ಬಸವಭಕ್ತಿ

ಡಿ.21ರಂದು ಶ್ರೀ ಭಕ್ತ ಕನಕದಾಸ ಜಯಂತಿ ಆಚರಣೆಗೆ ನಿರ್ಧಾರ

ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಯಂತಿ ಪೂರ್ವಸಿದ್ಧತಾ ಸಭೆ

ಯಾದಗಿರಿಃ ಜಿಲ್ಲಾಡಳಿತದ ವತಿಯಿಂದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವವನ್ನು ಡಿಸೆಂಬರ್ 21ರಂದು ಮಧ್ಯಾಹ್ನ 12 ಗಂಟೆಗೆ ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಆಚರಣೆ ಮಾಡಲು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಯಂತಿ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಈ ಮೊದಲು ನವೆಂಬರ್ 26ರಂದು ನಡೆಯಬೇಕಿದ್ದ ಜಯಂತಿ ಕಾರ್ಯಕ್ರಮವನ್ನು ಕೇಂದ್ರ ಮತ್ತು ರಾಜ್ಯದ ಮಾಜಿ ಸಚಿವರು ಹಾಗೂ ಚಲನಚಿತ್ರ ನಟರಾದ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಪ್ರಯುಕ್ತ ಜಯಂತಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು ಎಂದು ತಿಳಿಸಿದರು.

ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಅಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ಯಾದಗಿರಿ ನಗರದ ಕನಕದಾಸ ವೃತ್ತದಲ್ಲಿ ಭಕ್ತ ಕನಕದಾಸರ ಮೂರ್ತಿಗೆ ಪೂಜೆ ನೆರವೇರಿಸಲಾಗುವುದು. ತದನಂತರ ಬೆಳಿಗ್ಗೆ 10 ಗಂಟೆಗೆ ಕಲಾತಂಡದೊಂದಿಗೆ ವಿದ್ಯಾಮಂಗಲ ಕಾರ್ಯಾಲಯದವರೆಗೆ ಮೆರವಣಿಗೆ ನಡೆಯಲಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ, ಅನುದಾನ ಮತ್ತು ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿಯೂ ಸಹ ಶ್ರದ್ಧಾ, ಭಕ್ತಿಯೊಂದಿಗೆ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು ಎಂದು ಅವರು ಸೂಚಿಸಿದರು.

ಜಯಂತಿ ನಿಮಿತ್ತ ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆಯನ್ನು ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ, 4ನೇ ಹಾಗೂ 5ನೇ ಸ್ಥಾನಗಳ ವಿದ್ಯಾರ್ಥಿಗಳಿಗೆ ಜಯಂತ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ, ನಗದು ಬಹುಮಾನ ವಿತರಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕ(ಅಭಿವೃದ್ಧಿ)ರಿಗೆ ತಿಳಿಸಿದರು.

ಶ್ರೀ ಭಕ್ತ ಕನಕದಾಸರ ಮೂರ್ತಿ ಹಾಗೂ ಕನಕ ವೃತ್ತಕ್ಕೆ ಪೇಂಟಿಂಗ್, ವಿದ್ಯುತ್ ದೀಪಾಲಂಕಾರ ಹಾಗೂ ರಸ್ತೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಾದ ಸಂಗಪ್ಪ ಉಪಾಸೆ ಅವರಿಗೆ ತಿಳಿಸಲಾಯಿತು.
ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ, ಗಣ್ಯ ವ್ಯಕ್ತಿಗಳು ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗೆ ಲಘು ಉಪಾಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಸೂಚಿಸಿದರು.

ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳನ್ನು ನೇಮಿಸಲಾಯಿತು. ಜಯಂತಿ ಕಾರ್ಯಕ್ರಮದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ತಿಳಿಸಲಾಯಿತು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಘುವೀರಸಿಂಗ್ ಠಾಕೂರ್ ಅವರು ಸಭೆಯ ನಡಾವಳಿ ಓದಿದರು. ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ್ ಆಲ್ದಾಳ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ವಿಶ್ವನಾಥ ನೀಲಹಳ್ಳಿ, ಕಾರ್ಯಾಧ್ಯಕ್ಷ ಗಿರಿಯಪ್ಪಗೌಡ ಬಾಣತಿಹಾಳ, ನಿಂಗಣ್ಣ ಕೊಂಡಾಪುರ, ಭೀಮಣ್ಣ ಮೇಟಿ, ಹೊನ್ನಪ್ಪ ಮುಸ್ಟೂರು, ಚನ್ನಕೇಶವಗೌಡ ಬಾಣತಿಹಾಳ, ಮಲ್ಲಿಕಾರ್ಜುನ ಕಸವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button