‘ಕಳ್ಳ’ ಮಂತ್ರಿ’ಯ ಕಥೆ ಬಯಲಾದದ್ಹೇಗೆ.? ಓದಿ
ದಿನಕ್ಕೊಂದು ಕಥೆ
ಕಳ್ಳ ಮಂತ್ರಿಯ ಕಥೆ ಏನಾಯಿತು.!
ಮಂತ್ರಿಯ ಕಳ್ಳತನ
ಒಂದೂರಿನಲ್ಲಿ ರಾಜನಿದ್ದ. ಆತ ದಿನಾಲೂ ಮಾರುವೇಷದಲ್ಲಿ ಊರಿನಲ್ಲಿ ಓಡಾಡಿ ಏನೇನು ನಡೆಯುತ್ತೆ ಎಂದೆಲ್ಲ ಗಮನಿಸುತ್ತಿದ್ದ. ಒಂದು ದಿನ ಒಬ್ಬ ಕಳ್ಳ ರಾಜನ ಅರಮನೆಗೆ ಕನ್ನ ಹಾಕಲು ಬಂದ , ರಾಜ ಕೂಡಾ ಮಾರುವೇಷದಿಂದ ಓಡಾಡುತ್ತಿದ್ದವನು. ಇವನ ಬಳಿಗೆ ಬಂದ. ಕಳ್ಳನನ್ನೇ ಕೇಳಿದ ಏನಪ್ಪಾ ಮಾಡುವಿ ಇಲ್ಲಿ? ಎಂಬುದಾಗಿ, ನೋಡಪ್ಪಾ, ನಾನೊಬ್ಬ ಕಳ್ಳ, ಈ ದಿನ ರಾಜನ ಅರಮನೆಗೆ ಕನ್ನ ಹಾಕಲು ಬಂದಿರುವೆ. ನೀನು ಯಾರು? ಎಂದನಾತ.
ಅದಕ್ಕೆ ರಾಜ ನಾನೂ ನಿನ್ನಂತೆ ಕಳ್ಳನೇ ಎಂದ, ಆಗ ಕಳ್ಳನು ಹಾಗಾದರೆ ನನ್ನ ಕಳ್ಳತನಕ್ಕೆ ನೆರವಾಗು. ನಾನು ಒಳಗೆ ಹೋಗಿ ಕದ್ದು ಬರುವೆ. ಆ ನಂತರ ಇಬ್ಬರೂ ಹಂಚಿಕೊಳ್ಳೋಣ ಎಂದನು. ರಾಜನು ಹೂಂ ಎಂದ.
ಕಳ್ಳನು ಒಳಗೆ ಹೋಗಿ ಖಜಾನೆಯಲ್ಲಿ ಒಂದು ವಜ್ರದ ಪೊಟ್ಟಣವಿತ್ತು. ಅದರಲ್ಲಿ 5 ವಜ್ರಗಳಿದ್ದವು. ನಾಲ್ಕನ್ನು ತೆಗೆದುಕೊಂಡು ಹೊರಗೆ ಬಂದು ರಾಜನಿಗೆ ಎರಡು ವಜ್ರ ಕೊಟ್ಟು ತಾನೆರಡು ಇಟ್ಟುಕೊಂಡ.
ರಾಜ ಅದನ್ನು ಪಡೆದು ಆ ಕಳ್ಳನ ವಿಳಾಸವನ್ನು ಕೇಳಿದ. ಮರುದಿನ ಬೆಳಗಾಗುತ್ತಲೇ ರಾಜನ ಖಜಾನೆ ದರೋಡೆಯಾದ ಸುದ್ದಿ ಹಬ್ಬಿತು. ರಾಜ ಸಭೆ ಸೇರಿಸಿದ . ಮಂತ್ರಿಯನ್ನು ಕಳುಹಿ ಮಂತ್ರಿಗಳೇ ಹೊಸದಾಗಿ ಖರೀದಿಸಿದ ವಜ್ರಗಳಿವೆಯೇ ಎಂದು ನೋಡ ಬನ್ನಿ ಎಂದ.
