ದೇಶ ಮಾರಿದ್ದರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ – ಮಲ್ಲಿಕಾರ್ಜುನ್ ಖರ್ಗೆ
ಕಲಬುರಗಿ: ದೇಶ ಮಾರಿದ್ದರೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ನಾನು ಚಹಾ ಮಾರಿದ್ದೇನೆ, ದೇಶವನ್ನಲ್ಲ. ಆದರೆ, ಕಾಂಗ್ರೆಸ್ ದೇಶವನ್ನೇ ಮಾರಿದೆ. ಕಾಂಗ್ರೆಸ್ ಗೆ ನೀತಿ, ನೀಯತ್ತು ಮತ್ತು ನಾಯಕನೂ ಇಲ್ಲ ಎಂದು ಗುಜರಾತ್ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
ಕಲಬುರಗಿ ನಗರದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಭಾವ ಹೆಚ್ಚಾಗಿದೆ. ನರೇಂದ್ರ ಮೋದಿ, ಬಿಜೆಪಿಯ ತಪ್ಪು ನಿರ್ಣಯಗಳು ಗುಜರಾತಿನ ಜನರಿಗೆ ಅರ್ಥವಾಗಿದೆ. ಪರಿಣಾಮ ಈ ಸಲ ಗುಜರಾತಿನಲ್ಲಿ ದೊಡ್ಡ ಪೈಪೋಟಿ ನಡೆಯುತ್ತಿದೆ. ಅದಕ್ಕಾಗಿ ನರೇಂದ್ರ ಮೋದಿ ಜನರ ಗಮನವನ್ನು ಸೆಳೆಯಲು ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಇನ್ನೆಷ್ಟು ದಿನ ಚಹಾ ಮಾರಿದ್ದನ್ನೇ ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುತ್ತೀರಿ ಎಂದು ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.