ಆ ಮೂರು ಗುಣಗಳನ್ನು ಕಲಿಸದ ಶಿಕ್ಷಣ ವ್ಯರ್ಥ.! ಇದನ್ನೋದಿ
ಜೀವನ ಶಿಕ್ಷಣ
ಮೊನ್ನೆ ಮೊನ್ನೆ ನಟರಾಜ್ ಎಂಬ ನನ್ನ ಸ್ನೇಹಿತರೊಬ್ಬರು ಕಳುಹಿಸಿದ ಮೇಲ್ ಆಶ್ಚರ್ಯವನ್ನು ತರುವುದರೊಂದಿಗೆ ವಿಚಾರಕ್ಕೆ ಹಚ್ಚಿತು. ಅವರ ಸ್ನೇಹಿತರೊಬ್ಬರು ವ್ಯಾಪಾರದಲ್ಲಿರುವುದರಿಂದ ಸದಾ ಪ್ರವಾಸದಲ್ಲೇ ಇರುತ್ತಾರೆ.
ಆ ದಿನ ಅವರು ರೈಲಿನಲ್ಲಿ ಹೊರಟಾಗ ಒಂದು ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ಖಾಲಿಯಾದ ಒಂದು ಅಲ್ಯುಮಿನಿಯಂ ಡಬ್ಬ ಮತ್ತು ಬಿದಿರಿನ ಬುಟ್ಟಿಯನ್ನು ಹಿಡಿದುಕೊಂಡು ಇವರು ಕುಳಿತಿದ್ದ ಕಂಪಾರ್ಟ್ಮೆಂಟಿಗೇ ಬಂದ. ಅಲ್ಲಿ ಇದ್ದವರೇ ಮೂರು ನಾಲ್ಕು ಜನ.
ಈತ ಬಂದು ಇವರ ಪಕ್ಕದಲ್ಲೇ ಕುಳಿತ. ಇವರು ಇಳಿಯಬೇಕಾದ ಊರು ದೂರವಿದ್ದದ್ದರಿಂದಲೂ, ಅವನ ಬಗ್ಗೆ ಕುತೂಹಲ ಮೂಡಿದ್ದರಿಂದಲೂ ಅವನೊಂದಿಗೆ ಮಾತಿಗಿಳಿದರು. ಅವನನ್ನು ನೋಡಿದರೆ ಅವನು ರೈಲಿನಲ್ಲಿ ತಿಂಡಿ-ತಿನಿಸು ಮಾರುವವನಂತೆ ಕಂಡ. ಅವನ ಬಟ್ಟೆಗಳು ಕೊಳಕಾಗಿದ್ದವು.
‘ಏನಪ್ಪಾ, ನಿನ್ನ ಕೆಲಸ?’ ಕೇಳಿದರಿವರು. ‘ಅದೇ ಸರ್, ರೈಲಿನಲ್ಲಿ ದಿನಾಲು ಸಮೋಸಾ ಮಾರುತ್ತೇನೆ’. ‘ಓಹೋ, ಇಂದು ಎಲ್ಲ ಸಮೋಸಾ ಮಾರಾಟವಾಗಿರುವ ಹಾಗಿದೆ. ಡಬ್ಬ ಮತ್ತು ಬುಟ್ಟಿ ಖಾಲಿಯಾಗಿವೆ’ ಎಂದರು ಸ್ನೇಹಿತರು. ‘ದೇವರ ದಯೆ ಸರ್, ಇಂದು ಸೇಲ್ಸ್ ಪೂರ್ತಿಯಾಗಿದೆ’ ಎಂದ ಸಮೋಸಾ-ವಾಲಾ.
‘ತುಂಬ ಕಷ್ಟ ಅಲ್ವಾ ನಿಮ್ಮ ಕೆಲಸ? ಆ ಭಾರವಾದ ಡಬ್ಬಿ ಮತ್ತು ಬುಟ್ಟಿಯನ್ನು ಹೊತ್ತುಕೊಂಡು ಚಲಿಸುವ, ಭರ್ತಿಯಾಗಿರುವ ರೈಲಿನಲ್ಲಿ ಓಡಾಡಬೇಕು, ಸಮೋಸಾ ಕೊಡುವುದು, ದುಡ್ಡು ಎಣಿಸಿ ಪಡೆದುಕೊಳ್ಳುವುದು ಎಲ್ಲ ತುಂಬ ಕಷ್ಟ ಅಲ್ಲವೇ?’
‘ಅದೇನು ಕಷ್ಟ ಬಿಡಿ ಸರ್, ನಮಗೆ ದಿನ ನಿತ್ಯದ ಕೆಲಸ. ದುಡಿದರೆ ತಾನೇ ಹೊಟ್ಟೆ ತುಂಬುವುದು? ಒಂದು ಸಮೋಸಾ ಮಾರಿದರೆ ನಮಗೆ ಎಪ್ಪತ್ತೈದು ಪೈಸೆ ಕಮಿಷನ್ ದೊರೆಯುತ್ತದೆ’. ‘ದಿನನಿತ್ಯ ಎಷ್ಟು ಸಮೋಸಾ ಮಾರುತ್ತೀರಿ?’ ಕೇಳಿದರು ಸ್ನೇಹಿತರು.
