ಜೆಡಿಎಸ್ ಬಂಡಾಯ ಶಾಸಕರಿಗೆ ರಾಹುಲ್ ‘ಕೈ ಮಂತ್ರ’ : ಕಾಂಗ್ರೆಸ್ಸಿಗೆ ಏಳು-ಗೋಳು?
-ಮಲ್ಲಿಕಾರ್ಜುನ ಮುದನೂರ್
ಬೆಂಗಳೂರು : ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಇಂದು ಮತ್ತು ನಾಳೆ ಮೈಸೂರು ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ರಾಹುಲ್ ನೇತೃತ್ವದಲ್ಲಿ ಸಿಎಂ ತವರು ಮೈಸೂರಿನಲ್ಲಿ ಜನಾಶೀರ್ವಾದ ಕಾರ್ಯಕ್ರಮದ ಮೂಲಕ ಮತಬೇಟೆಗೆ ಕೈ ಪಡೆ ಕಸರತ್ತು ನಡೆಸುತ್ತಿದೆ. ಇದೇ ವೇಳೆ ಜೆಡಿಎಸ್ ನ ಏಳು ಜನ ಬಂಡಾಯ ಶಾಸಕರು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ.
ಇಂದು ಜೆಡಿಎಸ್ ಬಂಡಾಯ ಶಾಸಕರು ಸ್ಪೀಕರ್ ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ನಾಳೆ ಮೈಸೂರಿನಲ್ಲಿ ನಡೆಯಲಿರುವ ಜನಾಶೀರ್ವಾದ ಕಾರ್ಯಕ್ರಮದಲ್ಲಿ ರಾಹುಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಆ ಮೂಲಕ ಜೆಡಿಎಸ್ ಬಂಡಾಯ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಆಗಲಿದೆ ಎನ್ನಲಾಗಿದೆ.
ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ ಅವರಿಗೆ ನಾಗಮಂಗಲದಿಂದ, ಹೆಚ್.ಸಿ.ಬಾಲಕೃಷ್ಣ ಅವರಿಗೆ ಮಾಗಡಿ ಕ್ಷೇತ್ರದಿಂದ, ರಮೇಶ್ ಬಂಡಿ ಸಿದ್ದನಗೌಡ ಅವರಿಗೆ ಶ್ರೀರಂಗಪಟ್ಟಣದಿಂದ, ಇಕ್ಬಾಲ್ ಅನ್ಸಾರಿ ಅವರಿಗೆ ಗಂಗಾವತಿಯಿಂದ, ಅಖಂಡ ಶ್ರೀನಿವಾಸ್‍ಮೂರ್ತಿ ಅವರಿಗೆ ಪುಲಕೇಶಿನಗರದಿಂದ, ಜಮೀರ್ ಅಹ್ಮದ್ ಖಾನ್ ಅವರಿಗೆ ಚಾಮರಾಜಪೇಟೆಯಿಂದ, ಭೀಮನಾಯಕ್ ಅವರಿಗೆ ಹಗರಿ ಬೊಮ್ಮನ ಹಳ್ಳಿಯಿಂದ ಕಾಂಗ್ರೆಸ್ ಅಬ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಜೆಡಿಎಸ್ ಪಕ್ಷ ಬಿಜೆಪಿಯ ಬಿಟೀಮ್ ಎಂದು ಇತ್ತೀಚೆನ ಹಾಸನ ಪ್ರವಾಸದಲ್ಲಿ ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನಿಮ್ಮ ಮುಖ್ಯಮಂತ್ರಿಗಳ ಮೂಲ ಯಾವುದು ತಿಳಿದುಕೊಳ್ಳಿ. ಜೆಡಿಎಸ್ ಒಡೆದು ಕರ್ನಾಟಕ ಕಾಂಗ್ರೆಸ್ ಕಟ್ಟಿದ್ದೀರಿ ಎಂದು ಹೇಳಿದ್ದರು. ಇದೀಗ ರಾಹುಲ್ ಗಾಂಧಿ ನೇತೃತ್ವದಲ್ಲೇ ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಹೀಗಾಗಿ, ಜೆಡಿಎಸ್ ನಾಯಕರು ರಾಹುಲ್ ಗಾಂಧಿಗೆ ಯಾವ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಜೆಡಿಎಸ್ ಬಂಡಾಯ ಶಾಸಕರು ಕೈಪಡೆ ಸೇರುವುದು ಕಾಂಗ್ರೆಸ್ ಗೆ ವರವಾಗಲಿದೆಯೇ ಅಥವಾ ಶಾಪವಾಗಲಿದೆಯೇ ಎಂಬ ಲೆಕ್ಕಾಚಾರ ಶುರುವಾಗಿದೆ. ದೇವೇಗೌಡರ ಬಲದ ಮೇಲೆಯೇ ಮೈಸೂರು ಭಾಗದ ಬಹುತೇಕ ಜೆಡಿಎಸ್ ಶಾಸಕರು ಗೆಲ್ಲುತ್ತಾರೆ. ಆದರೆ, ಇದೀಗ ದೇವೇಗೌಡರಿಗೆ ಸೆಡ್ಡು ಹೊಡೆದು ಕಾಂಗ್ರೆಸ್ಸಿನಿಂದ ಕಣಕ್ಕಿಳಿಯುತ್ತಿರುವವರಿಗೆ ಗೆಲುವು ಸುಲಭವಲ್ಲ. ಬಂಡಾಯ ಶಾಸಕರ ವಿರುದ್ಧ ಗರಂ ಆಗಿರುವ ಗೌಡರು ತಮ್ಮದೇ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಬಂಡಾಯವೆದ್ದವರಿಗೆ ಸೋಲಿನ ರುಚಿ ತೋರಿಸುವ ಶಪಥ ಮಾಡಿದ್ದಾರೆ.
ಜೆಡಿಎಸ್ ಪಕ್ಷವನ್ನು ಮುಗಿಸುವ ಹುನ್ನಾರದಲ್ಲಿ ಕಾಂಗ್ರೆಸ್ ತೊಡಗಿದೆ ಎಂಬ ಸಂದೇಶ ಬೆಂಗಳೂರು, ಮೈಸೂರು ಭಾಗದಲ್ಲಿ ಕಾಂಗ್ರೆಸ್ಸಿಗೆ ಶಾಪವಾಗಿ ಜೆಡಿಎಸ್ ಗೆ ಅನುಕಂಪವಾಗಿ ಪರಿಣಮಿಸಿದರೂ ಆಶ್ಚರ್ಯಪಡಬೇಕಿಲ್ಲ ಎಂಬ ವಾದವೂ ಕೇಳಿ ಬರುತ್ತಿದೆ. ಹೀಗಾಗಿ, ಏಳು ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆ ಕಾಂಗ್ರೆಸ್ ಪಾಲಿಗೆ ಏಳ್ಗೆ ಆಗುತ್ತದೋ ಅಥವಾ ಗೋಳು ಆಗುತ್ತದೆಯೋ ಕಾದು ನೋಡಬೇಕಿದೆ.