ಮೊದಲ ಪಟ್ಟಿಯಲ್ಲೇ ಯಾದಗಿರಿ, ಶಹಾಪುರ, ಸುರಪುರ, ಜೇವರ್ಗಿ ಮತಕ್ಷೇತ್ರದ ಜೆಡಿಎಸ್ ಅಬ್ಯರ್ಥಿಗಳ ಘೋಷಣೆ!
ಬೆಂಗಳೂರು : ನಗರದಲ್ಲಿಂದು ವಿಕಾಸ ಪರ್ವ ಹೆಸರಿನಲ್ಲಿ ಜೆಡಿಎಸ್ ಪಕ್ಷದಿಂದ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಸಮಾವೇಶಕ್ಕೆ ಚಾಲನೆ ನೀಡಿದರು. ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಹಾವತಿ, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಲಕ್ಷಾಂತರ ಜನ ಕಾರ್ಯಕರ್ತರು ಸಮಾವೇಶಕ್ಕೆ ಸಾಕ್ಷಿಯಾಗಿದ್ದರು. ಈ ಸಂದರ್ಭದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಪಕ್ಷದ ಉಳಿವಿಗಾಗಿ ಅಂದು 20ತಿಂಗಳ ಕಾಲ ಅಧಿಕಾರ ಹಿಡಿಯಬೇಕಾಯಿತು. ಮತ್ತೊಮ್ಮೆ ಸಿಎಂ ಆಗುವ ಅವಕಾಶ ನೀಡಿ ರಾಜ್ಯದ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡತ್ತೇನೆಂದು ಹೇಳುವ ಮೂಲಕ ಭಾವನಾತ್ಮಕವಾಗಿ ಮಾತನಾಡಿದರು.
ಸಮಾವೇಶದ ಕೊನೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು 126 ಮತಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸಿದರು. ಇದೇ ಮೊದಲ ಬಾರಿಗೆ ಜೆಡಿಎಸ್ ಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗಿಂತ ಮೊದಲು ತಮ್ಮ ಪಕ್ಷದ ಅಬ್ಯರ್ಥಿಗಳನ್ನು ಘೋಷಿಸಿದೆ. ಆ ಮೂಲಕ ರಾಷ್ಟ್ರೀಯ ಪಕ್ಷಗಳ ವಿರುದ್ಧ ತೊಡೆತಟ್ಟಿದೆ. ಆ ಪೈಕಿ ಯಾದಗಿರಿ, ಸುರಪುರ, ಶಹಾಪುರ ಮತ್ತು ಜೇವರ್ಗಿ ಮತಕ್ಷೇತ್ರಗಳ ಅಬ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲೇ ಘೋಷಿಸಲಾಗಿದೆ.
ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಎ.ಸಿ.ಕಡಲೂರು, ಶಹಾಪುರ ಮತಕ್ಷೇತ್ರದಿಂದ ಅಮೀನರೆಡ್ಡಿ, ಸುರಪುರ ಮತಕ್ಷೇತ್ರದಿಂದ ರಾಜಾ ಕೃಷ್ಣಾ ನಾಯಕ್, ಜೇವರ್ಗಿ ಮತಕ್ಷೇತ್ರದಿಂದ ಕೇದಾರಲಿಂಗಯ್ಯ, ಗುರುಮಿಟ್ಕಲ್ ಮತಕ್ಷೇತ್ರದಿಂದ ನಾಗನಗೌಡ ಕಂದಕೂರ ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸಲಾಗಿದೆ. ಹೀಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ಅಬ್ಯರ್ಥಿಗಳ ಘೋಷಣೆಗೂ ಮೊದಲೇ ಜೆಡಿಎಸ್ ಅಬ್ಯರ್ಥಿಗಳ ಅಧಿಕೃತ ಘೋಷಣೆ ಆಗಿದ್ದು ಚುನಾವಣ ಕಣದಲ್ಲಿ ತೆನೆಹೊತ್ತ ಪಕ್ಷ ಬೇರೂರಲು ಅವಕಾಶ ಸಿಕ್ಕಂತಾಗಿದೆ.