ಹಾರಣಗೇರಾದಲ್ಲಿ ಸಂಭ್ರಮದ ನಂದಿಬಸವೇಶ್ವರ ರಥೋತ್ಸವ
ದರ್ಶನ ಪಡೆದ ಶಾಸಕ ದರ್ಶನಾಪುರ
ಶಹಾಪುರ: ತಾಲೂಕಿನ ಹಾರಣಗೇರಾ ಗ್ರಾಮದಲ್ಲಿ ಶ್ರೀ ನಂದಿ ಬಸವೇಶ್ವರರ 2 ನೇ ವರ್ಷದ ಜಾತ್ರಾಮಹೋತ್ಸವ ಅಂಗವಾಗಿ ಶನಿವಾರ ಸಂಜೆ ಸಂಭ್ರಮದ ರಥೋತ್ಸವ ಜರುಗಿತು.
ಜಾತ್ರೆ ಅಂಗವಾಗಿ ಭಕ್ತಾಧಿಗಳು ಬೆಳಗ್ಗೆಯಿಂದಲೇ ನಂದಿಬಸವೇಶ್ವರರ ಮೂರ್ತಿಗೆ ನೈವೇದ್ಯ, ಕಾಯಿ ಕರ್ಪೂರ ಅರ್ಪಿಸಿ ದರ್ಶನ ಪಡೆದರು.
ಸಂಜೆ ರಥೋತ್ಸವಕ್ಕೆ ಬೋರಗಿಪುರದಾಳದ ವಿಶ್ವರಾಧ್ಯಮಠದ ಮಹಾಲಿಂಗೇಶ್ವರ ಸ್ವಾಮಿಗಳ ರಥೋತ್ವಕ್ಕೆ ಚಾಲನೆ ನೀಡಿದರು. ಸೇರಿದ್ದ ಜನರು ನಂದಿಬಸವೇಶ್ವರ ಮಹಾರಾಜಕೀ ಜೈ ಎಂದು ಘೋಷಣೆ ಕೂಗುವ ಮೂಲಕ ಉತ್ತುತ್ತಿ, ಬಾಳೆಹಣ್ಣು ಎಸೆದು ಪ್ರಾರ್ಥನೆ ಸಲ್ಲಿಸಿದರು.
ಜಾತ್ರೆ ನಿಮಿತ್ತ ಕಳೆದ ವಾರದಿಂದ ನಿತ್ಯ ಶ್ರೀದೇವಸ್ಥಾನದಲ್ಲಿ ಪುರಾಣ ಸೇರಿದಂತೆ ಪಲ್ಲಕ್ಕಿ ಉತ್ಸವ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲಿದ್ದು, ಸ್ಥಳೀಯರು ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತಾದಿಗಳು ಆಗಮಿಸಿ ಶ್ರೀದೇವರ ದರ್ಶನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಹಿರಿಯರಾದ ಬಸವರಾಜಪ್ಪಗೌಡ ದರ್ಶನಾಪುರ ಸೇರಿದಂತೆ ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.
ರಾತ್ರಿ ವಿಶ್ವರಾಧ್ಯರ ಮಹಾತ್ಮೆ ನಾಟಕ ಪ್ರದರ್ಶನಗೊಂಡಿತು. ಸಾರ್ವಜನಿಕರು ಭಕ್ತಾಧಿಗಳು ವೀಕ್ಷಿಸಿದರು. ದೊಡ್ಡ ಪ್ರಮಾಣದ ದನಗಳ ಜಾತ್ರೆಯು ಆರಂಭಗೊಂಡಿದ್ದು, ರೈತಾಪಿ ಜನರು ಜಾತ್ರೆಯ ಸದುಪಯೋ ಪಡೆಯಬೇಕೆಂದು ಶ್ರೀದೇವಸ್ಥಾನ ಭಕ್ತ ಮಂಡಳಿ ಕೋರಿದೆ.