ಜೆಡಿಎಸ್ ಪಕ್ಷ ಸಂಘಟನೆಯ ಸಂಕಲ್ಪ ತೊಟ್ಟಿರುವೆ – ನಿಖಿಲ್ ಕುಮಾರಸ್ವಾಮಿ
50 ಸಾವಿರ ಜೆಡಿಎಸ್ ಸದಸ್ಯತ್ವ ನೋಂದಣಿ ಗುರಿ

ಜೆಡಿಎಸ್ ಪಕ್ಷ ಬಲವರ್ಧನೆಯೇ ನನ್ನ ಗುರಿ – ನಿಖಿಲ್ ಕುಮಾರಸ್ವಾಮಿ
Yadgiri, ಶಹಾಪುರಃ ರಾಜ್ಯದಾದ್ಯಂತ ಚಿನ್ನದಂಥ ಕಾರ್ಯಕರ್ತರು ಜೆಡಿಎಸ್‌ನಲ್ಲಿದ್ದಾರೆ. ಬೇರಾವ ಪಕ್ಷದಲ್ಲಿ ಇಂತಹ ಪ್ರಾಮಾಣಿಕ ಕಾರ್ಯಕರ್ತರು ಸಿಗುವದು ಕಷ್ಟ. ಮುಂದೆ ನಾನು ಚುನಾವಣೆ ನಿಲ್ತೀನೋ ಬಿಡ್ತೀನೋ ಗೊತ್ತಿಲ್ಲ. ಆದರೆ ಪಕ್ಷದ ಬಲವರ್ಧನೆಯೇ ನನ್ನ ಗುರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದ ರಾಯಲ್ ಕನ್ವೆನ್ಷನ್ ಹಾಲ್ ನಲ್ಲಿ ಜೆಡಿಎಸ್ ಘಟಕ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣೆ ಸೋಲು ಒಂದು ಪಾಠ ಕಲಿಸಿದರೆ, ಗೆಲುವು ಹೆಚ್ಚಿನ ಜವಬ್ದಾರಿ ನೀಡಲಿದೆ. ಇವೆರಡನ್ನು ಸಮನಾಗಿ ಸ್ವೀಕರಿಸಿ ಸಾರ್ವಜನಿಕ ಜೀವನದಲ್ಲಿ ಸೇವೆ ಮುಂದುವರೆಸಬೇಕು. ನಂಬಿದ ಕಾರ್ಯಕರ್ತರ ನಂಬಿಕೆಗೆ ದ್ರೋಹವಾಗಬಾರದು. ಇಲ್ಲಿಂದಲೇ ಬೆಳೆದು ಬೇರೆ ಪಕ್ಷ ಸೇರಿ ಜೆಡಿಎಸ್‌ಗೆ ಚೂರಿ ಹಾಕಿದ್ದಾರೆ ಆದರೂ ಜೆಡಿಎಸ್ ಕುಗ್ಗಿಲ್ಲವೆಂದು ಪರೋಕ್ಷವಾಗಿ ಪ್ರಸ್ತುತ ಉಸ್ತುವಾರಿ ಮಂತ್ರಿಗಳಿಗೆ ತಿವಿದ ಅವರು, ಇಪ್ಪತ್ತು ಪ್ರತಿಶತ ಮತ ನಾವು ಪಡೆಯಲೇ ಬೇಕು. ಜನತಾದಳ ೨೦೨೮ ರಲ್ಲಿ ನಂ.೧ ಸ್ಥಾನ ಪಡೆಯಲಿದೆ. ಪ್ರಸ್ತುತ ನಾವು ಯಾಕೆ ಹೆಚ್ಚು ಸ್ಥಾನ ಪಡೆದಿಲ್ಲ ಎನ್ನುವ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.
ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಮಾನ್ವಿ ಮಾಜಿ ಶಾಸಕ ವೆಂಕಟಪ್ಪ ನಾಯಕ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳಿ, ಜೆಡಿಎಸ್ ಮಹಿಳಾ ಘಟಕದ ರಾಜ್ಯಧ್ಯಕ್ಷೆ ರಶ್ಮಿ, ರಾಜ್ಯ ವಕ್ತಾರೆ ಪೂರ್ಣಿಮಾ, ಕಲಬುರಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಯ್ಯ ಗುತ್ತೇದಾರ ಸೇರಿದಂತೆ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮುಖಂಡರಾದ ಮಲ್ಲಣ್ಣ ಮಡ್ಡಿ ಸಾಹು, ಲಾಲನಸಾಬ ಖರೇಶಿ, ಅತೀಕಸಾಬ ಸಿದ್ದಿಕಿ, ವಿಠಲ್ ವಗ್ಗಿ, ಶಿವಕುಮಾರ ಮೋಟಗಿ, ರಾಮಚಂದ್ರ ಕಾಶಿರಾಜ, ಶೇಖರ ದೊರೆ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಗಂಗಾಧರಮಠ, ಅಪ್ಪಣ್ಣ ದಶವಂತ, ಸತೀಶ ಪಂಚಭಾವಿ, ಸುನೀಲ್ ಗಣಾಚಾರಿ, ಮರೆಪ್ಪ ಪ್ಯಾಟಿ, ಅಮರೇಶ ವಿಭೂತಿಹಳ್ಳಿ, ಪಿಡ್ಡಪ್ಪ ನಂದಿಕೋಲ ಇತರರಿದ್ದರು. ಮುಂಚಿತವಾಗಿ ಸಿಬಿ ಕಮಾನ್‌ದಿಂದ ಫಂಕ್ಷನ್ ಹಾಲ್ ವರೆಗೆ ಬೈಕ್ ರ‍್ಯಾಲಿ ಜರುಗಿತು.
