ಜನಮನ
ಕಲಬುರಗಿಯ ಮಲ್ಲಿಕಾರ್ಜುನ್ ಖರ್ಗೆಗೆ ಎಐಸಿಸಿ ಸಾರಥ್ಯ?
ನವದೆಹಲಿ : ಲೋಕಸಭೆ ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆಹೊತ್ತು ಎಐಸಿಸಿ ಅದ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದಾರೆ. ಪರಿಣಾಮ ಕಳೆದ ಎರಡು ತಿಂಗಳುಗಳಿಂದ ಕಾಂಗ್ರೆಸ್ ಹೊಸ ಅದ್ಯಕ್ಷರಿಗಾಗಿ ಕಸರತ್ತು ನಡೆಸುತ್ತಿದೆ. ಇಂದು ದೆಹಲಿಯಲ್ಲಿ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು ನೂತನ ಸಾರಥಿಯ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಮಾಜಿ ಕೇಂದ್ರ ಸಚಿವ, ಹಾಗೂ ಗಾಂಧಿ ಪರಿವಾರಕ್ಕೆ ಆಪ್ತರಾಗಿರುವ ಕರ್ನಾಟಕದ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾಗಿ ಐದು ವರ್ಷಗಳ ಕಾಲ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸಿರುವ ಖರ್ಗೆ ಅವರಿಗೆ ಎಐಸಿಸಿ ಪಟ್ಟ ನೀಡಬೇಕೆಂಬುದು ಪಕ್ಷದಲ್ಲಿನ ಹಿರಿಯರ ಅಭಿಪ್ರಾಯವಾಗಿದೆ ಎನ್ನಲಾಗಿದೆ. ಅಂತೆಯೇ ಮಾಜಿ ಸಚಿವ ಮುಕುಲ್ ವಾಸ್ನಿಕ್, ರಾಹುಲ್ ಗಾಂಧಿ ಆಪ್ತರು, ಯುವ ನಾಯಕರಾದ ಸಚಿನ್ ಪೈಲಟ್, ಜೋತಿರಾಧಿತ್ಯ ಸಿಂಧಿಯಾ ಅವರ ಹೆಸರುಗಳೂ ರೇಸ್ ನಲ್ಲಿವೆ.