ಭ್ರಷ್ಟ ಬಿಇಓ ಇನಾಂದಾರ ಅಮಾನತಿಗೆ ಆಗ್ರಹಿಸಿ ಅನಿರ್ಧಿಷ್ಟ ಧರಣಿ
ಭ್ರಷ್ಟ ಅಧಿಕಾರಿ ಬಿಇಓ ಅಮಾನತಿಗೆ ಖಾಸಗಿ ಶಾಲಾ ಒಕ್ಕೂಟ ಆಗ್ರಹ
ಯಾದಗಿರಿಃ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್‍ಟಿಇ ಯೋಜನೆಯಡಿ ಸಂದಾಯವಾಗಬೇಕಿದ್ದ ಅನುದಾನ ಬಿಡುಗಡೆಗೊಳಿಸಲು ಪ್ರತಿ ಶಾಲೆಯಿಂದ ಶೇ.7 ರಷ್ಟು ಲಂಚ ಕೇಳುತ್ತಿರುವದಲ್ಲದೆ, ಶಾಲಾ ನವೀಕರಣಕ್ಕೂ 25 ಸಾವಿರ ರೂ. ಲಂಚ ಪಡೆಯುತ್ತಿರುವ ಶಹಾಪುರ ಬಿಇಓ ವೆಂಕಯ್ಯ ಇನಾಂದಾರ ಜಿಲ್ಲೆಯಲ್ಲಿಯೇ ಕಡು ಭ್ರಷ್ಟ ಅಧಿಕಾರಿಯಾಗಿದ್ದು, ಇಂತಹ ಲಂಚಕೋರರನ್ನು ಕೂಡಲೇ ಅಧಿಕಾರದಿಂದ ಕಿತ್ತೆಸೆಯಬೇಕು ಎಂದು ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಆರ್.ಚನ್ನಬಸು ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಬಿಇಓ ಕಚೇರಿ ಎದುರು ಕ್ಷೇತ್ರ ಶಿಕ್ಷಣ ಅಧಿಕಾರಿ ವೆಂಕಯ್ಯ ಇನಾಂದಾರ ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟ ಆರಂಭಿಸಿದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿನ ಪ್ರತಿ ಶಾಲೆಯಿಂದ ಬಿಇಓ ವೆಂಕಯ್ಯ ಇನಾಂದರ ನೀಡಿದ ಆದೇಶದಂತೆ ಹಣ ನೀಡದಿದ್ದರೆ ಆ ಶಾಲೆಗೆ ನಿರಂತರ ಕಿರುಕುಳ ಆರಂಭಿಸುತ್ತಾರೆ. ತಾಲೂಕಿನಲ್ಲಿ ಅಂದಾಜು 125 ಶಾಲೆಗಳಿದ್ದು, ಪ್ರತಿ ಶಾಲೆಯಿಂದ 25 ಸಾವಿರ ರೂ.ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ನಿಮ್ಮ ಶಾಲೆಯಲ್ಲಿ ಸಮರ್ಪಕ ಮೂಲ ಸೌಲಭ್ಯವಿಲ್ಲವೆಂದು ವರದಿ ನೀಡುವೆ ಎಂದು ಭಯವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಶಿಕ್ಷಕ, ಹಾಗೂ ಶಿಕ್ಷಕಿಯರಿಗೂ ಸಾಕಷ್ಟು ತೊಂದರೆ ನೀಡುತ್ತಿದ್ದು, ಪ್ರಸ್ತುತ ಕೆಲವು ಹಿಂಬಾಲಕರಿಂದ ತನ್ನ ಮೇಲೆ ದಾಖಲಾದ ಪ್ರಕರಣ ಸುಳ್ಳಿದೆ ಎಂದು ಅವರಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಪತ್ರಿಕೆಯಲ್ಲಿ ಬರುವಂತೆ ನೋಡಿಕೊಂಡು ತಾಲೂಕಿನಲ್ಲಿ ಗೊಂದಲು ಮೂಡಿಸು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೊಮ್ಮೆ ಇದೇ ಬಿಇಓ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಅದರ ವಿಚಾರಣೆ ನ್ಯಾಯಾಲಯದ ಹಂತದಲ್ಲಿದ್ದು, ಪ್ರಸ್ತುತ ಇನ್ನೊಂದು ಪ್ರಕರಣ ದಾಖಲಾಗಿದೆ. ಇದು ಎರಡನೇ ಪ್ರಕರಣವಾಗಿದ್ದು, ಬಿಇಓ ಅವರ ಭಯದಿಂದ ಅನೇಕರು ಅವರ ವಿರುದ್ಧ ನಿಲ್ಲಲಾಗದೆ ಸಾಕಷ್ಟು ತೊಂದರೆ ಅನಭವಿಸುತ್ತಿರುವ ಶಿಕ್ಷಕ ಶಿಕ್ಷಕಿಯರು ನೂರಾರು ಸಂಖ್ಯೆಯಲ್ಲಿದ್ದಾರೆ. ಬಿಇಓ ಅವರ ಕಿರುಕುಳ ತಾಳಲಾರದೆ ನೋವು ಅನುಭವಿಸುತ್ತಿದ್ದಾರೆ. ಕಾರಣ ಬಿಇಓ ಇನಾಂದಾರ ವರನ್ನು ತಕ್ಷಣ ಅಮಾನತುಗೊಳಿಸಬೇಕು. ಮತ್ತು ವಿಚಾರಣೆ ಸಮಿತಿ ನೇಮಿಸಬೇಕೆಂದು ಒತ್ತಾಯಿಸಿದರು.
ಬಿಇಓ ಅವರಿಂದ ದೌರ್ಜನ್ಯಕ್ಕೆ ಒಳಗಾದವರು ಹೆದರಬೇಡಿ, ಅನ್ಯಾಯವಾಗಿದ್ದಲ್ಲಿ ನಮ್ಮ ಜೊತೆ ಕೈಜೋಡಿಸಿ ಇನಾಂದಾರ ಅದೇನು ಮಾಡುತ್ತಾರೆ ನಾನು ನೋಡುತ್ತೇನೆ. ಅನ್ಯಾಯದ ವಿರುದ್ಧ ಮಾತನಾಡಲು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಉಪಾಧ್ಯಕ್ಷ ರಾಮು ಸಗರ, ಕಾರ್ಯದರ್ಶಿ ಅಶೋಕ ಘನಾತೆ, ಸುಧಾಕರ ಕುಲಕರ್ಣಿ, ಹೊನ್ನಪ್ಪ ಗಂಗನಾಳ, ಸತ್ಯಂ, ಸಾಯಬಣ್ಣ ಪುರ್ಲೆ, ಮೂರ್ತಿ ಮುದ್ಗಲ್, ಭೀಮಣ್ಣಗೌಡ ಪಾಟೀಲ್, ಪ್ರವೀಣ ಫಿರಂಗಿ,ಶರಣಪ್ಪ ಕೊಂಬಿನ್, ಚಿದಾನಂದ ಬಡಿಘೇರ, ವಿರುಪಾಕ್ಷಯ್ಯ ಮಠ, ಸಂಗನಬಸಪ್ಪ ಮುಡಬೂಳ, ಮಲ್ಲಯ್ಯ ಹತ್ತಿಗೂಡೂರ ಸೇರಿದಂತೆ ಇತರರು ಭಾಗವಹಿಸಿದ್ದರು.