ಶಹಾಪುರ: ಜೀವೇಶ್ವರ ನಗರದಲ್ಲಿ ಸಾಂಸ್ಕೃತಿಕ ಗಣೇಶೋತ್ಸವ, ಶ್ರೀಗಳ ಶ್ಲಾಘನೆ
ಶಹಾಪುರ: ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆಗೆ ತಂದವರು ಸ್ವಾತಂತ್ರ್ಯ ಸೇನಾನಿ ಬಾಲಗಂಗಾಧರನಾಥ ತಿಲಕ ಅವರು, ಅಂದು ಸ್ವಾತಂತ್ರ್ಯ ಪಡೆಯುವದಕ್ಕಾಗಿ ಸಂಘಟನೆ ರೂಪಿಸಲು ಗಣೇಶ ಉತ್ಸವ ಆಚರಣೆಗೆ ತಂದಿದ್ದರು ಎಂದು ನಗರದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ಹೇಳಿದರು. ನಗರದ ಜೀವೇಶ್ವರ ಬಡಾವಣೆಯಲ್ಲಿ ಗಣೇಶೋತ್ಸವ ಅಂಗವಾಗಿ ಶಿವಾಜಿ ತರುಣ ಸಂಘ ಆಯೋಜಿಸಿದ್ದ ಸಂಗೀತ ರಸಮಂಜರಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂದು ಸ್ವಾತಂತ್ರ್ಯ ಸಂಗ್ರಾಮದ ಸಂಘಟನೆಗಾಗಿ ಗಣೇಶೋತ್ಸವ ಹುಟ್ಟಿಕೊಂಡಿತ್ತು. ಹಲವಾರು ವೀರಪುತ್ರರ ಬಲಿದಾನದ ವರವಾಗಿ ನಮ್ಮ ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾಯಿತು. ಈಗಲೂ ಗಣೇಶೋತ್ಸವ ಮುಂದುವರೆಸಿಕೊಂಡು ಹೋಗುವ ಮೂಲಕ ಸಕರಾತ್ಮಕ ವರ ಪಡೆಯಬೇಕಿದೆ. ಸರ್ವರೂ ಒಗ್ಗಟ್ಟಾಗಿ ದೇಶದ ಸುಭದ್ರತೆ, ಏಳ್ಗೆಗೆ ಶ್ರಮಿಸಬೇಕಿದೆ. ಗಣೇಶ ಪ್ರತಿಷ್ಠಾಪನೆ ಮೂಲಕ ನಿತ್ಯ ದೈವ ಪೂಜಿಸುವುದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರಿಗೆ, ಪ್ರತಿಭಾವಂತರಿಗೆ ಪ್ರೋತ್ಸಾಹಿಸುವ ಕೆಲಸ ಹೆಚ್ಚಾಗಬೇಕಿದೆ. ಆಯಾ ಬಡಾವಣೆಯ ಜನರು ಒಂದೆಡೆ ಸೇರಿ ಮನೋರಂಜನೆಯ ಜತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಸಂಘಟಿತರಾಗಿ ಎಲ್ಲರೂ ಒಂದೇ ಎಂಬ ಭಾವನೆ ಮೂಡುವ ಕೆಸಲವಾಗಬೇಕು.
