್ನು ನಾವೇ ಒಂದು ಸಲ ತಾಳ್ಮೆಯಿಂದ ಪರೀಕ್ಷಿಸಿಕೊಂಡರೆ ಸುಧಾರಿಸಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತವೆ.

ಆದರೆ ನಾವು ಹಾಗೆ ಮಾಡುವುದೇ ಇಲ್ಲ. ಹಕ್ಕಿಯ ಹಿಂಡು ಪಟ ಪಟನೆ ರೆಕ್ಕೆ ಬಿಚ್ಚಿ ಹಾರುವಂತೆ ಸಮಸ್ಯೆಯ ಬಾಣಲೆಯಿಂದ ದೂರ ದೂರ ಹಾರತೊಡಗುತ್ತೇವೆ. ಕಾಡುವ ಸಮಸ್ಯೆಗಳಿಂದ ಆಚೆ ಬರಲು ಹೀಗೆ ಮಾಡಬೇಕು.
ದೃಷ್ಟಿ ಬದಲಿಸಿ ಸಮಸ್ಯೆಗಳತ್ತ ನೋಡ ತೊಡಗಿದರೆ ಮತ್ತಷ್ಟು ಇನ್ನಷ್ಟು ಹೆಚ್ಚೆಚ್ಚು ಸಮಸ್ಯೆಗಳು ಬಾಳಿನ ಬಾಗಿಲು ತೆರೆದು ಒಳ ಬರುತ್ತವೆ.

ಆದರೆ ನಮ್ಮ ದೃಷ್ಟಿಯನ್ನು ಪರಿಹಾರಗಳತ್ತ ಹೊರಳಿಸಿದರೆ ಸಾಕಷ್ಟು ಸಾಧ್ಯತೆಗಳು ಪರಿಹಾರಗಳು ಅವಕಾಶಗಳು ಎದ್ದು ಕಾಣುತ್ತವೆ. ಉರಿಯುವ ಗಾಯಕ್ಕೆ ಮುಲಾಮು ಹುಡುಕುವ ಪ್ರಯತ್ನ ಮಾಡಬೇಕೇ ಹೊರತು ಅದಕ್ಕೆ ಮತ್ತಷ್ಟು ಉಪ್ಪು ಖಾರ ಸವರಬಾರದು. ಕಷ್ಟಗಳನ್ನು ಭೇದಿಸುವುದು ಅಸಾಧ್ಯದ ಮಾತು ಎಂದು ನಂಬಿದರೆ ಅದನ್ನು ಭೇದಿಸುವ ಯಾವ ಪ್ರಯತ್ನವನ್ನು ನಾವು ಮಾಡುವುದಿಲ್ಲ. ಹೀಗಾಗಿ ನಮ್ಮ ಅಸಾಧ್ಯದ ಯೋಚನೆ ತನ್ನಷ್ಟಕ್ಕೆ ತಾನೇ ವಾಸ್ತವಾಗಿ ಬಿಡುತ್ತದೆ.

ಈಗಾಗಲೇ ನಡೆದು ಹೋದ ದುರ್ಭರ ಸನ್ನಿವೇಶಗಳನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಂಡು ಚಿಕ್ಕ ಮೊಡವೆಯಂತಿದ್ದ ತೊಂದರೆಯನ್ನು ಹುಣ್ಣಾಗಿಸುವ ಗೋಜಿಗೆ ಹೋಗಬಾರದು. ಎದೆಗೆ ಆದ ಗಾಯಗಳನ್ನು ಗಾಳಿಗೆ ತೆರದಿಟ್ಟರೆ ಇನ್ನಷ್ಟು ನೋವಾಗುವ ಸಂಭವವೇ ಹೆಚ್ಚು. ಕಾರಣ ಮೆಲ್ಲಗೆ ನಗುತ ಮರೆತು ಬಿಡೋಣ..ಸಮಸ್ಯೆಗಳ ಮರೆಯಾಗಿಸಿಬಿಡೋಣ ಇಷ್ಟದ ರಾಜ ಮಾರ್ಗದಲ್ಲಿ ಹೂವಿನ ಹಾಸಿಗೆಯ ಮೇಲೆ ನಡೆಯಲು ಜೀವನದೆಡೆ ನೋಡುವ ದೃಷ್ಟಿ ಬದಲಿಸಿ ಬಿಡೋಣ.

