ಜೋಗ ಜಲಪಾತ ವೀಕ್ಷಣೆಗೆ ಹೋಗುವ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ..!
-ವಿನಯ ಮುದನೂರ್
ಚಿತ್ರಗಳು: ನಿಸರ್ಗ ಗೋವಿಂದರಾಜ್
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…
ಈ ಕವಿತೆಯ ಸಾಲು ಓದದವರುಂಟೆ, ಈ ಸುಮಧುರ ಗೀತೆ ಕೇಳದವರುಂಟೆ, ಕರುನಾಡಲಿ ಜೋಗದ ಸಿರಿ ನೋಡದವರುಂಟೆ. ಕವಿಗಳಿಗೆ ಸ್ಪೂರ್ತಿ, ಮಕ್ಕಳಿಗೆ ಪ್ರೀತಿ, ಸಾಹಸಿಗಳಿಗೆ ಪರ್ವತ, ಪ್ರೇಮಿಗಳಿಗೆ ಅಮೃತ ಈ ಜೋಗ ಜಲಪಾತ… ಗಜ ಗಾಂಭೀರ್ಯದಲಿ ಧರೆಗಿಳಿಯುವ ರಾಜ, ಯುವರಾಜನ ಗಡಸು ಕಂಡು ನಾಚುತ್ತಲೇ ಬಳಕುವ ರಾಣಿ, ಕಾಡಿನ ರಾಜನಂತೆ ಘರ್ಜಿಸುತ್ತಲೇ ಭುವಿಗಿಳಿಯುವ ರೋರಲ್, ಕ್ಷಣಾರ್ಧದಲ್ಲಿ ಆಕಾಶಕ್ಕೆ ಚಿಮ್ಮುವ ರಾಕೆಟ್ ನಂತೆ ನೆಲಕ್ಕ ನುಗ್ಗುವ ರಾಕೆಟ್… ಆಹಾ… ರಾಜಾ ರಾಣಿ ರೋರಲ್ ಮತ್ತು ರಾಕೆಟ್ ನ ಸೊಬಗು ಶಬ್ದಕ್ಕೆ ಸಿಗದು. ಕಣ್ಣಿಗೆ ಚಂದ, ಮನಸ್ಸಿಗೆ ಆನಂದ!
ಹೌದು ಕಣ್ರೀ, ಕಳೆದ ವರ್ಷ ಮಳೆಯಿಲ್ಲದೆ ಸಪ್ಪೆಯಾಗಿದ್ದ ಜೋಗ ಜಲಪಾತ ಈ ವರ್ಷ ಮತ್ತೆ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ. ಗತವೈಭವ ಮರುಸೃಷ್ಠಿಯಾಗಿದ್ದು ಜೋಗದ ಸಿರಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಮಲೆನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ 831 ಅಡಿಗಳ ಮೇಲಿಂದ ಧರೆಗಿಳಿಯುವ ಜಲ ಸೌಂದರ್ಯ ಕಣ್ತುಂಬಿಕೊಳ್ಳಲು ಜನಜಾತ್ರೆಯೇ ಜೋಗದಲ್ಲಿ ಸೇರುತ್ತಿದೆ. ಶನಿವಾರ ಮತ್ತು ಭಾನುವಾರವಂತೂ ಲೆಕ್ಕವಿಲ್ಲದಷ್ಟು ಜನ ಜೋಗದತ್ತ ಹೆಜ್ಜೆ ಹಾಕುತ್ತಿದ್ದು ಕಳೆದ ಒಂದು ವಾರದಲ್ಲಿ ಸುಮಾರು 30ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ತುಂತುರು ಮಳೆ, ಕೊಂಚ ಚಳಿ. ಕ್ಷಣ ಕಾಲ ಮಳೆ ನಿಂತರೂ ಸಾಕು ಧಗೆ. ಮೈಯಲ್ಲಿ ಬೆಚ್ಚಗಿನ ಬೆವರ ಹನಿ. ವಿಶಿಷ್ಟ ಪ್ರಕೃತಿಯ ಮಡಿಲಲ್ಲಿ ಜೋಗದ ಸೊಬಗು, ಸೌಂದರ್ಯ ಸವಿಯುವ ಪರಿಸರ ಪ್ರಿಯರಿಗೆ ಕಣ್ಣಿಗೆ ಹಬ್ಬ. ಜೋಗ ಜಲಪಾತದ ನೀರು ನೆಲಕ್ಕಪ್ಪಳಿಸುವ ದೃಶ್ಯವನ್ನು ಕಣ್ಣಾರೆ ಕಾಣಲು ಪರಿಸರ ಪ್ರಿಯರು ಸಾವಿರಾರು ಮೆಟ್ಟಿಲುಗಳನ್ನಿಳಿಯುತ್ತಾರೆ. ನಿಜವಾದ ಪಾತಾಳವನ್ನು ಕಂಡ ಖುಷಿಯಲ್ಲಿ ಜೋಗದ ಕೆಳಭಾಗದ ನೀರಲ್ಲಿ ಮೋಜು ಮಸ್ತಿಯಲ್ಲಿ ಮೈಮರೆಯುತ್ತಾರೆ. ಸೆಲ್ಫಿ, ಗ್ರೂಪ್ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಆದರೆ, ಮರಳಿ ಸಾವಿರ ಮಟ್ಟಿಲುಗಳನ್ನು ಹತ್ತಿ ಮೇಲಕ್ಕೇರಬೇಕೆಂದಾಗಲೇ ಪಾತಾಳಕ್ಕಿಳಿದ ಒಂದೊಂದು ಮೆಟ್ಟಿಲುಗಳೂ ನೆಪಾಗುತ್ತವೆ. ಆಗ ಮೈಯಲ್ಲಿ ಇಳಿವುದು ನಿಜವಾದ ಬೆವರ ಹನಿ!
ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸುಮಾರು 800 ಮಿ.ಮಿ ಮಳೆ ಆಗಿದ್ದು ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಪರಿಣಾಮ ಜುಲೈ ತಿಂಗಳ ಕೊನೆಯಲ್ಲಿ ಜಲಪಾತದ ವೈಭವ ಮತ್ತಷ್ಟು ರಂಗೇರಲಿದೆ. ರಾಜ, ರಾಣಿ, ರೋರಲ್, ರಾಕೆಟ್ ತುಂಬಿ ಹರಿಯಲಿವೆ. ಬೆಳ್ಳಕ್ಕಿಗಳ ದೊಡ್ಡ ದಂಡು ಆಕಾಶದಲ್ಲಿ ನರ್ತಿಸುತ್ತ ಚಲಿಸಿದಂತೆ ಜೋಗದ ಸಿರಿಯ ನಾಲ್ಕು ನಕ್ಷತ್ರಗಳು ಮಿರಿಮಿರಿ ಮಿಂಚಿ ಜನರ ಕಣ್ಮನ ಸೆಳೆಯಲಿವೆ. ಜೋಗದ ಈಗಾಗಲೇ ರಾಜ್ಯದ ಮೂಲೆ ಮೂಲೆಯಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಸಹ ಸಾಕಷ್ಟು ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ. ಮಳೆಗಾಲ ಅಂತ್ಯದೊಳಗೆ ಲಕ್ಷಾಂತರ ಜನ ಪರಿಸರ ಪ್ರೇಮಿಗಳು ಜೋಗದ ಸಿರಿ ಕಣ್ತುಂಬಿಕೊಳ್ಳಲು ದಾಂಗುಡಿ ಇಡುವ ನಿರೀಕ್ಷೆಯಿದೆ.
ಜೋಗಕ್ಕೆ ಬರಲು ನೀವು ಪ್ಲಾನ್ ಮಾಡುತ್ತಿರುವಿರಿ ಎಂದಾದರೆ ಆದಷ್ಟು ಬೇಗ ಹೊರಡಿರಿ. ಯಾವುದಕ್ಕೂ ಮಳೆ ಮುಗಿಯುವ ಮುನ್ನ ಜೋಗಫಾಲ್ಸ್ ನೋಡಲು ಸಿದ್ಧವಾಗಿರಿ. ಜುಲೈ ಅಂತ್ಯದೊಳಗೆ ನೀವು ಜೋಗ ಜಲಪಾತ ನೋಡಿದರೆ ಖಂಡಿತ ಜೀವಮಾನದಲ್ಲೆಂದೂ ನೀವು ಆ ದೃಶ್ಯವೈಭವವನ್ನು ಮರೆಯಲಾರಿರಿ. ಜೋಗ ಮೈದುಂಬಿ ಹರಿಯುವ ಅಪರೂಪದ ದೃಶ್ಯ ನೀವು ನೋಡಬಹುದು. ಅಂದಹಾಗೆ ಮೈಮೇಲೊಂದು ಜರ್ಕೀನು ಉತ್ತಮ ಕ್ಯಾಮರಾ ತರುವುದು ಮರೆಯಬೇಡಿರಿ. ಜೋಗದ ಪಾತಳಕ್ಕೆ ಇಳಿಯುವ ಇರಾದೆ ಇದ್ದರೆ ಖಂಡಿತ ಬ್ಯಾಗಲ್ಲಿ ಒಂದಿಷ್ಟು ಆಹಾರ, ನೀರು, ಜ್ಯೂಸ್ ಕೊಂಡೊಯ್ಯಿರಿ. ವಯಸ್ಸಾದವರು ಕೆಳಗೆ ಇಳಿಯದಿರುವುದೇ ಒಳಿತು. ಪುಟ್ಟ ಮಕ್ಕಳನ್ನು ಕರೆದೊಯ್ಯುವುದಾದರೆ ಅವರನ್ನು ಹೊತ್ತುಕೊಳ್ಳಲು ನೀವು ಸಿದ್ಧರಾಗಿರಿ. ಇನ್ನು ಉಳಿದಂತೆ ಜೋಗಜಲಪಾತ ಅಂದರೆ ಹಬ್ಬ ಹಬ್ಬ ಹಬ್ಬ…