ಕಲಬುರಗಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ : ಮುಂದುವರೆದ ಬೆಂಕಿ ಹಚ್ಚೋ ‘ಕೆಲಸ’!
ಕಲಬುರಗಿ: ಮೊನ್ನೆಯಷ್ಟೇ ನಗರದ ವಿವಿದೆಡೆ ರಾತ್ರೋರಾತ್ರಿ ಆರು ಕಾರುಗಳಿಗೆ ಬೆಂಕಿಯಿಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಆದರೆ, ಪೊಲೀಸರ ಭಯವಿಲ್ಲದ ದುಷ್ಕರ್ಮಿಗಳು ಮಾತ್ರ ಮತ್ತೆ ನಿನ್ನೆ ರಾತ್ರಿ ಆನಂದ ನಗರದಲ್ಲಿ ಮತ್ತೊಂದು ಕಾರಿಗೆ ಬೆಂಕಿಯಿಟ್ಟಿದ್ದಾರೆ. ಅಲ್ಲದೆ ಮತ್ತೊಂದು ಕಾರಿಗೆ ಬೆಂಕಿಯಿಡುವ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.
ಕಾರುಗಳಿಗರ ಬೆಂಕಿಯಿಟ್ಟು ಎಸ್ಕೇಪ್ ಆಗುತ್ತಿರುವ ದುಷ್ಕರ್ಮಿಗಳು ನಾಗರೀಕರಲ್ಲಿ ಆತಂಕ ಮೂಡಿಸಿದ್ದಾರೆ. ಸ್ಟೇಷನ್ ಬಜಾರ್ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿಗೆ ಬೆಂಕಿಯಿಡುತ್ತಿರುವವನು ಓರ್ವ ಮಾನಸಿಕ ಅಸ್ವಸ್ಥ ಆಗಿರಬಹುದು. ಇಲ್ಲವೇ ದುರುದ್ದೇಶದಿಂದ ಒಂದು ಟೀಮ್ ಈರೀತಿಯ ದುಷ್ಕೃತ್ಯ ಎಸಗುತ್ತಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕಾರಿಗೆ ಬೆಂಕಿಯಿಡುವ ಘಟನೆ ನಡೆಯುತ್ತಿರುವುದು ಜನರ ನೆಮ್ಮದಿ ಕೆಡಿಸಿದೆ. ನಗರದ ಜನ ಯಾವ ಹೊತ್ತಿನಲ್ಲಿ ಎಲ್ಲಿ ಬೆಂಕಿ ಬೀಳುತ್ತದೋ ಎಂದು ನಿದ್ದೆಗೆಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಪೊಲೀಸರು ಶೀಘ್ರಗತಿಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ತಳ್ಳಬೇಕಿದೆ. ಆ ಮೂಲಕ ಜನರ ಆತಂಕ ದೂರಾಗಿಸಿ ಸೂಕ್ತ ರಕ್ಷಣೆ ಒದಗಿಸಬೇಕಿದೆ.