ಕಲಬುರಗಿಯಲ್ಲಿ ದುಷ್ಕೃತ್ಯ : ಸಂಕ್ರಾಂತಿ ಸಂಭ್ರಮಕ್ಕೆ ಕೊಳ್ಳಿಯಿಟ್ಟು ಶಾಂತಿಭಂಗ ಯತ್ನ!?
ಕಲಬುರಗಿ : ನಗರದ ವಿವಿದ ಬಡಾವಣೆಗಳಲ್ಲಿ ಸುಮಾರು ಆರು ಕಾರುಗಳಿಗೆ ಬೆಂಕಿಯಿಟ್ಟಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ವೇಳೆ ಒಂದೇ ಗುಂಪಿನ ದುಷ್ಕರ್ಮಿಗಳು ಈ ಕೃತ್ಯವೆಸಗಿರುವ ಅನುಮಾನಗಳು ವ್ಯಕ್ತವಾಗಿವೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಘಟನೆ ನಡೆದಿದ್ದು ದುಷ್ಕರ್ಮಿಗಳಿಗೆ ಶಾಂತಿ ಕದಡುವ ಉದ್ದೇಶವಿರುವ ಶಂಕೆ ಮೂಡುತ್ತಿದೆ.
ನಗರದ ಬನಶಂಕರಿ ಕಾಲೋನು, ವಿಶ್ವೇಶ್ವರಯ್ಯ ಬಡಾವಣೆ, ಲಾಲಗೇರಿ ಕ್ರಾಸ್, ಸೇಡಂ ರೋಡ್, ಯುನೈಟೆಡ್ ಹಾಸ್ಪಿಟಲ್ ಸಮೀಪ ಸೇರಿದಂತೆ ಒಟ್ಟು ಆರು ಕಡೆ ವಿವಿಧ ಕಾರುಗಳಿಗೆ ಬೆಂಕಿಯಿಟ್ಟು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಕೆಲವು ಕಡೆ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಕಾರುಗಳಿಗೆ ಬೆಂಕಿಯಿಟ್ಟಿರುವ ವಿಷಯ ನಗರದೆಲ್ಲೆಡೆ ಹಬ್ಬಿದ್ದು ನಾಗರೀಕರು ಭಯಭೀತಿಗೊಂಡಿದ್ದಾರೆ. ಮನೆಗೆ ಬೆಂಕಿ ಬಿದ್ದರೆ ಇನ್ನೇನು ಗತಿ ಎಂದು ಚಿಂತಿಸಿ ಕಂಗಾಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ನಗರದ ಕನ ಭಯಭೀತಿಗೊಳ್ಳುವ ಅಗತ್ಯವಿಲ್ಲ ಸೂಕ್ತ ರಕ್ಷಣೆ ಒದಗಿಸಲಾಗುವುದು. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.