ಐನೂರು ರೂಪಾಯಿಗೆ ಹೋಯಿತು ಅಧ್ಯಕ್ಷ ಪದವಿ!
ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯ್ತಿ ಅದ್ಯಕ್ಷೆ
ಬೆಳಗಾವಿ: ನಿವೇಶನ ಪತ್ರ ನೀಡುವ ವಿಚಾರದಲ್ಲಿ ಮಚ್ಚೆ ಗ್ರಾಮ ಪಂಚಾಯಿತಿ ಅದ್ಯಕ್ಷೆ ಪದ್ಮಶ್ರೀ ಹುಡೇದ್ ಐನೂರು ರೂಪಾಯಿ ಲಂಚ ಸ್ವೀಕರಿಸಿದ್ದಾರೆಂಬ ಆರೋಪವಿದೆ. ಕಳೆದ ಜನೇವರಿ 28ರಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಅದ್ಯಕ್ಷೆ ಪದ್ಮಶ್ರೀ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕುಬಿದ್ದಿದ್ದರು. ಅಲ್ಲದೆ ಪದ್ಮಶ್ರೀ ಅವರ ಪತಿ ಮಹಾವೀರ ಹುಡೇದ ಇದೇ ವಿಚಾರದಲ್ಲಿ 2.500 ರೂಪಾಯಿ ಲಂಚ ಪಡೆದಿದ್ದಾರೆಂಬ ಆರೋಪವೂ ಇದೆ.
ಹೀಗಾಗಿ, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಭ್ರಷ್ಟಾಚಾರ ಮತ್ತು ದುರ್ನಡತೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಗ್ರಾಮ ಪಂಚಾಯತಿ ಅದ್ಯಕ್ಷೆ ಪದ್ಮಶ್ರೀಯವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲು ಸರ್ಕಾರ ನಿರ್ಣಯಿಸಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯ್ತಿ ಅದ್ಯಕ್ಷೆಗೆ ಸರ್ಕಾರದಿಂದ ನೋಟೀಸ್ ನೀಡಿದಾಗ ನಾನು ಲಂಚ ಸ್ವೀಕರಿಸಿಲ್ಲ . ಬದಲಾಗಿ ಎಸಿಬಿ ಅಧಿಕಾರಿಗಳು ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆಂದು ಪದ್ಮಶ್ರೀ ಸಮರ್ಥನೆ ಮಾಡಿ ಉತ್ತರ ನೀಡಿದ್ದರು.