ಸಂಘಟನೆ ವೇಳೆ ಸಮಸ್ಯೆಗಳು ಉದ್ಭವ ಸಾಮಾನ್ಯ-ದರ್ಶನಾಪುರ
ಭಗವಾನ್ ಜೀವೇಶ್ವರ ಜಯಂತ್ಯುತ್ಸವ
ಯಾದಗಿರಿ, ಶಹಾಪುರಃ ಯಾವುದೇ ಸಮಾಜ, ಸಂಘ ಸಂಘಟನೆ ಮಾಡುವಾಗ ಹಲವಾರು ಸಮಸ್ಯೆಗಳು ಉದ್ಭವವಾಗುವುದು ಸಹಜ. ಅವುಗಳನ್ನೆಲ್ಲ ಮೆಟ್ಟಿ ನಿಲ್ಲುವ ಮೂಲಕ ಸಮಾಜದ ಅಭಿವೃದ್ಧಿಗೆ ಆತ್ಮಸಾಕ್ಷಿಯೊಂದಿಗೆ ಉತ್ತಮ ಕಾರ್ಯಕೈಗೊಂಡಾಗ ಮಾತ್ರ ಸಮಾಜದ ಸಂಘಟನೆ ಸಾಧ್ಯ ಎಂದರು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಸ್ವಕುಳ ಸಾಳಿ ಸಮಾಜ ಜೀವೇಶ್ವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಉತ್ತಮ ಸಂಘಟನೆ ಮಾಡುವಾಗ ಕೆಲವರು ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುವರು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಂಘಟನೆ ಮುಂದುವರೆಸಬೇಕು. ಸಮಾಜದ ಅಭಿವೃದ್ಧಿಗೆ ಬೇಕಾದ ಯಾರಾದರೂ ಶ್ರಮವಹಿಸಬಹುದು. ಅದು ಒಳ್ಳೆಯ ಕಾರ್ಯಕ್ರಮವಾಗಿದ್ದರೆ ತಾನಾಗಿಯೇ ಎಲ್ಲರೂ ಸಹಕರಿಸಲಿದ್ದಾರೆ.
ತಾಲೂಕಿನಲ್ಲಿ ಸ್ವಕುಳ ಸಾಳಿ ಸಮಾಜ ಕಳೆದ 20-25 ವರ್ಷಗಳಿಂದಲೂ ಸಂಘಟಿತರಾಗಿ ಎಲ್ಲಾ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೆ ಉಳಿದ ಸಮಾಜಗಳಿಗಿಂತ ಉತ್ತಮ ಸಂಘಟನೆ ಹೊಂದಿದ್ದು, ಸಮಾಜದ ಮಕ್ಕಳ ಪ್ರತಿಭೆ ಗುರುತಿಸುವುದು ಸೇರಿದಂತೆ ಶೈಕ್ಷಣಿಕ ಪ್ರತಿಭೆಗಳಿಗೆ ಮತ್ತು ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಸುವ ಮೂಲಕ ಸಮಾಜದ ಯುವ ಸಮುದಾಯಕ್ಕೆ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿರುವುದು ಸಮಾಜದ ಬೆಳವಣಿಗೆಗೆ ಕಾರಣವಾಗಲಿದೆ.
ಮನುಷ್ಯನಿಗೆ ಸಮಾಜ ಏನು ಮಾಡಿದೆ ಎಂಬುದಕ್ಕಿಂತ ಸಮಾಜಕ್ಕೆ ತಾನೂ ಯಾವ ಕೊಡುಗೆ ನೀಡಿದೆ ಎಂಬುದನ್ನು ಅರಿಯಬೇಕಿದೆ ಎಂದರು.
ಸಾನಿಧ್ಯವಹಿಸಿದ್ದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ಮಾತನಾಡಿ, ಸಮಾಜವನ್ನು ಮುನ್ನಡೆಸುವಾಗ ಒಳಿತು ಮಾಡಿದರೂ ಎರಡು ಮಾತು ಬರುವುದು ಸಹಜ, ಅಂತಹ ಟೀಕೆಗಳಿಗೆ ಮಹತ್ವ ನೀಡಬೇಕಿಲ್ಲ. ಅಂದವರು ನಮ್ಮವರೇ ಎಂದು ಎಲ್ಲವೂ ಮರೆತು ತಾವು ಹಾಕಿಕೊಂಡಿರುವ ಕಾರ್ಯಕ್ರಮ ಉತ್ತಮವಾಗಿದ್ದಲ್ಲಿ ಎಡಬಿಡದೆ ಅದನ್ನು ಮುಗಿಸುವ ಧಾವಂತ ಹೊಂದಿರಬೇಕು. ಉತ್ತಮ ಕಾರ್ಯ ಪೂರ್ಣಗೊಂಡಾಗ ಜನರಿಗೆ ಅದರ ಬಗ್ಗೆ ತಿಳಿಯಲಿದೆ. ಆಗ ಕಾರ್ಯಕ್ರಮದ ಯಶಸ್ಸಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ.
