ಶಹಾಪುರದಲ್ಲಿ ಧಾರಕಾರ ಮಳೆಃ ಅವಘಡದಿಂದ ಕುಟುಂಬ ಪಾರು ಮಾಡಿದ ಜೆಸ್ಕಾಂ ನೌಕರರು
ಶಹಾಪುರದಲ್ಲಿ ಧಾರಕಾರ ಮಳೆಃ ಅವಘಡದಿಂದ ಕುಟುಂಬ ಪಾರು ಮಾಡಿದ ಜೆಸ್ಕಾಂ ನೌಕರರು
ಯಾದಗಿರಿ, ಶಹಾಪುರಃ ಶನಿವಾರ ರಾತ್ರಿಪೂರ ಧಾರಕಾರ ಮಳೆ ಸುರಿದ ಪರಿಣಾಮ ಹಳ್ಳ, ಕೊಳ್ಳ ಕೆರೆಗಳು ತುಂಬಿ ಹರಿಯುತ್ತಿದ್ದು, ಹಳ್ಳ ಸಮೀಪ ನಿವೇಶನವೊಂದರಲ್ಲಿ ಶೆಡ್ ಹಾಕೊಂಡು ವಾಸವಿದ್ದ ಕುಟುಂಬವೊಂದು ಹಳ್ಳದ ನೀರಿನ ಪ್ರವಾಹಕ್ಕೆ ಸಿಲುಕಿದ್ದು, ಜೆಸ್ಕಾಂ ನೌಕರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಗರದ ಬಾಪುಗೌಡ ನಗರದಲ್ಲಿ ಬೆಳಗಿನ ಜಾವ 4 ಗಂಟೆಗೆ ನಡೆದಿದೆ.
ಶೆಡ್ ಅರ್ಧ ಮುಳುಗಡೆಯಾಗಿ ಆತಂಕದಲ್ಲಿರುವಾಗ ಜೆಸ್ಕಾಂ ಸಹಾಯಕ ಶಾಖಾಧಕಾರಿ ಎಕ್ಬಾಲ್ ಲೋಹಾರಿ ಹಾಗೂ ಸಿಬ್ಬಂದಿ ಬೆಳಗಿನ ಜಾವ 4 ಸುಮಾರಿಗೆ ವಿದ್ಯುತ್ ಕಂಬ ಉರಿಳಿರುವ ಕುರಿತು ಲೈನ್ ಚಕ್ ಮಾಡುತ್ತಿರುವಾಗ ಕುಟುವೊಂದು ನೀರಿನಡಿ ಸಿಲುಕಿರುವದು ಕಂಡು ಬಂದಿದೆ ತಕ್ಷಣ ಅಗ್ನಿಶಾಮಕ ದಳ ಶಾಖೆಗೆ ತೆರಳಿ ಸಿಬ್ಬಂದಿಯನ್ನು ಕರೆ ತಂದು ತಾವೂ ಸಾಥ್ ನೀಡುವ ಮೂಲಕ ಕುಟುಂಬ ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೆಳಗಿನ ಜಾವ ಅಗ್ನಿ ಶಾಮಕ ದಳದ ಫ್ರೀಕಾಲ್ ಗೆ ಕರೆ ಮಾಡಿದರೂ ಕರೆ ತಲುಪದ ಕಾರಣ ಅಗ್ನಿಶಾಮಕ ದಳದ ಶಾಖೆಗೆ ಹೋಗಿ ಸಿಬ್ಬಂದಿಯನ್ನು ಕರೆ ತಂದ ಜೆಸ್ಕಾಂ ನೌಕರ ಎಕ್ಬಾಲ್ ಲೋಹಾರಿ ಹಾಗೂ ಸಿಬ್ಬಂದಿ ಸಾಥ್ ನೀಡಿ ವೃದ್ಧ ದಂಪತಿ, ನಾಲ್ಕು ಜನ ಮಕ್ಕಳು ಸೇರಿದಂತೆ ಒಟ್ಟು 8 ಜನರನ್ನು ರಕ್ಷಣೆ ಮಾಡಿದ್ದಾರೆ.
ರಬಸದಿ ಹರಿಯುತ್ತಿರುವ ಹಳ್ಳದ ನೀರಿನಲ್ಲಿ ಹಗ್ಗ ಹಾಕಿ ಅವರನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ವೃದ್ಧ ಅರ್ಜುನ್ ಗೂಡೂರ ಹಾಗೂ ಪತ್ನಿ ಮತ್ತು ಮಗ ಮಹಾಂತೇಶ, ಸೊಸೆ ಮತ್ತು ನಾಲ್ಕು ಜನ ಮಕ್ಕಳನ್ನು ರಕ್ಷಿಸಿ ಸದ್ಯ ನಗರಸಭೆ ಅಧೀನದ ನಿರಾಶ್ರಿತ ಕೇಂದ್ರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.
ಪತ್ರಕರ್ತರ ಕರೆಗೆ ಸ್ಪಂಧಿಸಿದ ತಹಶೀಲ್ದಾರ..
ಪತ್ರಕರ್ತರು ಕಾಲ್ ಮಾಡಿ ವಿಷಯ ತಿಳಿಸುತ್ತಿದ್ದಂತೆ ತಹಶಿಲ್ದಾರ ಜಗನ್ನಾಥರಡ್ಡಿ ಅವರು ಕೂಡಲೇ ಸ್ಪಂಧಿಸಿ ನಗರಸಭೆ ಅಧಿಕಾರಿ ಹರೀಶ ಅವರಿಗೆ ಕರೆ ಮಾಡಿ ನಿರಾಶ್ರಿತ ಕುಟುಂಬಕ್ಕೆ ತಂಗಲು ವ್ಯವಸ್ಥೆ ಮಾಡಲು ಸೂಚಿಸಿದರು.
