ಕರೋನಾ ನಿರ್ಮೂಲನೆ – ಪೌರ ಪ್ರಜ್ಞೆ ಅಗತ್ಯ.
ಕರೋನಾ ನಿರ್ಮೂಲನೆ – ಪೌರ ಪ್ರಜ್ಞೆ ಅಗತ್ಯ.
ಜಗತ್ತಿನಾದ್ಯಂತ ಮಾನವ ಸಮಾಜದ ಜೀವ ಸಂಕುಲಕ್ಕೆ ಅಪಾಯಕಾರಿಯಾದ ಗಂಭೀರ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವ ಮತ್ತು ಸಹಸ್ರಾರು ಜನರ ಸಾವು ನೋವುಗಳಿಗೆ ಕಾರಣವಾಗುತ್ತಿರುವ ಮಹಾಮಾರಿ ಕರೋನಾ ವೈರಸ್ ನಿರ್ಮೂಲನೆಗೆ ಪ್ರಪಂಚದ ಎಲ್ಲ ರಾಷ್ಟ್ರಗಳು ಲಾಕ್ ಡೌನ್ , ಜನಜಾಗೃತಿ, ಸಾಮಾಜಿಕ ಅಂತರ ಪಾಲನೆ, ಚಿಂತನ ಮಂಥನಗಳ ಮೂಲಕ ಹಗಲಿರುಳು ಶ್ರಮಿಸುತ್ತಿವೆ.
ಕರೋನಾ ವೈರಸ್ ಮಹಾಮಾರಿಗೆ ಮನುಷ್ಯನ ಯಾಂತ್ರಿಕ ಜೀವನ, ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ರಾಸಾಯನಿಕ ವಸ್ತುಗಳು ಉತ್ಪಾದನೆ, ಹೆಚ್ಚು ಪ್ಲಾಸ್ಟಿಕ್ ಬಳಕೆ, ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಕೃತಿಕ ಅರಣ್ಯ ಮತ್ತು ಅರಣ್ಯ ಸಂಪನ್ಮೂಲಗಳ ನಾಶ, ಸಹಸ್ರಾರು ಜೀವಸಂಕುಲಗಳು ನಾಶ, ಬೃಹತ್ ಪ್ರಮಾಣದ ಕೈಗಾರಿಕೆಗಳ ವಿವಿಧ ಮಲೀನತೆಗಳು ಮುಂತಾದವುಗಳ ಕಾರಣವಾಗಿವೆ ಎಂದು ಹೇಳಬಹುದು.
ಇವುಗಳ ಪರಿಣಾಮದಿಂದ ಪರಿಸರದಲ್ಲಿ ಕರೋನಾದಂತಹ ವೈರಸ್ ಗಳು ಉತ್ಪತ್ತಿಯಾಗಿ ಮನುಷ್ಯನ ಹಾಗೂ ಜೀವಸಂಕುಲಗಳು ಮಾರಣ ಹೋಮಕ್ಕೆ ನಾಂದಿಯಾಡುತ್ತಿದೆ. ಮನುಷ್ಯ ನಿಸರ್ಗದತ್ತವಾದ ಸಹಜವಾದ ಬದುಕಿನಿಂದ ವಿಮುಖವಾದಷ್ಟು, ಔಪಚಾರಿಕ, ಕೃತಕತೆಗೆ, ಯಾಂತ್ರಿಕತೆಗೆ ಒಳಗಾದಷ್ಟು ಕರೋನಾದಂತಹ ವಿಚಿತ್ರ ರೋಗಗಳಿಗೆ ತುತ್ತಾಗುವುದರಲ್ಲಿ ಸಂದೇಹವೇ ಇಲ್ಲ.
ಈ ಕರೋನಾ, ಮನುಷ್ಯನ ಸಾಮಾಜಿಕ ಬದುಕನ್ನು ಅಸ್ತವ್ಯಸ್ತತೆಗೊಳಿಸಿದೆ, ಜನಸಾಮಾನ್ಯರ ಜೀವನ ಊಟ, ವಸತಿ ಇಲ್ಲದೆ ನಿರ್ಗತಿಕರನ್ನಾಗಿ ಮಾಡಿದೆ. ಆತಂತ್ರದಲ್ಲಿ, ಹಲವು ತಲ್ಲಣಗಳಿಲ್ಲಿ ಬದುಕುವಂತೆ ಮಾಡಿದೆ. ಸರ್ಕಾರಗಳು ಹಲವು ಮೂಲಭೂತ ಸೌಕರ್ಯಗಳು, ಸೌಲಭ್ಯಗಳನ್ನು ನೀಡುತ್ತಿದ್ದರೂ ಸಹ ಆ ಜನರ ನೆಮ್ಮದಿ, ಶಾಂತಿ, ಸಂತೃಪ್ತಿಯನ್ನು ಈ ಕರೋನಾ ಕಸಿದುಕೊಂಡಿದೆ.
