KBJNL ಅಧಿಕಾರಿಗಳ ನಿರ್ಲಕ್ಷ ಅಪಾರ ಬೆಳೆ ನಾಶ-ಮುದ್ನಾಳ ಆಕ್ರೋಶ
ಕೆಬಿಜೆಎನ್ನೆಲ್ ಅಧಿಕಾರಿಗಳೊಡನೆ ತುರ್ತು ಸಭೆ
ಜೋಳದಡಗಿ ಬ್ಯಾರೇಜ್ ಗೇಟ್ ತೆರೆಯದ ಕಾರಣ ಸಾವಿರಾರು ಎಕರೆ ಬೆಳೆ ನಾಶ
ಅಧಿಕಾರಿಗಳ ಹೊಣೆಗೇಡಿ ರೈತರ ಭೂಮಿ ಜಲಾವೃತ
ಯಾದಗಿರಿಃ ಗುಲಸರಂ ಬ್ಯಾರೇಜ್‍ಗಿಂತ ಜೋಳದಡಗಿ ಬ್ಯಾರೇಜ್‍ನ ನೀರಿನ ಸಾಮರ್ಥ್ಯ ಹೆಚ್ಚಿದೆ. 0.916 ಸಾಮರ್ಥ್ಯ ಹೊಂದಿರುವ ಈ ಬ್ಯಾರೇಜ್‍ನ ಗೇಟ್‍ಗಳನ್ನು ಎತ್ತದ ಪರಿಣಾಮ ಸೋಮವಾರ ಜೋಳದಡಗಿ ಬ್ಯಾರೇಜ್ ವ್ಯಾಪ್ತಿ ದೊಡ್ಡ ಅನಾಹುತವೇ ಸಂಭವಿಸಿದೆ ಇದಕ್ಕೆಲ್ಲ ಬ್ಯಾರೇಜ್ ಗೇಟ್ ಎತ್ತದೆ ನೀರು ಬಿಡದಿರುವುದೇ ಕಾರಣ. ಹೀಗಾಗಿ ಜನರು ಮತ್ತಷ್ಟೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಸೋಮವಾರ ನಗರದ ಶಾಸಕರ ಕಚೇರಿಯಲ್ಲಿ ಕೆಬಿಜೆಎನ್ನೆಲ್ ಅಧಿಕಾರಿಗಳೊಡನೆ ತುರ್ತು ಸಭೆ ಕರೆದು ಮಾತನಾಡಿದ ಅವರು, ಮಹಾರಾಷ್ಟ್ರದ ಉಜನಿ ಮತ್ತು ವೀರ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಲಾಗುವುದು ಎಂಬ ಸೂಚನೆ ಬಂದರೂ ಜೋಳದಡಗಿ ಬ್ಯಾರೇಜ್‍ನ ಗೇಟ್‍ಗಳನ್ನು ತೆರೆಯದೆ ನಿರ್ಲಕ್ಷ್ಯ ವಹಿಸಿದ ನಿಮ್ಮ ಬೇಜವಬ್ದಾರಿ ವರ್ತನೆಗೆ ಏನೆನ್ನಬೇಕೊ ತಿಳಿಯುತ್ತಿಲ್ಲ ಎಂದರು.
ಪ್ರಮಾದವಾದ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಂಡರೆ ಯಾವುದೇ ಪ್ರಯೋಜನವಾಗದು. ಜೋಳದಡಗಿ ಬ್ಯಾರೇಜ್ ಭರ್ತಿಯಾದ ಕಾರಣ ಕೋಟ್ಯಾಂತರ ರೂ.ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿದ ನಂತರವಷ್ಟೇ ಸಮಗ್ರ ಮಾಹತಿ ಸಿಗಲಿದೆ ಎಂದು ಹೇಳಿದರು.
ಕೆಬಿಜೆಎನ್ನೆಲ್‍ನ ಎಇಇ ಬಸವಣ್ಣಪ್ಪ ಮಾತನಾಡಿ, ಬ್ಯಾರೇಜ್‍ನಲ್ಲಿ ಅಳವಡಿಸಲಾದ ಗೇಟ್‍ಗಳು ತುಕ್ಕು ಹಿಡಿದಿದ್ದರಿಂದ ತೆಗೆಯಲು ತೊಂದರೆಯಾಗಿದೆ. ಶೇ.40 ರಷ್ಟು ಗೇಟ್‍ಗಳನ್ನು ತೆಗೆಯಲಾಗಿತ್ತು. ಉಳಿದ ಗೇಟ್‍ಗಳನ್ನು ತೆಗೆಯುವ ಕಾರ್ಯ ಮುಂದುವರೆದಿತ್ತು.
ಆದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದ ಪರಿಣಾಮ ಉಳಿದ ಗೇಟ್‍ಗಳನ್ನು ತೆಗೆಯಲಾಗಲಿಲ್ಲ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಎಲ್ಲ ಗೇಟ್‍ಗಳನ್ನು ತೆರೆದಿದ್ದರೆ ಹೂಳು ಕೂಡ ನದಿಗೆ ಹರಿಯುತ್ತಿತ್ತು. ಈ ರೀತಿ ಸಮಸ್ಯೆಯಾಗುತ್ತದೆ ಎಂದು ಮೊದಲೇ ನಿಮಗೆ ಗೊತ್ತಿರಬೇಕಲ್ಲವೆ? ಈಗಾಗಿರುವ ಪ್ರಮಾದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಯನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದು.
ಮುಂದೆ ಈ ರೀತಿ ನಿರ್ಲಕ್ಷೃ ವಹಿಸಿದರೆ ಆಗುವ ಪರಿಣಾಮವೇ ಬೇರೆ ಇರುತ್ತದೆ ಎಂದು ಎಚ್ಚರಿಕೆನೀಡಿದರು. ಅಧಿಕಾರಿಗಳಾದ ಎ.ಬಿ.ರಡ್ಡಿ, ಪ್ರವೀಣಕುಮಾರ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಹತ್ತಿಕುಣಿ ಇತರರಿದ್ದರು.
—————-