ಕೆಲವು ಕಡೆ ಯುವಕರು ಗಣೇಶ ಮಂಡಳಿ ಕಟ್ಟಿಕೊಂಡು ಬರೀ ಕುಡಿದು, ತಿಂದು ಕುಪ್ಪಳಿಸುವ ಮೂಲಕ ಗಣೇಶೋತ್ಸವಕ್ಕೆ ಅಪವಾದ ತರುತ್ತಿದ್ದಾರೆ. ಆದರೆ, ಶಿವಾಜಿ ಯುವಕ ಸಂಘ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸುತ್ತಿದೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಗೌರವಾದರ ನೀಡುವ ಮೂಲಕ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಇಂತಹ ಉತ್ಸವಗಳಲ್ಲಿ ಯುವಕರಲ್ಲಿ ಒಗ್ಗಟ್ಟು ಮೂಡುತ್ತದೆ, ಉತ್ತಮ ಬಾಂಧ್ಯವ ಬೆಳೆಯುತ್ತದೆ. ಯುವಕರು ತಮ್ಮ ವಿವೇಚನೆಯಿಂದ ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತಾರೆ. ಪರಿಣಾಮ ಅವರ ಕಲಾ ಕೌಶಲ್ಯವೂ ವಿಕಸನವಾಗುತ್ತದೆ. ನಾಲ್ಕಾರು ಜನರ ಜತೆ ಬೆರೆಯುತ್ತಾರೆ. ಹೌದು- ಅಲ್ಲಗಳನ್ನು ಅರಿತು ಅವರೂ ಬೆಳೆಯುತ್ತಾರೆ. ಉತ್ತಮವಾದುದನ್ನು ಗ್ರಹಿಸಿಕೊಂಡು ಬೆಳೆಯಲು ಯುವಪೀಳಿಗೆಗೆ ಇಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಸರ್ವ ಜಾತಿ, ಜನಾಂಗವದವರು ಒಂದೇ ಎಂಬ ಭಾವನೆಯು ಇಂಥ ಉತ್ಸವಗಳಿಂದ ಮೂಡುತ್ತದೆ ಎಂದರು. ಶಿವಾಜಿ ಯುವಕ ಸಂಘ ಇನ್ನು ಹೆಚ್ಚಿನ ಸಮಾಜಮುಖಿ ಕಾರ್ಯ ಮಾಡಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಸ್ವಕುಳ ಸಾಳಿ ಸಮಾಜದ ಹಿರಿಯ ಮುಖಂಡ ಮಲ್ಲಯ್ಯ ಸಾಹು ಫಿರಂಗಿ, ರವಿ ದಂಡು, ಪುರಸಭೆ ಮಾಜಿ ಅಧ್ಯಕ್ಷ ರಾಯಪ್ಪ ಸಾಲಿಮನಿ, ಸತೀಶ ಮಿರ್ಜಿ, ಮಕ್ಕಳ ತಜ್ಞ ಡಾ.ವೆಂಕಟೇಶ ಟೊಣಪೆ ಉಪಸ್ಥಿತರಿದ್ದರು. ಯುವಕ ಸಂಘದ ಅಧ್ಯಕ್ಷ ಆದೇಶ ಧನವಾಡ, ಸಂತೋಶ ಧನವಾಡ, ಮಲ್ಲು ಚಿಲ್ಲಾಳ, ರವಿಕುಮಾರ ಸರೋಧೆ, ಅಶೋಕ ಚಿಲ್ಲಾಳ, ಮಹೇಶ ಚಿಲ್ಲಾಳ, ಮಹೇಶ ಫಿರಂಗಿ, ಪ್ರದೀಪ ದಂಡು, ಮಲ್ಲಿಕಾರ್ಜುನ ಪಟ್ಲೆಗಾರ, ಸಂಜು ಚಿಲ್ಲಾಳ, ಕೃಷ್ಣಾ ಚಿಲ್ಲಾಳ ಭಾಗವಹಿಸಿದ್ದರು. ಸ್ಥಳೀಯ ಎಸ್.ವಿ.ಎನ್.ಡ್ಯಾನ್ಸ್ ಅಕಾಡಮಿ ತಂಡ ಮತ್ತು ಅಕ್ಷಯ್ ಮೆಲೋಡಿಯಸ್ ನಿಂದ ಸಾಂಸ್ಕೃತಿಕ ಹಾಡು, ನೃತ್ಯ ಕಾರ್ಯಕ್ರಮಗಳು ಜರುಗಿದವು. ವಿಶೇಷವಾಗಿ ಸಗರನಾಡಿನ ಕಲಾವಿದ, ಚಿತ್ರನಟ ಅನೀಲ್ ನಾಯಕ ಅವರಿಂದ ಹಲವು ನಟರ ಡೈಲಾಗ್ ಪ್ರದರ್ಶನವು ಗಮನ ಸೆಳೆಯಿತು. ಶಿಕ್ಷಕ, ಸಾಹಿತಿ ಅಶೋಕ ಚೌದ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.