ಗಣಿನಾಡು ಗೆಲ್ಲಲು ಜನಾರ್ಧನರೆಡ್ಡಿ ರಾಜಕೀಯ ರೀಎಂಟ್ರಿಗೆ ಮೋದಿ ಗ್ರೀನ್ ಸಿಗ್ನಲ್!?
-ಮಲ್ಲಿಕಾರ್ಜುನ ಮುದನೂರ್
ಬಳ್ಳಾರಿ : ಕಮಲ ಪಡೆಯ ಭದ್ರಕೋಟೆಯಾಗಿ ಪರಿವರ್ತನೆಗೊಂಡಿದ್ದ ಗಣಿನಾಡು ಬಳ್ಳಾರಿ ಈಗ ಕೈ ತಪ್ಪುವ ಲಕ್ಷಣಗಳಿವೆ. ಶಾಸಕರಾದ ನಾಗೇಂದ್ರ ಬಾಬು, ಆನಂದ್ ಸಿಂಗ್ ಈಗಾಗಲೇ ಕಮಲಕ್ಕೆ ಕೈಕೊಟ್ಟು ಕೈಪಡೆಗೆ ಹಸ್ತಲಾಘವ ಮಾಡಿಯಾಗಿದೆ. ಕಾಂಗ್ರೆಸ್ಸಿನ ಮಹಾರಾಜ ರಾಹುಲ್ ಗಾಂಧಿ ಅವರೂ ಗಣಿನಾಡಿನ ಸಮಾವೇಶದಲ್ಲಿ ಭಾಗಿಯಾಗಿ ಧೂಳೆಬ್ಬಿಸಿದ್ದಾರೆ. ಪರಿಣಾಮ ಬಳ್ಳಾರಿಯಲ್ಲಿ ಕಮಲ ಕಮರುವುದು ಗ್ಯಾರಂಟಿ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿ ಸಂಸದ ಶ್ರೀರಾಮುಲು ಒಂಟಿ ಹೋರಾಟ ಮಾಡಬೇಕಾದ ಸ್ಥಿತಿ ಸೃಷ್ಠಿಯಾಗಿದೆ. ಹೀಗಾಗಿ, ಮಾಜಿ ಸಚಿವ ಜನಾರ್ಧನರೆಡ್ಡಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದ್ದಾರೆ. ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ನಿರ್ಭಂಧ ವಿಧಿಸಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಗಡಿಯಲ್ಲಿರುವ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಅಮೃತ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲು ರೆಡ್ಡಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸದ್ಯ ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ ನಲ್ಲಿರುವ ಗಣಿಧಣಿ ಜನಾರ್ಧನರೆಡ್ಡಿ ಇಷ್ಟರಲ್ಲೇ ರಾಂಪುರದ ಅಮೃತ ಹೋಟೆಲ್ ಬಿಲ್ಡಿಂಗ್ ಗೆ ಶಿಫ್ಟ್ ಆಗಲಿದ್ದಾರೆ. ಬಳ್ಳಾರಿ ಗಡಿಯಲ್ಲಿದ್ದುಕೊಂಡು ರಾಜಕಾರಣ ಮಾಡಲಿರುವ ಜನಾರ್ಧನರೆಡ್ಡಿ ಬಳ್ಳಾರಿ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆನಂದ್ ಸಿಂಗ್, ಸುರೇಶ ಬಾಬು ಅವರನ್ನು ಸೋಲಿಸಿ ಜಿಲ್ಲೆಯಲ್ಲಿ ಕಮಲ ಅರಳಿಸಲು ರೆಡ್ಡಿ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಗಣಿ ಅಕ್ರಮ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದೆ. ಅದನ್ನೇ ದಾಳವನ್ನಾಗಿಸಿಕೊಂಡು ಗಣಿಧಣಿಯನ್ನು ಮುಂದೆಬಿಟ್ಟು ಬಳ್ಳಾರಿ ಗೆಲ್ಲಲು ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ನೀಡುವುದೊಂದೇ ಬಾಕಿಯಿದೆ ಎನ್ನಲಾಗಿದೆ. ಜನಾರ್ಧನರೆಡ್ಡಿ ಸಕ್ರಿಯ ರಾಜಕಾರಣಕ್ಕಿಳಿದರೆ ಮತ್ತೆ ಬಳ್ಳಾರಿಯಲ್ಲಿ ಕೇಸರಿ ಹವಾ ಎಬ್ಬಿಸುವುದರಲ್ಲಿ ಅನುಮಾನವಿಲ್ಲ. ಆದ್ರೆ, ರೆಡ್ಡಿ ಬಾಣ ಈ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.