ಅಭಿಮಾನವಿದ್ದಲ್ಲಿ ಭಾಷೆ ಸಂಪತ್ತು ಉಳಿಯಲು ಸಾಧ್ಯಃ ಪ್ರೊ.ಎಸ್.ಜಿ.ಸಿದ್ಧರಾಮಯ್ಯ
ಕಲಬುರಗಿ ವಿಭಾಗದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ
ಯಾದಗಿರಿಃ ಕನ್ನಡ ಭಾಷೆ ಅಭಿಮಾನ ಮೂಡಿದಾಗ ಕನ್ನಡತನವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊಃ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ವಿದ್ಯಾಮಂಗಲ ಕಾರ್ಯಲಯದಲ್ಲಿ ನಡೆದ “ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ 2017-18” ಕಲಬುರಗಿ ವಿಭಾಗದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ಕೂಡ ಕನ್ನಡಿಗರಿಗೆ ಸಿಗಬೇಕಾಗಿದ್ದ ಹುದ್ದೆಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆದಿದೆ. ಕನ್ನಡ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸದೆ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರದ ಗಮನ ಸೆಳೆಯಲು ಪ್ರಸ್ತಾಪ ಮಾಡಲಾಗಿದೆ. ಇಂದಿನ ದಿನಗಳಲ್ಲಿ ಭಾಷೆಯಲ್ಲಿ ಸೃಜನಶೀಲತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಪ್ರತಿಯೊಬ್ಬರು ಕನ್ನಡ ಭಾಷೆಯಲ್ಲಿ ಪ್ರಭುತ್ವ ಸಾಧಿಸಿದಾಗ ಕನ್ನಡ ಭಾಷೆ ಸಮೃದ್ಧಗೊಳ್ಳುವುದು ಎಂದರು.
ಎಲ್ಲೆಡೆ ಖಾಸಗಿ ಆಂಗ್ಲ ಮಾಧ್ಯಮ ಶಿಕ್ಷಣದಿಂದಾಗಿ ಈ ನೆಲದ ಮೂಲ ಕನ್ನಡ ತಾಯಿ ಭಾಷೆ ಸದ್ದಿಲ್ಲದೆ ಅಳಿವಿನಂಚಿಗೆ ತಲುಪುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇರಬೇಕು, ಹೊರತಾಗಿ ತಾತ್ಸಾರ ಮನೋಭಾವನೆ ಬೇಡಾ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಕನ್ನಡದ ಹಿರಿಮೆ-ಗರಿಮೆ ಹೆಚ್ಚಿಸಿದೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸುವಂತಹ ಕೆಲಸ ಪಾಲಕರು ಮಾಡಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಡಾ.ಮೀನಾಕ್ಷಿ ಬಾಳೆ ಮಾತನಾಡಿ, ಶ್ರೀಮಂತರು, ನಗರೀಕರಣದಿಂದ ಕನ್ನಡ ಭಾಷೆ ಉಳಿದಿಲ್ಲ. ಕನ್ನಡ ಭಾಷೆಯೂ ಗ್ರಾಮೀಣ ಪ್ರದೇಶದ ಬಡವರು, ಶ್ರಮಿಕರು, ರೈತಾಪಿ ವರ್ಗ, ಕೂಲಿಕಾರ್ಮಿರ ಮಕ್ಕಳೆ ಅತೀ ಹೆಚ್ಚು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಕೊಂಡು ಬರುತ್ತಿದ್ದರಿಂದ ಕನ್ನಡ ಭಾಷೆ ಸಂಪತ್ತು ಉಳಿದುಕೊಂಡು ಬಂದಿದೆ ಎಂದು ಹೇಳಿದರು.
ಇಂಗ್ಲಿಷ್ ಮಾಧ್ಯಮ ಕಲಿತರೆ ಮಾತ್ರ ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರಾಗಬಹುದು ಎಂಬುದು ಶುದ್ಧ ತಪ್ಪು ಕಲ್ಪನೆಯಾಗಿದೆ. ಭಾಷೆಯು ಪರಸ್ಪರ ಸಂಪರ್ಕ ಸಂಪತ್ತಿನಿಂದ ಕಲಿಯಬಹುದಾಗಿದೆ. ಮೊದಲು ಕನ್ನಡ ತಾಯಿ ಭಾಷೆ ಕಲಿತವರಿಗೆ ಎಲ್ಲಾ ಭಾಷೆಯಲ್ಲಿಯೂ ಹಿಡಿತ ಸಾಧಿಸಬಹುದು ಎಂದು ಮನವರಿಕೆ ಮಾಡಿದರು.
ಅಧ್ಯಕ್ಷತೆವಹಿಸಿದ್ದ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ಸಂಪತ್ತಿನ ಬಗ್ಗೆ ಅಭಿಮಾನ ಪ್ರತಿಯೊಬ್ಬರು ಬೆಳೆಸಿಕೊಂಡಾಗ ಮಾತ್ರ ಕನ್ನಡ ಉಳಿಯಲಿದೆ.
ಕನ್ನಡಕ್ಕೆ ತನ್ನದೆಯಾದ ಪರಂಪರೆ, ಹಿರಿಮೆ ಇದ್ದು, ಅನೇಕ ಮಹನಿಯರು ವಿವಿಧ ಸಾಧನೆ ಗೈದು ಕನ್ನಡ ಭಾಷೆಗೆ ಗೌರವ ತಂದಿದ್ದಾರೆ. ಈ ನಾಡಿನ ಮೂಲ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಇಂದಿನ ಮಕ್ಕಳ ಜವಾಬ್ದಾರಿಯಾಗಿದೆ ಎಂದರು.
ಇದೇ ವೇಳೆ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಚೈತ್ರಾ ಅವರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಹಾಗೂ 25 ಸಾವಿರ ರೂ.ಚೆಕ್ ನೀಡಿ ಗೌರವಿಸಲಾಯಿತು.
ಪ್ರಸ್ತುತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಕಲಬುರಗಿ ವಿಭಾಗದ ಒಟ್ಟು 352 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗಂಗಾಧರ ಮಹಾಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮರೆಡ್ಡಿ ತಂಗಡಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರತ್ನಾಕರ ಶೆಟ್ಟಿ, ಸಿ.ಎಫ್.ನಾಯ್ಕ, ಅಪರ ಜಿಲ್ಲಾಧಿಕಾರಿ ಪ್ರಕಾಶ.ಜಿ.ರಜಪೂತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ:ಅವಿನಾಶ ಮೆನನ್ ರಾಜೇಂದ್ರನ್, ಯಾದಗಿರಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹಿರಿಯ ಸಾಹಿತಿ ಜಗನಾಥ ಹೆಬ್ಬಾಳೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗುರುಲಿಂಗಪ್ಪ ಮಿಣಸಗಿ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಸೇರಿದಂತೆ ಇತರರಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ:ಕೆ.ಮುರಳಿಧರ ಸ್ವಾಗತಿಸಿ ನಿರೂಪಿಸಿದರು.