ತಕ್ಷಣ ಕಾರ್ಯಪ್ರವೃತ್ತರಾದ ನಗರಸಭೆ ಅಧಿಕಾರಿ ಹರೀಶ ಅವರು, ನಿರಾಶ್ರಿತ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತಂಗಲು ವ್ಯವಸ್ಥೆ ಮಾಡಿದರು. ನಿರಾಶ್ರಿತರಿಗೆ ಊಟ ಉಪಚಾರದ ವ್ಯವಸ್ಥೆಯೂ ಕೇಂದ್ರದಲ್ಲಿ ಇದೆ ಎಂದು ತಿಳಿಸಿದರು. ಅಲ್ಲದೆ ತಹಶೀಲ್ದಾರ ಅವರು ಮೂರು ನಾಲ್ಕು ಬಾರಿ ಪತ್ರಕರ್ತರು ಮತ್ತು ನಗರಸಭೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ, ಕರೆ ಮಾಡಿ ನಿರಾಶ್ರಿತ ರಿಗೆ ವ್ಯವಸ್ಥೆ ಆಗುವದನ್ನು ಖಚಿತ ಪಡಿಸಿಕೊಂಡಿರುವದು ಅವರ ಕಾಳಜಿಪೂರ್ವಕ ಕರ್ತವ್ಯಕ್ಕೆ ಸಾಕ್ಷಿಯಾಯಿತು.
ಎಕ್ಬಾಲ್ ಲೋಹಾರಿ ಅವರು ನಿರಾಶ್ರಿತ ಕುಟುಂಬಕ್ಕೆ ಸದ್ಯಕ್ಕೆ ಉಪಾಹಾರ ಮಾಡಿಸಿ ಕೇಂದ್ರಕ್ಕೆ ಸ್ವತಹಃ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬಂದರು. ಮಾನವೀಯತೆ ಮೆರೆದ ಈ ಎಲ್ಲಾ ಅಧಿಕಾರಿ ವರ್ಗಕ್ಕೆ ಜನರಿಂದ ಮೆಚ್ಚುಗೆ ದೊರೆಯಿತು.
ಧಾರಾಕಾರ ಮಳೆಗೆ ವಿದ್ಯುತ್ ಕಂಬ, ಗಿಡಮರ ನೆಲಕ್ಕೆ..
ತಾಲೂಕಿನಲ್ಲಿ ಶನಿವಾರ ಧಾರಕಾರ ಮಳೆ ಸುರಿದ ಪರುಣಾಮ ಮಳೆ ಗಾಳಿಗೆ ಅಲ್ಲಲ್ಲಿ ವಿದ್ಯುತ್ ಕಂಬ, ಗಿಡಮರಗಳು ನೆಲಕ್ಕುರುಳಿವೆ.
ಮಾವಿನ ಕೆರೆ ಮತ್ತು ನಾಗರ ಕೆರೆಗಳು ತುಂಬಿ ನಿಂತಿವೆ. ಕೆಇಬಿ ಹತ್ತಿರದ ಮಾವಿನಕೆರೆಯಿಂದ ಬರುವ ಹಳ್ಳ ಒತ್ತುವರಿಯಾದ ಪರಿಣಾಮ ನೀರಿನ ಹರಿವು ಎತ್ತೆತ್ತಲೋ ಹರಿಯುತ್ತಿದ್ದು ಸಾಕಷ್ಟು ಮನೆ, ರಸ್ತೆಗಳು ತುಂಬೆಲ್ಲ ನೀರು ಆವರಿಸಿಕೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.
ನಹರದ ಫಿಲ್ಟರ್ ಬೆಡ್ ಗೆ ತೆರಳುವ ಮಾರ್ಗ ಮಧ್ಯ ಹಳ್ಳ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬಾಪುಗೌಡ ನಗರದ ಸರ್ಕಾರಿ ಶಾಲಾ ಸುತ್ತಲು ನೀರು ಆವರಿಸಿ ತುಂಬಿ ಹರಿಯುತ್ತಿದೆ. ಅಲ್ಲದೆ ಡಿಗ್ರಿ ಕಾಲೇಜು ಕಂಪೌಂಡ್ ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಟೌನ್ ಹಾಲ್ ಮುಂದೆ ನೀರು ಕೆರೆಯಂತಾಗಿದೆ.
ಶಹಾಪುರ- ಭೀಮರಾಯನ ಗುಡಿ ರಸ್ತೆ ಸಂಚಾರ ಅಡೆತಡೆಯುಂಟಾಗಿದೆ. ದಿಗ್ಗಿ ಹೋಗುವ ರಸ್ತೆ ಮೂಲಕ ಡಿಗ್ತಿ ಕಾಲೇಜು ಗೇಟ್ ಮುಂದೆ ರಾಜ್ಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು.
ಕಾರುಗಳು ಅರ್ಧ ನೀರಲ್ಲಿ ಮುಳಗಿದ ದೃಶ್ಯಗಳು ಕಂಡು ಬಂದವು, ನಗರದ ಬಸವೇಶ್ವರ ವೃತ್ತ ನೀರಲ್ಲಿ ಮುಳುಗಿದ್ದ ಬಸವೇಶ್ವರ ಪ್ರತಿಮೆ ಸುತ್ತಲೂ ನೀರು ಆವರಿಸಿದ್ದು, ಒಟ್ಟಾರೆ ರಾತ್ರಿ ಮಳೆ ಅವಾಂತರ ಸೃಷ್ಟಿಸಿದೆ ಎನ್ನಬಹುದು.
–ಮಲ್ಲಿಕಾರ್ಜುನ ಮುದನೂರ.