ಗುರಿ ಬೆನ್ನಟ್ಟಿ ಸಾಧಿಸುವ ಛಲವಂತಿಕೆ ಅಗತ್ಯ-ಪಾಟೀಲ್
ಪ್ರೇರಣಾ ಕಮ್ಮಟ ಕಾರ್ಯಕ್ರಮ
ಯಾದಗಿರಿ, ಶಹಾಪುರಃ ಗುರಿ, ಧೈರ್ಯ, ಶ್ರದ್ಧೆ ಮತ್ತು ಆಸಕ್ತಿ ಜೊತೆಗೆ ನಿರಂತರ ಪ್ರಯತ್ನ ಇವುಗಳನ್ನು ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಂಡಲ್ಲಿ ಮುಂದೆ ಯಶಸ್ಸಿನ ಮೆಟ್ಟಿಲು ತಲುಪುವದರಲ್ಲಿ ಸಂಶಯವಿಲ್ಲ ಎಂದು ಬೀದರನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ(ರಿ)ದ ಅಧ್ಯಕ್ಷ ಬಸವಕುಮಾರ ಪಾಟೀಲ್ ತಿಳಿಸಿದರು.
ನಗರದ ಜೀವೇಶ್ವರ ಶಾಲೆಯಲ್ಲಿ ಸಂತಪಾಲ್ ಪ್ರೌಢ ಶಾಲೆ ಮತ್ತು ಜೀವೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ನಡೆದ ಪ್ರೇರಣಾ ಕಮ್ಮಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನಸುಗಳನ್ನು ಕಾಣುವುದು ಸಹಜ ಗುರಿಯನ್ನು ಸಹ ಹೊಂದಿರಬಹುದು ಆದರೆ ಜೀವನದಲ್ಲಿ ಕನಸುಗಳನ್ನು ಬೆನ್ನಟ್ಟಿ ಸಾಧಿಸುವ ಛಲವಂತಿಕೆ ಇರದಿದ್ದರೆ, ಯಾವ ಗುರಿ, ಕನಸು ಕಂಡರೂ ಪ್ರಯೋಜನವಿಲ್ಲ. ಸಾಧನೆಯು ಪ್ರತಿಯೊಬ್ಬರ ಸೊತ್ತು ಶೈಕ್ಷಣಿಕ ಪ್ರಗತಿಯ ಜೊತೆಗೆ ಮಾನವೀಯ ಮೌಲ್ಯ, ಸಾಮಾಜಿಕ ಚಿಂತನೆ ಜೊತೆಗೆ ರಾಷ್ಟ್ರಭಕ್ತಿಯ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಷ್ಠಾನದ ಸಂಪನ್ಮೂಲ ವ್ಯಕ್ತಿ ಪ್ರಕಾಶ ದೇಶಮುಖ ಮಾತನಾಡಿ, ಸಾಧನೆಗೆ ಬಡತನ ಅಡ್ಡಿಯಲ್ಲಿ ಬಡತನದಲ್ಲಿ ಹುಟ್ಟಿದ ಅದೆಷ್ಟೋ ಜನ ಮಹಾನ್ ವ್ಯಕ್ತಿಗಳಾಗಿ, ದೊಡ್ಡ ಸಾಧಕರಾಗಿ ಅಷ್ಟೇ ಏಕೆ ದೇಶದ ಪ್ರಧಾನ ಮಂತ್ರಿಗಳು ಸಹ ಆಗಿದ್ದಾರೆ ಎಂದು ಮಕ್ಕಳಲ್ಲಿ ಸ್ಪೂರ್ತಿ ತುಂಬುವ ವಿಚಾರಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಹ ಶಿಕ್ಷಕ ಶಿವಾನಂದ ಜಮಾದಾರ ಮಾತನಾಡಿ, ಮಕ್ಕಳಲ್ಲಿ ಆಸಕ್ತಿ, ಕ್ರೀಯಾಶೀಲತೆಯ ಗುಣವಿದ್ದರೆ ಯಶಸ್ಸು ಸಾಧ್ಯ. ಓದಲು ಏಕಾಗ್ರತೆ ಬಹುಮುಖ್ಯ ಮಕ್ಕಳು ಏಕಾಗ್ರತೆಗಾಗಿ ಧ್ಯಾನ, ಯೋಗ ಮಾಡುವದು ಲೇಸು. ಅದರಿಂದ ಮನಸ್ಸು ಪ್ರಫುಲ್ಲತೆಯಿಂದ ಕೂಡಿರಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಜೀವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಫಿರಂಗಿ, ಮಲ್ಲಿಕಾರ್ಜುನ ಚಿಲ್ಲಾಳ, ಪ್ರಾಥಮಿಕ ಶಾಲಾ ಮುಖ್ಯ ಗುರು ಪಂಚಾಕ್ಷರಿ ಕೆ. ಹಿರೇಮಠ, ಪ್ರೌಢ ಶಾಲೆಯ ಮುಖ್ಯ ಗುರು ಪ್ರವೀಣ ಫಿರಂಗಿ ಹಾಗೂ ಸಂತಪಾಲ ಪ್ರೌಢ ಶಾಲೆಯ ಮುಖ್ಯಗುರು ಸ್ಟ್ಯಾನ್ಲಿ ವರದರಾಜ, ಶಿಕ್ಷಕರಾದ ರಾಹುಲ್ ಡಿ.ಭಿಂಗೆ, ಸುರೇಖಾ ಏಕಬೋಟೆ, ವಿಜಯಲಕ್ಷ್ಮೀ, ಪ್ರತಿಭಾ ಉಪಸ್ಥಿತರಿದ್ದರು. ಶಿಕ್ಷಕ ಮೌನೇಶ ಹಯ್ಯಾಳಕರ್ ನಿರೂಪಿಸಿದರು. ಲಕ್ಷ್ಮೀ ಫಿರಂಗಿ ಸ್ವಾಗತಿಸಿ ವಂದಿಸಿದರು.