ಜಾರ್ಖಂಡ ಚುನಾವಣೆಃ ನಕ್ಸಲ್ ಪೀಡಿತ ಪ್ರದೇಶದಲ್ಲಿ ಗಲಾಟೆ ಓರ್ವ ಹತ
ಜಾರ್ಖಂಡ್: ರಾಜ್ಯದಲ್ಲಿ ಶನಿವಾರ ನಡೆದ ಎರಡನೇ ಹಂತದ ವಿಧಾನಸಭೆಯ ಮತದಾನದಲ್ಲಿ ಶೇ. 63 ರಷ್ಟು ಮತದಾನವಾಗಿದೆ ಎಂದು ಜಾರ್ಖಂಡ ರಾಜ್ಯದ ಚುನಾವಣೆ ಆಯೋಗ ತಿಳಿಸಿದೆ.
ಜಾರ್ಖಂಡ್ನ 7 ಜಿಲ್ಲೆಯ 20 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಎರಡನೇ ಹಂತದ ವಿಧಾನಸಭೆ ಮತದಾನವು ಹಿಂಸಾಚಾರದೊಂದಿಗೆ ತೆರೆ ಬಿದ್ದಿದೆ ಎನ್ನಬಹುದು.
ಇಲ್ಲಿಮ ನಕ್ಸಲ್ ಪೀಡಿತ ಗುಮ್ಲಾ ಜಿಲ್ಲೆಯ ಸಿಸಾಯ್ ಕ್ಷೇತ್ರದಲ್ಲಿ ಶನಿವಾರ ಜನರು ಭದ್ರತಾ ಸಿಬ್ಬಂದಿಯಿಂದ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಮುಂದಾಗುತ್ತಿದ್ದಂತೆ ಪೊಲೀಸರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಅಲ್ಲದೆ, ಪೊಲೀಸ್, ಪತ್ರಕರ್ತ ಸೇರಿ ಮೂವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.
ಅಲ್ಲದೆ ಚುನಾವಣಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್ ವೊಂದಕ್ಕೆ ಚಾಯಿಬಾಸಾ ಸಮೀಪದಲ್ಲಿ ನಕ್ಸಲರು ಬೆಂಕಿ ಹಚ್ಚಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನೊಂದಡೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಹಲ್ಲೆ ಮಾಡಿದ ಆರೋಪದ ಮೇಲೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಅರೆಸ್ಟ್ ಆದ ಘಟನೆಯು ನಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸಮರ್ಪಕ ಮಾಹಿತಿಯನ್ನು ರಾಜ್ಯದ ಪೊಲೀಸ್ ಇಲಾಖೆ ಅಧಿಕೃತ ಪ್ರಕಟಣೆ ನೀಡಬೇಕಿದೆ.