ಸುದ್ದಿಗೆ ನೈತಿಕತೆಯ ಜೀವವಿರಲಿ ಜನೋಪಕಾರಿಗೆ ಒತ್ತು ನೀಡಿ
ಮಾದ್ಯಮಗಳೇ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ನೈತಿಕತೆಯಿರಲಿ.!
ಹೌದು..ಮಾದ್ಯಮಗಳು ಇಂದು ಕಾಟಾಚಾರಕ್ಕೆ ಎನ್ನುವಂತೆ ನೈತಿಕತೆ ಮರೆತು ಮಾಡುತ್ತಿರುವ ಸುದ್ದಿಗಾಗಿ ಶಿರ್ಷಿಕೆಯಂತಹ ಮನವಿಯನ್ನ ಮಾದ್ಯಮಗಳಿಗೆ ಮಾಡುವ ಅನಿವಾರ್ಯವಿದೆ.
ಇಂದು ಇಡೀ ದಕ್ಷಿಣ ಭಾರತದಲ್ಲಿ,ಅದರಲ್ಲು ವಿಶೇಷವಾಗಿ ಕರ್ನಾಟಕದಲ್ಲಿ ಬಹುದೊಡ್ಡ ಚರ್ಚೆಗೀಡಾಗಿರುವ ವಿಷಯ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಸಂಗತಿ.
ಮೇಲ್ನೊಟಕ್ಕೆ ಇದು ಕೇವಲ ಲಿಂಗಾಯತರೆನಿಸಿಕೊಂಡವರಿಗೆ ಮಾತ್ರ ಸೀಮಿತ ಎಂದು ಜನ ನೋಡಿದರು,ಇದು ಅಖಂಡ ರಾಜ್ಯದ ಹಿತ ಮತ್ತು ಕೀರ್ತಿಯ ಸಂಗತಿಯು ಇದರಲ್ಲಿದೆ.ಆದರೆ ಇದನ್ನ ಸರಿಯಾದ ರೀತಿಯಲ್ಲಿ ಮಾದ್ಯಮಗಳು ಇದನ್ನ ಪ್ರಚುರಪಡಿಸುತ್ತಿಲ್ಲವೆಂಬ ಬೇಸರ ಎಲ್ಲ ಬಸವಾಭಿಮಾನಿಗಳಲ್ಲಿದೆ.
ಒಂದು ಸಮಾಜದ ಸ್ವಾಸ್ಥ್ಯಕ್ಕಾಗಿ ಸೇವೆ ಮಾಡುವ ಜವಬ್ದಾರಿ ಮಾದ್ಯಮಗಳದು, ಅದನ್ನ ಲಿಂಗಾಯತ ಧರ್ಮ ಮಾನ್ಯತೆಯೊಂದಿಗೂ ನೋಡಬೇಕಿದೆ. ಈಗಾಗಲೆ ಎಲ್ಲರಿಗು ಗೊತ್ತಿರುವಂತೆ ಲಿಂಗಾಯತ ಎನ್ನುವದು ಬಸವಣ್ಣನಿಂದ ಹುಟ್ಟಿಕೊಂಡ ಒಂದು ಪರಂಪರೆ.
ಒಂದು ಧರ್ಮ,ಲಿಂಗಾಯತ ಎಂದರೆ ಮೊದಲು ಗೋಚರಿಸುವ ಚಿತ್ರವೆ ಬಸವಣ್ಣ.ಬಸವಣ್ಣ ತನ್ನ ಧಾರ್ಮಿಕ ಕ್ರಾಂತಿಯ ಸಂದರ್ಭ ಕೆಳ ಸಮುದಾಯಗಳ ಮೇಲೆತ್ತಿ, ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎಂದು ದೇಹವನ್ನ ದೇಗುಲ ಮಾಡಿದ,ವ್ಯಕ್ತಿಯನ್ನ ದೇವರಾಗಿ,ಆ ಅರಿವನ್ನು ಗುರುವಾಗಿ ಕಂಡು ಎಲ್ಲರೊಳು ಭಕ್ತಿ ಸಮಾನತೆಯನ್ನು ತಂದರು.