ಒಳ್ಳೆತನಕ್ಕೆ ಕಾಲ ಇದೆ ಎನ್ನೋದಕ್ಕೆ ಸೇರಿರುವ ಜನಗಳೇ ಸಾಕ್ಷಿ – ಗುರು ಪಾಟೀಲ್
ಶಹಾಪುರಃ ಸೋತ ಮೇಲೆ ನಾ ಹೊರಗ ಬಂದಿಲ್ಲ ಅಂತಾರೆ, ಹೊರಗ ಬಂದಿಲ್ಲ ಅಂದ್ರ ಇಂದು ಇಷ್ಟು ಜನ, ಕಾರ್ಯಕರ್ತರು ಬರ್ತಿದ್ರಾ, ನಾನು ಹಳೆ ರಾಜಕೀಯದಲ್ಲಿ ಇಲ್ಲಿದ್ದೀನಿ, ಹೊಸ ರಾಜಕೀಯ ಕಲ್ತಿಲ್ಲ, ರೊಕ್ಕ ಕೊಟ್ಟ ಇಲ್ಲಿ ನಾ ಜನ ಕರ್ಸಿಲ್ಲ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಮ್ಮ ಮನದಾಳದ ಮಾತನ್ನು ಹೊರ ಹಾಕಿದರು. ಒಳ್ಳೆದಕ್ಕೆ ಕಾಲ ಇದ್ದೇ ಇದೆ ಅಂತ ನೀವು ಹೇಳಿದ್ದೀರಿ. ನಾ ಅಂಜಿ ಹೋದವನಲ್ಲ. ನನ್ನ ತಂದೆ ರಾಜಕೀಯಕ್ಕೆ ಬರಬೇಡ ಅಂದಿದ್ರು ಆದರೆ ನಿಮ್ಮ ಪ್ರೀತಿಗೆ ಮಣಿದು ರಾಜಕೀಯಕ್ಕೆ ಬಂದು ಶಾಸಕನಾಗಿದ್ದೆ ಐದು ವರ್ಷ ಹಗಲು ರಾತ್ರಿ ಸೇವೆ ಮಾಡಿದ್ದೇನೆ.
ಆದರೆ ಮುಂದೆ ಸೋಲು ಕಂಡಿದ್ದೇನೆ, ಹೊರಗ ಬಂದಿಲ್ಲ ಆದರೆ ಕಾರ್ಯಕರ್ತರ ನಿರಂತರ ಸಂಪರ್ಕದಲ್ಲಿದ್ದೇನೆ, ನಾ ಪೋನ್ ಕಾಲ್ ಮಾಡಿದಾಗ ಬರ್ತಿವಿ ಅಂತ ಹೇಳಿ ಬಂದಿದ್ದಾರೆ ಹೊರತು ಯಾರೂ ಗಾಡಿ, ಪೆಟ್ರೋಲ್, ಡಿಸೇಲ್ ಏನು ಕೇಳಿಲ್ಲ ಕೈಯಿಂದ ಖರ್ಚು ಮಾಡಿ ಬಂದಿದ್ದಾರೆ ಇದು ನೋಡಿದರೆ ರಾಜಕೀಯದಿಂದ ದೂರ ಹೋಗಬೇಕೆಂದಿದ್ದ ನನಗೆ ಮತ್ತೆ ರಾಜಕೀಯದಲ್ಲಿ ದಿಟ್ಟ ಹೆಜ್ಜೆ ಇಡಬೇಕೆನಿಸುತ್ತಿದೆ. ನಮ್ಮ ಶಹಾಪುರದಲ್ಲಿ ಹೆಚ್ಚಿನ ಸದಸ್ಯತ್ವ ಮಾಡೋಣ ಎಂದು ಹುಮ್ಮಸ್ಸು ಹೊರ ಹಾಕಿದರು.