ಅನುಭವಿಗಳು ಹೇಳಿದಂತೆ ದೃಷ್ಟಿ ಬದಲಿಸಿ ನಿಮ್ಮ ದೃಷ್ಟಿ ಜೀವನವನ್ನು ಬದಲಿಸುತ್ತದೆ. ಸಹನೆ ಇರಲಿ. ಬದುಕಿನ ಪಯಣದಲ್ಲಿ ಎದುರಾಗುವ ಕಷ್ಟಗಳನ್ನು ಮೌನವಾಗಿ ದಾಟುವ ಪ್ರವೃತ್ತಿ ಬೆಳೆಸಿಕೊಳ್ಳಲು ತಾಳ್ಮೆ ಅವಶ್ಯಕ. ಮನಸ್ಸನ್ನು ತಣ್ಣಗಿಟ್ಟುಕೊಳ್ಳುವವರು ಎಂಥ ಸಂಕಷ್ಟದ ಸಮಯದಲ್ಲೂ ಸಹಿಸಿಕೊಳ್ಳುವರು.

ಬಾಳಿನ ಪುಸ್ತಕದ ಕೊನೆ ಪುಟದವರೆಗೂ ಸಹನೆಯ ಜೊತೆಗೆ ಹೆಜ್ಜೆ ಹಾಕುವರು ಇತರರಿಗೆ ದಾರಿ ತೋರುವ ಮಾದರಿಯಾಗಿ ಬಿಡುತ್ತಾರೆ. ವೇದಾಂತದ ಮಾತುಗಳಿಗೂ ವಾಸ್ತವದ ಬದುಕಿಗೂ ಸಾಕಷ್ಟು ವ್ಯತ್ಯಾಸವಿದೆ. ಸಹನೆ ರೂಢಿಸಿಕೊಳ್ಳುವುದು ಅಸಾಧ್ಯದ ಮಾತು ಎನ್ನುವುದು ಹಲವು ಆತುರಗೇಡಿಗಳ ನುಡಿ. ತುಸು ಜಟಿಲವೆನಿಸುವ ತಾಳ್ಮೆಯನ್ನು ಅಭ್ಯಾಸ ಮಾಡಿಕೊಂಡು, ಸಹನಾ ಮೂರ್ತಿಗಳಾದರೆ ನಮ್ಮಿಷ್ಟದಂತೆ ಬದುಕಬಹುದು.

ಕಷ್ಟಗಳ ಇಲ್ಲವಾಗಿಸಿ ಇಷ್ಟದಂತೆ ಬದುಕಲು ಮನಸ್ಸು ಅದೆಷ್ಟು ಡಿಗ್ರಿ ಕುದಿಯಬೇಕು? ಒಳಗೊಳಗೆ ಕೊರಗಬೇಕು? ಎಂಬ ಪ್ರಶ್ನೆಗಳ ಸುಳಿವಿನಲ್ಲಿ ಸಿಕ್ಕರೆ ನಮ್ಮನ್ನು ನಾವು ಸಮಸ್ಯೆಗಳ ಖೆಡ್ಡಾಕ್ಕೆ ಕೆಡವಿಕೊಳ್ಳಲು ಪ್ರಯತ್ನಿಸಿದಂತಾಗುತ್ತದೆ. ಬಾಳಿನ ಬಗೆಗೆ ಶ್ರದ್ಧೆ ತೋರಿದರೆ, ಬದುಕಿನ ಹಾದಿಯಲ್ಲಿ ಅಗ್ನಿ ಪರ್ವತ ಉರಿಯುತ್ತಿದ್ದರೂ ಶಾಂತವಾಗಿ ಹರಿಯುವ ನದಿಯಾಗಿ ಬಿಡಬಹುದು.

ಸಮಸ್ಯೆಗಳು ಹುಟ್ಟಿಕೊಳ್ಳುವುದೇ ನಮ್ಮ ಅತಿಯಾದ ನಿರೀಕ್ಷೆಗಳಿಂದ. ಮತ್ತು ನಮ್ಮ ಹೊಣೆಗೇಡಿತನದಿಂದ. ನಿರೀಕ್ಷೆಗಳನ್ನು ತಗ್ಗಿಸಿ ಹೊಣೆಗಾರಿಕೆಯನ್ನು ಹೆಚ್ಚಿಸಿದರೆ ಕಷ್ಟಗಳ ಉಪಟಳ ತಾನಾಗಿಯೇ ತಗ್ಗುತ್ತದೆ.
ಅರ್ಹತೆ ಹೆಚ್ಚಿಸಿ ಬಹುತೇಕ ಪ್ರಸಂಗಗಳಲ್ಲಿ ನಮ್ಮ ಅರ್ಹತೆಗೆ ತಕ್ಕಷ್ಟು ದಕ್ಕುತ್ತದೆ. ನಾವೇನು? ನಮ್ಮ ಅರ್ಹತೆ ಎಷ್ಟಿದೆ? ಎಂದು ಅರಿಯದೇ ಇತರರ ಸಾಧನೆಗೆ ಕರಬುತ್ತೇವೆ.