ಶಹಾಪುರದಲ್ಲಿ ಸ್ವಕುಳ ಸಮಾಜ ಉತ್ತಮ ಕಾರ್ಯ ಮಾಡುತ್ತಾ ಬಂದಿದೆ. ಮೊದಲಿಂದಲೂ ಪ್ರತಿ ವರ್ಷ ನಿರಂತರವಾಗಿ ಜಯಂತಿ ಆಗಿರಬಹುದು ಗಣೇಶ ಉತ್ವಸ ಆಗಿರಬಹುದು ಎಲ್ಲವೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದೆ. ಸಾಕಷ್ಟು ಸಮಾಜಗಳು ಸಂಘಟನೆ ಮಾಡುತ್ತಿವೆ.
ಆದರೆ ನಿರಂತರವಾಗಿ ಸಂಘಟನೆ ಮಾಡಲು ಆಗುತ್ತಿಲ್ಲ. ನಿಮ್ಮದು ಅವೆಲ್ಲಕ್ಕಿಂತ ಮಿಗಿಲಾಗಿದ್ದು, ಉತ್ತಮ ಸಂಘಟನೆಯೊಂದಿಗೆ ಸಮಾಜದ ಬೆಳವಣಿಗೆ ಸದಾ ಸ್ಪಂಧಿಸುವ ಸಮಾಜ ನಿಮ್ಮದಾಗಿದೆ. ಮತ್ತು ಎಲ್ಲರೊಂದಿಗೆ ಪ್ರೀತಿ ವಿಶ್ವಾಸವನ್ನು ಗಳಿಸಿದ ಸಮಾಜ ಯಾವುದಾದರೂ ಇದ್ದರೆ ಅದು ಸ್ವಕುಳ ಸಾಳಿ ಸಮಾಜ ಎಂದರೆ ತಪ್ಪಿಲ್ಲ.
ಯುವಕರು ಯುವತಿಯರು ಮಕ್ಕಳು ಸೇರಿದಂತೆ ಹಿರಿಯರು ಮಹಿಳೆಯರು ಎಲ್ಲರೂ ಒಗ್ಗಟ್ಟಾಗಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗಿಯಾಗಿರುವುದು ಕಂಡು ತುಂಬಾ ಸಂತೋಷ ಎನಿಸುತ್ತಿದೆ. ಮತ್ತೊಂದು ಸಂಘಟಕರಿಗೆ ನಿಮ್ಮ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಸಮಾಜದ ಅಧ್ಯಕ್ಷ ಸಿದ್ಧಣ್ಣ ಮಾಸ್ತರ ಶಿರವಾಳ ಅಧ್ಯಕ್ಷತೆವಹಿಸಿದ್ದರು. ಮುಖಂಡ ಹಣಮಂತ್ರಾಯ ಹಳಿಸಗರ, ಜನಾರ್ಧನ ಮಾನು, ಪತ್ರಕರ್ತ ಮಲ್ಲಿಕಾರ್ಜುನ ಮುದನೂರ, ಯುವ ಮುಖಂಡ ರಾಜಕುಮಾರ ಚಿಲ್ಲಾಳ ಉಪಸ್ಥಿತರಿದ್ದರು. ಸುರೇಖಾ ಏಕಬೋಟೆ ಮತ್ತು ಲಕ್ಷ್ಮೀ ಫಿರಂಗಿ ನಿರೂಪಿಸಿದರು. ಜಯಂತಿ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪದಕ, ಕಪ್‍ಗಳನ್ನು ವಿತರಿಸಲಾಯಿತು.
ಮುಖಂಡರಾದ ಮಲ್ಲಯ್ಯ ಫಿರಂಗಿ, ರಾಮು ಮಿರ್ಜಿ, ತಿಪ್ಪಣ್ಣ, ಸತೀಶ ಮಿರ್ಜಿ, ನಂದು ಚಿಲ್ಲಾಳ, ಸಂತೋಷ ಮಾನು, ಮಲ್ಲಿಕಾರ್ಜುನ, ಅಶೋಕ ಸೇರಿದಂತೆ ಇತರರು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.