ಕಲಬುರ್ಗಿ: ಭಾರಿ ಮಳೆ, ಆಸ್ಪತ್ರೆ ವಾರ್ಡ್ ಗಳೂ ಜಲಾವೃತ!
ಇಂದೂ ಬರುತ್ತಂತೆ ಭಾರಿ ಮಳೆ!
ಕಲಬುರ್ಗಿ : ನಗರದಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ನಗರದ ರಸ್ತೆಗಳು, ಚರಂಡಿ ತುಂಬಿ ನೀರು ಹರಿಯುತ್ತಿವೆ. ಬಹುತೇಕ ರಸ್ತೆಗಳಲ್ಲಿ ಮೊಳಕಾಲು ಮಟ್ಟಕ್ಕೆ ನೀರು ಹರಿಯುತ್ತಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಕೆಬಿಎನ್ ಆವರಣ ಸಂಪೂರ್ಣ ನೀರು ತುಂಬಿದೆ. ಅಲ್ಲದೆ ಆಸ್ಪತ್ರೆಯಲ್ಲಿನ ಹಲವು ವಾರ್ಡಿಗಳಿಗೂ ನೀರು ನುಗ್ಗಿದೆ. ಪರಿಣಾಮ ಮಕ್ಕಳ ವಾರ್ಡ್ ಸೇರಿದಂತೆ ಆಸ್ಪತ್ರೆಯಲ್ಲಿನ ಬಹುತೇಕ ವಾರ್ಡ್ ಗಳು ಜಲಾವೃತಗೊಂಡಿವೆ. ಹೀಗಾಗಿ, ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಪರದಾಡುವಂತಾಗಿದೆ.
ರೋಗಿಗಳ ವಾರ್ಡ್ ಗೆ ಅಪಾರ ಪ್ರಮಾಣದ ನೀರು ನುಗ್ಗಿರುವ ಕಾರಣ ಒಂದು ಕಡೆ ರೋಗಿಗಳು ನರಳುತ್ತಿದ್ದರೆ ಮತ್ತೊಂದು ಕಡೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ವಾರ್ಡಿಗೆ ತೆರಳಿ ಚಿಕಿತ್ಸೆ ನೀಡಲು ಸಂಕಟಪಡುವ ಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯ ಸಿಬ್ಬಂದಿ ಹರಸಾಹಸಪಟ್ಟು ನೀರು ಹೊರಹಾಕುವ ಯತ್ನ ಮಾಡುತ್ತಿದ್ದಾರೆ. ಅಲ್ಲದೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸುತ್ತಿದ್ದಾರೆ. ರೋಗಿಗಳು ಮಲಗಿರುವ ಮಂಚದ ಬುಡದಲ್ಲಿ ಸಾಕಷ್ಟು ನೀರು ನಿಂತಿದ್ದು, ರೋಗಿಗಳು ಕೆಳಗಿಳಿಯದಂತ ಸ್ಥಿತಿ ನಿರ್ಮಾಣವಾಗಿದೆ.
ರೋಗಿಗಳಿಗೆ ಚಿಕಿತ್ಸೆ ನೀಡಬೇಕಿರುವ ಅಗತ್ಯ ಒಂದಡೆಯಾದರೆ, ರೋಗಿಗಳನ್ನು ನೋಡಲು ವೈದ್ಯರು ನೀರಲ್ಲಿ ನಡೆದಕೊಂಡು ಹೋಗುವಂತ ವ್ಯವಧಾನ ಉಂಟಾಗಿದೆ. ಇಂದು 11 ರ ಸುಮಾರಿಗೆ ಸುರಿದ ಮಳೆ ನಗರ ಪ್ರದೇಶದಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ.
ವಿನಯವಾಣಿಗೆ ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ ಇನ್ನೂ ಎರಡು ದಿನಗಳವರೆಗೆ ಕಲಬುರ್ಗಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದರಂತೆ ಅಫಜಲಪುರದ ಗೊಬ್ಬೂರ ಹೋಬಳಿ ಯಲ್ಲಿ 61 ಮೀ.ಮೀಟರ ಮಳೆ ಈವರೆಗೆ ದಾಖಲಾಗಿದೆ.
ಮತ್ತು ಕಲಬುರ್ಗಿಯಲ್ಲೂ 87.5 ಮಿ.ಮೀಟರ್ ಮಳೆಯಾಗಿದೆ.
ಇಂದು ಸಹ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ಬುಧವಾರ ರಾತ್ರಿ ಯಾದಗಿರಿ ನಗರದಲ್ಲಿ 6.5, ಶಹಾಪುರದಲ್ಲಿ 11. ಸುರಪುರದಲ್ಲಿ 62ಮಿ.ಮೀಟರವರೆಗೆ ಮಳೆಯಾಗಿದ್ದು, ಇಂದು ಸಹ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.