ಇನ್ನಿಲ್ಲದ ಕಷ್ಟಗಳನ್ನು ಕೈ ಬಿಸಿ ಕರೆಯುತ್ತೇವೆ. ಅರ್ಹತೆ ಬೆಳೆಸಿಕೊಳ್ಳುವುದೇ ಜೀವನದ ಬಹು ಮುಖ್ಯ ಭಾಗವಾಗಿದೆ. ಅರ್ಹತೆ ತುಂಬಿದ ವ್ಯಕ್ತಿ ಪರಿಹಾರದ ಗಣಿಯಗುತ್ತಾನೆ. ಸುಖ ನೆಮ್ಮದಿ ಚಿಮ್ಮುವ ಕಾರಂಜಿ ಎನಿಸುತ್ತಾನೆ. ಎಷ್ಟೋ ಸಲ ತೀರ ಕಷ್ಟದ ಪರಿಸ್ಥಿತಿ ಎದುರಾದಾಗಲೇ ನಮ್ಮಲ್ಲಿಯ ಅರ್ಹತೆ ಆಚೆ ನುಗ್ಗಿ ಬರುತ್ತದೆ. ದೊಡ್ಡ ಪ್ರಮಾಣದ ಸಾಧನೆ ಸಾಧ್ಯವಾಗುತ್ತದೆ ಎಂಬ ಮಹತ್ವದ ಅಂಶ ಮರೆಯದಿರೋಣ.

ಸದಾ ಸುರಕ್ಷಿತ ವಲಯದಲ್ಲಿ ಇರಬಯಸುವ ಬಯಕೆ ಸಹಜವಾದರೂ ಅದರಿಂದ ಏಳ್ಗೆ ಸಾಧ್ಯವಿಲ್ಲ. ಬಹುತೇಕ ಮಂದಿ ತಮ್ಮ ದೃಷ್ಟಿಗೆಷ್ಟು ಕಾಣಿಸುತ್ತದೋ ಅಷ್ಟೇ ಪ್ರಪಂಚದ ಮಿತಿ ಎಂದು ಭಾವಿಸುತ್ತಾರೆ. ಕೆಲವೇ ಮಂದಿ ಅದಕ್ಕಿಂತ ಭಿನ್ನರಾಗಿರುತ್ತಾರೆ ಅಂಥವರನ್ನು ಅನುಸರಿಸು ಎಂದಿದ್ದಾನೆ ಪ್ರಖ್ಯಾತ ತತ್ವಜ್ಞಾನಿ ಆರ್ಥರ್ ಶೋಫೆನ್ ಹಾವರ್. ನಾವು ಕಲ್ಪಿಸಿದ ಪರಿಮಿತಿಗಳು ನಮ್ಮನ್ನು ಬಂಧಿಸುವ ಸಂಕೋಲೆಗಳಾಗುವುದಕ್ಕೆ ಬಿಡದೇ ಮಹಾನ್ ಪುರುಷರ ಅನುಸರಿಸೋಣ.

ಸಾಯುವ ಕಾಲ ಹತ್ತಿರ ಬಂದರೂ ಇಷ್ಟದ ಪಥದಲ್ಲಿ ಹೇಗೆ ಬದುಕಬೇಕೆಂದು ತಿಳಿಯುವುದಿಲ್ಲ. ತಮ್ಮಿಷ್ಟದಂತೆ ಬದುಕಿದ ಮಹಾನ್ ಚೇತನಗಳ ಜೀವನ ಚರಿತ್ರೆ ಓದಿದಾಗ ಕಷ್ಟಗಳ ಕುಲುಮೆಯಿಂದ ಹೊರ ಬರುವುದು ಹೇಗೆ? ಬಾಳು ಬೆಳಗಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರಗಳು ಸಿಗುವುದಲ್ಲದೇ ಹೆಚ್ಚು ಸ್ಪಷ್ಟತೆಯೂ ದೊರೆಯುತ್ತದೆ. ನೆನಪಿರಲಿ ಇಷ್ಟವಾದುದನ್ನು ಮಾಡುವುದು ಅತ್ಯಂತ ಕಷ್ಟದ ಕೆಲಸವೇನಲ್ಲ.

ಜಯಶ್ರೀ.ಜೆ. ಅಬ್ಬಿಗೇರಿ. ಬೆಳಗಾವಿ.

ಮೊ.9449234142.

Related Articles

Leave a Reply

Your email address will not be published. Required fields are marked *

Back to top button