ಆದರೆ ಈಗ ವೀರಶೈವ ಮತ್ತು ಲಿಂಗಾಯತ ಮದ್ಯೆ ಧಾರ್ಮಿಕ ಸಂಘರ್ಷ ನಡೆದಿದೆ.ಬಸವಣ್ಣನ ಲಿಂಗಾಯತ ಮೌಢ್ಯ, ಅಂಧಾಚರಣೆ ತೊಲಗಿಸಿದರೆ,ಶೈವ ಮತದೊಳಗಣ ಭಾಗವಾದ ವೀರಶೈವ ಮೌಢ್ಯ,ಕಂದಾಚಾರ, ಮನುಷ್ಯನ ಮೇಲೆ ಸವಾರಿ,ಮೇಲು ಕೀಳೆಂಬ ಭೇದ ಎಲ್ಲವನ್ನು ಪಾಲಿಸುತ್ತದೆ.
ಇದಕ್ಕಿಂತಲು ಮುಖ್ಯವಾಗಿ ಲಿಂಗಾಯತದೊಳಗೆ ಜಾಗತ್ತಿನಲ್ಲಿ ಬಹುತೇಕ ಎಲ್ಲ ಕಸಬುಗಳ ೯೯ ಒಳ ಪಂಗಡಗಳಿವೆ. ಇವೆಲ್ಲವುಗಳಿಗೆ ಬಸವಣ್ಣನೆ ತಂದೆ,ಬಸವಣ್ಣನೆ ಗುರು,ಬಸವಣ್ಣನೆ ಧರ್ಮ ನಿರ್ಮಾತೃ.ಅದರೆ ವೀರಶೈವ ವಾದಿಗಳಿಗೆ ಬಸವಣ್ಣ ಅವರ ಶಿಷ್ಯ, ತಂದೆ ತಾಯಿಗಳ ಬಗ್ಗೆ ನಿಖರ ಮಾಹಿತಿಯೆ ಇಲ್ಲದ (ಸ್ಥಾವರ ಲಿಂಗದಲ್ಲಿ ಜನಸಿದನೆನ್ನುವ) ರೇಣುಕಾಚಾರ್ಯ ಗುರು,ಧರ್ಮ ನಿರ್ಮಾತೃ.ತಂದೆ ತಾಯಿ ಇಲ್ಲದೆ ಜಗತ್ತಿನಲ್ಲಿ ಯಾವ ಜೀವಿಯು ಜನಿಸಲಾರದು,ಇದು ಮಕ್ಕಳಿಗು ತಿಳಿದ ವಿಷಯ ಮಾದ್ಯಮಗಳಿಗೆ ತಿಳಿಯದೆಂದಲ್ಲ.
ಆದರೆ ಮಾದ್ಯಮಗಳು ವೀರಶೈವ ಲಿಂಗಾಯತ ಒಂದೆ ಎಂದು ಭಾಷಣ ಮಾಡುವ ಸ್ವಾಮಿಗಳ ಮಾತನ್ನ ಇಡೀ ದಿನ ತೋರಿಸುವದಷ್ಟೆ ಮಾದ್ಯಮಗಳ ಕೆಲಸವಾ? ಅದೇ ಸ್ವಾಮಿಗಳು ಮಾತನಾಡುವಾಗ ವೀರಶೈವ ಲಿಂಗಾಯತ ಧರ್ಮ ಎನ್ನುವಿರಿ, ಈ ನಿಮ್ಮ ಧರ್ಮ ನಿರ್ಮಾತೃ ಯಾರೆಂದು, ಅವರ ಜನನದ ಬಗ್ಗೆ ಅಯೋನಿಜರೆಂದು ಹೇಳುತ್ತಾರೆ, ಇದು ಸಾಧ್ಯವೆ ಎಂದು ಆ ಸ್ವಾಮಿಗಳಿಗೆ ಪ್ರಶ್ನಿಸಲ್ಲವೇಕೆ? ಹಿಂದೆ ಮೂರು ವಾರಿ ಕೇಂದ್ರ ಸರಕಾರದ ಮುಂದೆ ವೀರಶೈವ ಅಥವಾ ವೀರಶೈವ ಲಿಂಗಾಯತ ಎಂದು ಧರ್ಮ ಮಾನ್ಯತೆಗೆ ಹೋದಾಗ ವೀರಶೈವ ಪದದ ಕಾರಣ ಇದು ಹಿಂದು ಧರ್ಮದ ಭಾಗವೆಂದು ಮನವಿ ತಿರಸ್ಕಾರಗೊಂಡಿದೆ, ಈಗ ಮತ್ತೆ ವೀರಶೈವ ಲಿಂಗಾಯತ ಧರ್ಮವೆಂದೇ ಶಿಫಾರಸ್ಸು ಮಾಡಲಿ ಎನ್ನುವಿರಿ, ಮತ್ತೆ ತಿರಸ್ಕಾರವಾಗುವದು ತಿಳಿದರು ಅದನ್ನೇ ಹೇಳುವದ್ಯಾಕೆ? ನಿಜವಾಗಿಯು ನಿಮ್ಮ ಸ್ವತಂತ್ರ ಧರ್ಮ ಮಾನ್ಯತೆ ಬೇಕೆ ಅಥವಾ ಧರ್ಮವೆ ಬೇಡವೆನ್ನುವ ಬದಲು ಹೀಗೆ ವೀರಶೈವ ಲಿಂಗಾಯತ ಧರ್ಮ ಎಂದು ಮೊಂಡುತನ ಪ್ರದರ್ಶಿಸುತ್ತಿದ್ದಿರಾ? ಎಂದು ಯಾಕೆ ಪ್ರಶ್ನಿಸಲ್ಲ ಮಾದ್ಯಮಗಳೆ?