ಮಂತ್ರಿಯು ಖಜಾನೆಗೆ ಹೋದ. ವಜ್ರದ ಪೊಟ್ಟಣದಲ್ಲಿ ಒಂದು ವಜ್ರ ಇತ್ತು. ಇವನಿಗೆ ಐದು ವಜ್ರಗಳಿದ್ದುದೂ ಗೊತ್ತಿತ್ತು. ದುರಾಸೆಯಿಂದ ವಜ್ರಗಳೆಲ್ಲ ಕಳ್ಳತನವಾಗಿವೆ ಎಂದರೆ ತನಗೊಂದು ವಜ್ರ ಸಿಗುತ್ತೆ ಎಂದು ಒಂದನ್ನು ಕಿಸೆಗೆ ಹಾಕಿಕೊಂಡು ರಾಜನ ಬಳಿ ಬಂದು ವಜ್ರಗಳೆಲ್ಲ ಕದ್ದೊಯ್ಯಲ್ಪಟ್ಟಿವೆ ಎಂದೇ ಬಿಟ್ಟನು.
ರಾಜನು ನಿಜವಾದ ಕಳ್ಳನನ್ನು ಅರಮನೆಗೆ ಕರೆಯಿಸಿದನು. ಅವನನ್ನು ಪ್ರಶ್ನಿಸಲಾಗಿ ಆತನು ಒಪ್ಪಿಕೊಂಡು ಒಂದು ಮೊಟ್ಟಣದಲ್ಲಿ ಐದು ವಜ್ರಗಳಿದ್ದಾಗ್ಯೂ, ನಾಲ್ಕನ್ನು ಮಾತ್ರ ಕದ್ದು ಇನ್ನೊಂದನ್ನು ಅಲ್ಲೇ ಬಿಟ್ಟು ಬಂದುದಾಗಿಯೂ, ಸಮಪಾಲು ಮಾಡಿಕೊಂಡು ಎರಡನ್ನೂ ತಾನಿಟ್ಟುಕೊಂಡು ಇನ್ನೆರಡು ಮತ್ತೊಬ್ಬನಿಗೆ ಕೊಟ್ಟುದಾಗಿಯೂ ಅರುಹಿದ.
ಆಗ ಮಂತ್ರಿಯು ಮಹಾಸ್ವಾಮಿ , ಈತ ಸುಳ್ಳು ಹೇಳುತ್ತಿದ್ದಾನೆ. ಕದಿಯುವವರು ನಾಲ್ಕು ವಜ್ರ ಕದ್ದು ಒಂದನ್ನು ಬಿಟ್ಟು ಹೋಗುವುದುಂಟೇ? ಇವನಿಗೆ ಘೋರ ಶಿಕ್ಷೆ ಆಗಲೇಬೇಕು ಎಂದು ಹೇಳಿದ. ಆಗ ರಾಜನು ಮಂತ್ರಿಗಳೇ, ಇವನು ನಿಜಕ್ಕೂ ಪ್ರಾಮಾಣಿಕ ಕಳ್ಳನಾಗಿದ್ದಾನೆ. ನೀವೇ ಸುಳ್ಳರೂ ಕಳ್ಳರೂ ಆಗಿರುವಿರಿ ಎಂದಾಗ ಮಂತ್ರಿ ತಬ್ಬಿಬ್ಬಾಗಿಬಿಟ್ಟ.
ಆಗ ರಾಜನು ತನ್ನ ಬಳಿ ಇರುವ ಎರಡು ವಜ್ರಗಳನ್ನು ನೀಡಿ, ನಿಜಕ್ಕೂ ಒಂದು ವಜ್ರದ ಕಳ್ಳತನ ನೀವೇ ಮಾಡಿದ್ದು ಎಂದಾಗ ಮಂತ್ರಿಯು ತಲೆತಗ್ಗಿಸಿ ಮಾತನಾಡಲಾರದೆ ನಿಂತ.
ನೀತಿ :– ಅಸತ್ಯವನ್ನು ಸತ್ಯವೆಂದು ಹೇಳಲು ಹೋದರೆ ತಾನೇ ಅಪರಾಧಿ ಎಂದು ತಿಳಿದುಬರುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.