ಭಗವಾನ್ ಮಹಾವೀರರ ತತ್ವಗಳು ಬದುಕಿಗೆ ದಾರಿ ದೀಪಃ ಪೌರಾಯುಕ್ತ ಉಪಾಸೆ
ಯಾದಗಿರಿ:ಭಗವಾನ್ ಶ್ರೀ ಮಹಾವೀರರು ಸಮ್ಯಕ್ ದರ್ಶನ್, ಸಮ್ಯಕ್ ಜ್ಞಾನ ಹಾಗೂ ಸಮ್ಯಕ್ ಚಾರಿತ್ರ್ಯ ಎಂಬ ಮೂರು ತತ್ವಗಳನ್ನು ನೀಡಿದ್ದು, ಇವು ನಮ್ಮೆಲ್ಲರ ಬದುಕಿಗೆ ದಾರಿ-ದೀಪವಾಗಿವೆ ಎಂದು ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಹೇಳಿದರು.
ನಗರದ ಮಹಾವೀರ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಭಗವಾನ್ ಶ್ರೀ ಮಹಾವೀರ ಜಯಂತ್ಯುತ್ಸವ ಸಮಿತಿ, ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಬೌದ್ಧ, ಜೈನ, ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ ಎಂಬ ಆರು ನಾಸ್ತಿಕ ಧರ್ಮಗಳಿದ್ದು, ಶಂಕರಾಚಾರ್ಯ, ರಾಮಾನುಜಚಾರ್ಯ, ಮಧ್ವಾಚಾರ್ಯರ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಹಾಗೂ ಶಕ್ತಿ ವಿಶಿಷ್ಟದ್ವೈತಗಳ ಆಸ್ತಿಕ ಧರ್ಮಗಳು ಇವೆ. ಆದರೆ, ಇವುಗಳಲ್ಲಿ ಅಹಿಂಸೆಯನ್ನು ಎತ್ತಿ ಹಿಡಿಯುವ ಧರ್ಮವೆಂದರೆ ಜೈನ ಧರ್ಮ ಎಂದು ಗುಣಗಾನ ಮಾಡಿದರು. ಜೈನ ಧರ್ಮಿಯರು ಸುಸಂಸ್ಕೃತರಾಗಿದ್ದು, ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನ ಶಾಂತಿಲಾಲ್ ಜೀ ಡೊಂಗೆರವಾಲ ಜೈನ್ ಅವರು ಭಗವಾನ್ ಶ್ರೀ ಮಹಾವೀರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಾಬು ದೋಖಾ, ಬೆಂಗಳೂರಿನ ಅಶೋಕ್ ಜಿ. ಜೈನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಭಗವಂತ ಅನ್ವರ್ ಮುಂತಾದವರು ಉಪಸ್ಥಿತರಿದ್ದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ಚಂದ್ರಶೇಖರ್ ಗೋಗಿ ನಾಡಗೀತೆ ಹಾಡಿದರು.