ಮಾದ್ಯಮ ಬಂಧುಗಳೆ ಒಂದು ಸಮಾಜದ ಅಭಿವೃದ್ಧಿ, ಸಮಾಜದಲ್ಲಿ ಸಮಾನತೆ, ಮೂಢ ನಂಬಿಕೆ ತೊಲಗಿಸಿ ವೈಚಾರಿಕತೆ ಬೆಳೆಸುವದು ಕೂಡ ಮಾದ್ಯಮಗಳ ಮೂಲ ಜವಬ್ದಾರಿ ಎಂಬುದನ್ನ ಮರೆಯದಿರೋಣ.
ಬಸವಣ್ಣ ಮತ್ತವರ ಸಮಕಾಲಿನ ಸಮಸ್ತ ಶರಣರು ಕ್ರಾಂತಿ ಮಾಡಿದ್ದು ಸಮಾನತೆಯ ಸಮಾಜ ನಿರ್ಮಾಣಕ್ಕಾಗಿಯೆ, ಅವರ ನಿಲುವು ಇಂದಿನ ಮಾದ್ಯಮಗಳ ಮುಂದವರೆದ ಭಾಗವೆಂದು ಭಾವಿಸೋಣ.ಇದರ ಜೊತೆಗೆ ಲಿಂಗಾಯತ ಸ್ವತಂತ್ರ ಧರ್ಮದಿಂದ ೯೯ ಒಳ ಪಂಗಡಗಳ ಅಭಿವೃದ್ಧಿಗೆ ಪೂರಕವಾದ ಆದ್ಯತೆಯಿದೆ.
ಅದು ಕೂಡ ಮಾದ್ಯಮಗಳ ಪಾತ್ರದಿಂದ ಕೈಗೂಡಿದರೆ ಜಗತ್ತು ಇರುವವರೆಗೆ ಆ ಶ್ರೇಯಸ್ಸಿನ ಭಾಗ ಮಾದ್ಯಮಗಳಾಗಲಿವೆ. ಆದ್ದರಿಂದ ವೀರಶೈವ ಲಿಂಗಾಯತ ಎಂದು ವಾದಿಸುವವರ ಕೇವಲ ಸುದ್ದಿ ಭಿತ್ತರಿಸುವ ಜೊತೆಗೆ ಲಿಂಗಾಯತ ಧರ್ಮದ ಸತ್ಯವನ್ನ ಅರಿತು,ವೀರಶೈವ ಧರ್ಮವಾದಿಗಳಿಗೆ ಪ್ರಶ್ನಿಸೋಣ.
ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವ,ಸೇವೆ ಮಾಡುವ ನಾವುಗಳು ಇಷ್ಟೂ ಮಾಡದಿದ್ದರೆ ನಿಜಕ್ಕು ಮಾದ್ಯಮಗಳು ಸಮಾಜಕ್ಕೆ ಮಾಡುವ ನೈತಿಕ ದ್ರೋಹವಾಗಲಿದೆ. ಹಾಗಾಗದಿರಲೆಂಬುದೆ ನಮ್ಮ ಮನವಿ.