ಅಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ನೀಡಿದ ದೂರುಗಳಿಗಿಲ್ಲ ಪರಿಹಾರ

ವನದುರ್ಗ ಗ್ರಾಮವಾಸ್ತವ್ಯದಲ್ಲಿ ಸಲ್ಲಿಸಿದ ಅರ್ಜಿಗಳು ಅಧಿಕಾರಿಗಳಿಗೆ ಅಲರ್ಜಿ ಗ್ರಾಮಸ್ಥರ ಆಕ್ರೋಶ
ವಾಸ್ತವ್ಯಗೊಂಡರೂ ಈಡೇರದ ಬೇಡಿಕೆಗಳು, ಪರಿಹಾರ ಕಾಣದ ಸಮಸ್ಯೆಗಳು
ಮಲ್ಲಿಕಾರ್ಜುನ ಮುದ್ನೂರ
yadgiri, ಶಹಾಪುರಃ ತಾಲೂಕಿನ ಗ್ರಾಮದಲ್ಲಿ ಈಚೆಗೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಗ್ರಾಮಸ್ಥರು ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಸಲ್ಲಿಸಿದ್ದ ಅರ್ಜಿಗಳು ಧೂಳು ಹಿಡಿದಿವೆ ಎನ್ನಲಾಗಿದೆ. ತಾಲೂಕು ಆಡಳಿತದಿಂದ ಯಾವುದೇ ಪ್ರಗತಿ ಕಂಡು ಬರುತ್ತಿಲ್ಲವೆಂದು ಗ್ರಾಮಸ್ಥರಿಂದ ಬಲವಾಗಿ ಆರೋಪ ಕೇಳಿ ಬಂದಿದೆ.
ಸೆಪ್ಟೆಂಬರ್ 16 ರಂದು ತಾಲೂಕಿನ ವನದುರ್ಗ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಗ್ರಾಮಸ್ಥರು ದೂರು ನೀಡಿದ್ದರು. ಮೇಲ್ನೋಟಕ್ಕೆ ಅಂದು ಅರ್ಜಿ ವಿಲೇವಾರಿ ಮಾಡಲಾಯಿತು. ಆದರೆ 11 ದಿನ ಕಳೆದರೂ ದೂರು ಕುರಿತು ಯಾವುದೇ ಪರಿಶೀಲನೆ ನಡೆದಿಲ್ಲ. ಪರಿಹಾರ ಕಲ್ಪಿಸುವದು ದೂರದ ಮಾತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಾಮಕಾವಾಸ್ತೆ ಕಾರ್ಯಕ್ರಮ ಮಾಡಿದ್ದು, ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆ ಈಡೇರಿಸದೆ ಬೇಜವಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಬಲವಾದ ಆರೋಪ ಕೇಳಿ ಬರುತ್ತಿದೆ. ಅಂದು 67 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ ಇನ್ನೂ 47 ದೂರಿನ ಅರ್ಜಿಗಳು ಬಾಕಿ ಉಳಿದುಕೊಂಡಿದ್ದವು. ಬಗೆಹರಿಸಿದ 20 ಅರ್ಜಿಗಳ ಪಐಕಿ ಎಲ್ಲವೂ ಸಣ್ಣಪುಟ್ಟ ಸ್ಥಳೀಯ ಸಮಸ್ಯೆಗಳಿದ್ದು, ಅವುಗಳಿಗೆ ಸಮರ್ಪಕ ಸ್ಪಂಧನೆ ನೀಡಿ ಬಗೆಹರಿಸಲಾಗಿತ್ತು. ಆದರೆ ಗ್ರಾಮದ ಬಹುದೊಡ್ಡ ಸಮಸ್ಯೆಗಳಾದ 47 ಅರ್ಜಿಗಳ ಕುರಿತು ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮಕೈಗೊಳ್ಳದಿರುವದು ಸೋಜಿಗದ ಸಂಗತಿಯಾಗಿದೆ.
ಸದರಿ ಗ್ರಾಮ ವಾಸ್ತವ್ಯದಲ್ಲಿ ಗ್ರಾಮದ ಹಲವಾರು ಮುಖಂಡರು ಬಸ್ ಸೌಕರ್ಯ ನೀಡಿ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದರೂ ಇನ್ನೂ ಸ್ಥಳೀಯ ಬಸ್ ಘಟಕದ ಅಧಿಕಾರಿಗಳು ಕೇವಲ ಆಶ್ವಾಸನೆಗಳಿಗೆ ಸೀಮಿತಗೊಂಡಿದ್ದು, ಯಾವುದೇ ಕ್ರಮಕ್ಕೆ ಮುಂದಾಗಿರುವದಿಲ್ಲ. ನಿತ್ಯ ಗ್ರಾಮದ ವಿದ್ಯಾರ್ಥಿಳಿಗೆ ಪಾಲಕರು ಬೈಕ್‍ಗಳ ಮೇಲೆ ಶಹಾಪುರ ನಗರಕ್ಕೆ ಮತ್ತು ಗೋಗಿ ಗ್ರಾಮಕ್ಕೆ ತಂದು ಬಿಡುವ ಅನಿವಾರ್ಯತೆ ಉಂಟಾಗಿದೆ. ಅಲ್ಲದೆ ಗ್ರಾಮದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ನಡೆಸುತ್ತಿದ್ದು, ಮತ್ತು ಅದಕ್ಕಿಂತಲೂ ರೈತರ ಸಮಸ್ಯೆಯಾದ ಬೆಳೆಗಳಿಗೆ ನೀರು ಒದಗಿಸಲು ವಿದ್ಯುತ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಈ ಕುರಿತು ಗ್ರಾಮ ವಾಸ್ತವ್ಯದಲ್ಲಿ ರೈತರು ದೂರು ನೀಡಿದ್ದರೂ ಪರಿಹರಿಸುವಲ್ಲಿ ಅಧಿಕಾರಿಗಳ ಬೇಜವಬ್ದಾರಿ ನಡೆ ಕಾಣುತ್ತಿದೆ ಎನ್ನಲಾಗಿದೆ. ಹೀಗೆ ಹತ್ತಾರು ಸಮಸ್ಯೆ ಅರ್ಜಿಗಳು ತಾಲೂಕಾಡಳಿತ ಕಚೇರಿಯಲ್ಲಿ ಧೂಳಿಡಿದಿವೆ ಎಂದರೆ ತಪ್ಪಿಲ್ಲ.
ವನದುರ್ಗ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೆ ಪರದಾಡುವಂತಾಗಿದೆ. ಬೆಳೆಗಳಿಗೆ ನೀರುಣಿಸಲು ವಿದ್ಯುತ್ ಅಭಾವ ಹೆಚ್ಚಾಗಿದೆ. ಕೂಡಲೇ ವಿದ್ಯುತ್ ಸರಬರಾಜು ಸೌಲಭ್ಯ ಕಲ್ಪಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು. ಸಂಬಂಧಪಟ್ಟ ಜೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ, ಗೋಗಿ ಕೆವಿ ವಿದ್ಯುತ್ ಘಟಕ ಸಣ್ಣದಿದೆ. ಹೀಗಾಗಿ ತೊಂದರೆಯಾಗುತ್ತಿದೆ ಎಂಬ ನೆಪ ಹೇಳುತ್ತಿದ್ದಾರೆ. ಗ್ರಾಮ ವಾಸ್ತವ್ಯ ನೆಪಕ್ಕೆ ಮಾತ್ರ ಎಂಬಂತಾಗಿದೆ.
–ಯಲ್ಲಯ್ಯ ನಾಯಕ ವನದುರ್ಗ.