ಕರೋನಾ ಮಹಾಮಾರಿಯ ಕುರಿತು ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು, ಹಗುರವಾಗಿ ಪರಿಗಣಿಸಬಾರದು. ಈ ವೈರಸ್ ನ ಅಪಾಯದಿಂದ ಪಾರಾಗಲು ಮುಂಜಾಗ್ರತಾ ಕ್ರಮಗಳನ್ನು ಪ್ರತಿಯೊಬ್ಬರೂ ತಪ್ಪದೇ ಪಾಲಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮತ್ತು ವೈದ್ಯಕೀಯ ಕ್ಷೇತ್ರದ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಮನುಷ್ಯ ಜೀವಗಳನ್ನು ತೆಗೆದುಕೊಳ್ಳುತ್ತಿರುವ ಈ ಕರೋನಾದ ಅಪಾಯಕಾರಿ ಗಂಭೀರ ಸನ್ನಿವೇಶಗಳನ್ನು ಮಾನವ ಸಮಾಜ ಎದುರಿಸಬೇಕಾಗುತ್ತದೆ.
ಕರೋನಾ ಸಮಸ್ಯೆ ಯಾವುದೇ ಜಾತಿ, ಜನಾಂಗ, ಧರ್ಮದ, ಪಂಥದ, ಸಮುದಾಯದ ಸಮಸ್ಯೆಯಲ್ಲ, ಇದು ಇಡೀ ಜಾಗತಿಕ ಮಾನವ ಕುಲದ ಮಾರಣಾಂತಿಕ ಸಮಸ್ಯೆಯಾಗಿದೆ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಳ್ಳಬೇಕು.
ಸರ್ವರೂ ಇದರ ನಿರ್ಮೂಲನೆಗೆ ಕಂಕಣಬದ್ದರಾಗಬೇಕು. ಪೌರ ಪ್ರಜ್ಞೆಯೊಂದಿಗೆ ಮನೆಯಿಂದ ಹೊರಗೆ ಬಾರದೆ ಮನುಷ್ಯ ಸಂಕುಲದ ಜೀವನಕ್ಕೆ ಗಂಡಾಂತರ, ಕಂಟಕ ತಂದಿರುವ ಕರೋನಾದಿಂದ ಮುಕ್ತರಾಗಲು ಸರ್ವರೂ ಪ್ರಜ್ಞಾವಂತಿಕೆಯಿಂದ ಶ್ರಮಿಸೋಣ.
ಮನುಷ್ಯ ಸಂಕುಲದ ಜೀವಗಳನ್ನು ಉಳಿಸೊಣ. ಕರ್ನಾಟಕದ ಎಲ್ಲಾ ಹಿರಿಯ ಸಾಹಿತಿಗಳು, ಚಿಂತಕರು, ವಿದ್ವಾಂಸರು, ಸಂಶೋದಕರು, ಪ್ರಾಧ್ಯಾಪಕರು ಕರೋನಾದ ಪರಿಹಾರ ಕುರಿತು ಸಂದೇಶಗಳನ್ನು, ಪರಿಹಾರ ಕ್ರಮಗಳನ್ನು ನೀಡಬೇಕು ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಬೇಕು. ಚಿಂತನ ಮಂಥನಗಳನ್ನು ನಡೆಸಬೇಕು.
ಸರ್ವ ಜನಾಂಗ, ಜಾತಿ, ಧರ್ಮ, ಪಂಥಗಳನ್ನದೆ ಸರ್ವರೂ ಒಳಗೊಂಡು ಸಾಮೂದಾಯಿಕ ಜವಾಬ್ದಾರಿ, ಹೊಣೆಗಾರಿಕೆಯಿಂದ ಸರ್ವರೂ ಕರೋನಾ ಕಂಟಕ ದೂರವಾಗಿಸಲು ಅವಿರತ ಶ್ರಮಿಸುವ ತುಂಬಾ ಅಗತ್ಯತೆ ಇದೆ. ಈ ಸಂದರ್ಭದಲ್ಲಿ ಕರೋನಾ ನಿರ್ಮೂಲನೆಗೆ ಹಗಲಿರುಳು ಶ್ರಮಿಸುತ್ತಿರುವ ಸರ್ವ ವೈದ್ಯರಿಗೂ, ನರ್ಸಗಳಿಗೂ, ಪೋಲಿಸ್ ಇಲಾಖೆಗೂ, ಅನೇಕ ಸಂಘ ಸಂಸ್ಥೆಗಳಿಗೂ, ಪತ್ರಕರ್ತರಿಗೂ, ವಿವಿಧ ಮಾದ್ಯಮಗಳಿಗೂ ಅನಂತ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
– ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪುರ ಜಿಲ್ಲೆ. ಯಾದಗಿರಿ ಮೊ.9901559873