ನಮಗೆ ಯಾರ ಸಹವಾಸವೂ ಬೇಡ – ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು
ರಾಮನಗರ: ರಾಜ್ಯದ ಜನರ ಆಶೀರ್ವಾದ ಕುಮಾರಣ್ಣನ ಮೇಲಿದ್ದರೆ 2018ರಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುತ್ತದೆ. ಅಧಿಕಾರಕ್ಕೆ ಬಂದರೆ ಕುಮಾರಣ್ಣನ ಚಿಂತನೆಗಳು ಸಾಕಾರಗೊಳ್ಳಲಿವೆ. ಮೊದಲು ರೈತರ ಸಾಲ ಮನ್ನಾ ಮಾಡುವುದು ಸೇರಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಪ್ಲಾನ್ ಇದೆ. ಆದರೆ, ಜೆಡಿಎಸ್ ಅಧಿಕಾರಕ್ಕೆ ಬರದಿದ್ದಲ್ಲಿ ನಾವು ವಿರೋಧ ಪಕ್ಷದಲ್ಲಿ ಕೂಡಲು ಸಿದ್ಧರಿದ್ದೇವೆ. ನಮಗೆ ಯಾರ ಸಹವಾಸವೂ ಬೇಡ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯವರನ್ನು ನೋಡಿದ್ದೇವೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳ ಬಳಿ ಸಾಕಷ್ಟು ಹಣ ಇದೆ. ಚುನಾವಣೆಗೆ ಸಾಕಷ್ಟು ಹಣ ಖರ್ಚು ಮಾಡಬಹುದು. ಆದರೆ, ನಾನು ಮಾತ್ರ ಖುದ್ದಾಗಿ ಜನರ ಮನೆ ಬಾಗಿಲಿಗೆ ಹೋಗಿ ಕೈ ಮುಗಿದು ಮತ ಕೇಳುತ್ತೇನೆ. ಮತದಾರರು ಜನಪರವಾಗಿರುವ, ಅಭಿವೃದ್ಧಿ ಪರವಾಗಿರುವ, ರೈತರ ಪರವಾಗಿರುವ ಜೆಡಿಎಸ್ ಪಕ್ಷಕ್ಕೆ ಮತಹಾಕಿ ಅಧಿಕಾರಕ್ಕೆ ತರಲಿ ಎಂದು ಹೆಚ್.ಡಿ.ದೇವೇಗೌಡರು ಹೇಳಿದರು.