‘ಪ್ರತಿದಿನ ಸುಮಾರು ಮೂರು ಸಾವಿರದಿಂದ ಮೂರು ಸಾವಿರದ ಐದುನೂರು ಸಮೋಸಾ ಒಬ್ಬಬ್ಬರೂ ಮಾರಾಟ ಮಾಡುತ್ತೇವೆ. ಕೆಲವೊಂದು ದಿನ ಮಾರಾಟ ಬಿದ್ದು ಹೋಗುತ್ತದೆ. ಅಂದು ಸಾವಿರ ಸಮೋಸಾ ಮಾರಿದರೆ ಹೆಚ್ಚು. ಸರಾಸರಿ ತೆಗೆದುಕೊಂಡರೆ ನಿತ್ಯ ಎರಡು ಸಾವಿರ ಸಮೋಸಾ ನಾನೊಬ್ಬನೇ ಮಾರುತ್ತೇನೆ’ ಎಂದ ಸಮೋಸಾವಾಲಾ.
ಇವರಿಗೆ ಆಶ್ಚರ್ಯವಾಯಿತು, ಸರಾಸರಿ ಲೆಕ್ಕ ಹಿಡಿದರೂ ಒಂದು ಸಮೋಸಾಕ್ಕೆ ಎಪ್ಪತ್ತೈದು ಪೈಸೆಯಂತೆ ಎರಡು ಸಾವಿರ ಸಮೋಸಾಕ್ಕೆ ಒಂದೂವರೆ ಸಾವಿರ ರೂಪಾಯಿ ಸಂಪಾದನೆ ಒಂದು ದಿನಕ್ಕೆ! ಅಂದರೆ ತಿಂಗಳಿಗೆ ನಲವತ್ತೈದು ಸಾವಿರ ರೂಪಾಯಿ! ತನ್ನ ಸಂಬಳಕ್ಕಿಂತ ಹೆಚ್ಚು.
ಇದು ಅಷ್ಟಕ್ಕೇ ನಿಲ್ಲಲಿಲ್ಲ. ಆತ ಹೇಳಿದ, ‘ಏನು ಮಾಡುವುದು ಕೆಟ್ಟ ಚಟ. ಕುಡಿಯಲಿಕ್ಕೆಂದೇ ಹತ್ತು ಸಾವಿರ ಹೋಗುತ್ತದೆ. ಉಳಿದದ್ದರಲ್ಲೇ ಬೇರೆ ಬಿಸಿನೆಸ್ ಮಾಡುತ್ತೇನೆ’. ‘ಬೇರೆ ಬಿಸಿನೆಸ್ಸೂ ಇದೆಯಾ?’ ಬೆರಗಾಗಿ ಕೇಳಿದರಿವರು. ‘ರಿಯಲ್ ಎಸ್ಟೇಟು ಸರ್.
೨೦೦೭ರಲ್ಲಿ ಮೂರು ಲಕ್ಷಕ್ಕೆ ಒಂದು ಸೈಟ್ ಕೊಂಡೆ. ಅದನ್ನು ಕಳೆದ ವರ್ಷ ಹದಿನೈದು ಲಕ್ಷಕ್ಕೆ ಮಾರಿದೆ. ಐದು ಲಕ್ಷಕ್ಕೆ ಮತ್ತೊಂದು ಸೈಟ್ ತೆಗೆದಿದ್ದೇನೆ. ಇನ್ನೂ ನಾಲ್ಕು ವರ್ಷಕ್ಕೆ ಐವತ್ತು ಲಕ್ಷ ಆಗುತ್ತೆ. ಮೊನ್ನೆ ಜಾಗೆ ಮಾರಿ ಉಳಿದ ದುಡ್ಡಿನಲ್ಲಿ ಆರು ಲಕ್ಷ ಮಗಳ ಮದುವೆಗೆ, ನಾಲ್ಕು ಲಕ್ಷ ಮಗನ ಓದಿಗೆ ಎಂದು ಬ್ಯಾಂಕಿನಲ್ಲಿ ಎಫ್.ಡಿ. ಇಟ್ಟಿದ್ದೇನೆ’ ಎಂದ.
‘ನೀನು ಓದಿದ್ದು ಎಲ್ಲಿಯವರೆಗೆ?’ ಕೇಳಿದರು ಸ್ನೇಹಿತರು. ‘ನಮಗೆಲ್ಲಿ ಓದು ಸರ್? ಮೂರನೇ ಕ್ಲಾಸು ಫೇಲು’ ಎಂದ ಸಮೋಸಾವಾಲಾ. ನಂತರ ತನ್ನ ನಿಲ್ದಾಣ ಬಂತೆಂದು ಇಳಿದು ಹೋದ. ನಮ್ಮ ಸ್ನೇಹಿತರಿಗೆ ಇದೊಂದು ಸಣ್ಣ ಘಟನೆಯಾಗಿ ಉಳಿಯಲಿಲ್ಲ. ನಾವು ಹೆಚ್ಚು ಕಲಿಯಲಿಲ್ಲ, ಬದುಕು ಸಾಗಿಸುವುದೇ ಕಷ್ಟ ಎಂದು ಗೊಣಗುವ ಅನೇಕರಿಗೆ ಇದೊಂದು ಮಾದರಿ.
ದುಡಿಯುವ ಮನಸ್ಸು, ಏನನ್ನಾದರೂ ಸಾಧಿಸಬೇಕೆನ್ನುವ ಛಲ ಮತ್ತು ಆತ್ಮವಿಶ್ವಾಸ ಒಳ್ಳೆಯ ದಾರಿ ತೋರುತ್ತವೆ. ಈ ಮೂರೂ ಗುಣಗಳನ್ನು ಕಲಿಸದ ಶಿಕ್ಷಣ ವ್ಯರ್ಥ ಪ್ರಯತ್ನ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882
ಪ್ರೇರಣೆಯ ಕಥೆ ಸರ್