ಪ್ರಮುಖ ಸುದ್ದಿ

ಶ್ರದ್ಧೆಯಿಂದ ಶ್ರಮಿಸಿದವರು ಸನ್ಮಾನಕ್ಕೆ ಅರ್ಹರು-ನ್ಯಾ.ರಾಚಪ್ಪ ತಾಳಿಕೋಟೆ

ಹಿರಿಯ ವಕೀಲ ಹಾಲಬಾವಿಗೆ ವೃತ್ತಿ ಸಾಧಕ ಪ್ರಶಸ್ತಿ ಪ್ರಧಾನ 

ವೃತ್ತಿ ಸಾಧಕ ಪ್ರಶಸ್ತಿ ಪ್ರಧಾನ ಗೌರವ ಸನ್ಮಾನ

ಯಾದಗಿರಿಃ ಯಾವುದೇ ವೃತ್ತಿಯಲ್ಲಿ ಶಿಸ್ತು, ಸಂಯಮ ರೂಡಿಸಿಕೊಂಡು ಪ್ರತಿಭೆ ಮೂಲಕ ಅಗಾಧ ಸಾಧನೆ ಮಾಡಿದ್ದಲ್ಲಿ ಅಂತವರನ್ನು ಗುರುತಿಸಿ ಸನ್ಮಾನ ಅಥವಾ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಆದರೆ ಇಲ್ಲಿ ವಕೀಲ ವೃತ್ತಿಯಲ್ಲಿ ಕಳೆದ 50 ವರ್ಷದಿಂದ ಪ್ರಾಮಾಣಿಕ ಸೇವೆಗೆ ಹೆಸರಾದ ಹಿರಿಯ ವಕೀಲರಿಗೆ ವೃತ್ತಿ ಸಾಧಕ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ವಕೀಲರ ಜವಬ್ದಾರಿ ಹೆಚ್ಚುವಂತೆ ಮಾಡಿದೆ ಎಂದು ಜಿಲ್ಲಾ ಸತ್ರ ನ್ಯಾಯಧೀಶ ರಾಚಪ್ಪ ಕೆ.ತಾಳಿಕೋಟೆ ಹೇಳಿದರು.

ಜಿಲ್ಲೆಯ ಶಹಾಪುರ ನಗರದ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ವಕೀಲರ ಸಂಘ ಆಯೋಜಿಸಿದ್ದ ವೃತ್ತಿ ಸಾಧಕ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಕೀಲರ ಸಂಘದಲ್ಲಿ ವಕೀಲರ ಸಾಧನೆ ಕುರಿತು ಪ್ರಶಸ್ತಿ ನೀಡುತ್ತಿರುವುದು ಬಹುಷ ಇದೇ ಮೊದಲ ಬಾರಿಗೆ ಅನಿಸುತ್ತಿದೆ. ಮಾದರಿ ವಕೀಲರಾಗಿ ಸನ್ಮಾನಕ್ಕೆ ಭಾಜರಾಗಬೇಕಿದ್ದಲ್ಲಿ, ಸನ್ಮಾನಿತರನ್ನು ಆದರ್ಶವಾಗಿಟ್ಟುಕೊಂಡು, ವೃತ್ತಿಯಲ್ಲಿ ಶ್ರದ್ಧೆ, ಶಿಸ್ತು ರೂಢಿಸಿಕೊಂಡಲ್ಲಿ ನೀವು ಮುಂದೆ ಇಂತಹ ಸನ್ಮಾನಕ್ಕೆ ಅರ್ಹರಾಗುತ್ತೀರಿ.

ಯುವ ವಕೀಲರು ಕೇವಲ ಹಣದಾಸೆಗೆ ದುಡಿಯುವದನ್ನು ಬಿಟ್ಟು ನ್ಯಾಯಕ್ಕಾಗಿ ತಮ್ಮ ಹತ್ತಿರ ಬಂದವರಿಗೆ ಸೂಕ್ತ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ವೃತ್ತಿ ಬಗ್ಗೆ ಅಪಾರ ಗೌರವ ಹೊಂದಿರಬೇಕು. ಯಾವುದೇ ಪ್ರಕರಣವಾಗಿರಲಿ ಆ ಬಗ್ಗೆ ಸಮಗ್ರ ಅಧ್ಯಯನ ಅಗತ್ಯವಿದೆ. ಪ್ರಕರಣದಲ್ಲಿ ಜಯ ಸಾಧಿಸಲು ನಿಮ್ಮ ಶ್ರಮ ಅಗತ್ಯ ಎಂದರು.

ಹಿರಿಯ ವಕೀಲ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ವೃತ್ತಿ ಸಾಧಕ ಪ್ರಶಸ್ತಿಗೆ ಭಾಜನರಾದ ಹಿರಿಯ ವಕೀಲ ಹಾಲಭಾವಿ ಅವರ ಶಿಸ್ತು ನಡತೆ ಸಾಧನೆ ಬಣ್ಣಿಸಲು ಭಾಷೆ ಕುಂಟುತ್ತದೆ. ಇದು ಅಪರೂಪದ ವ್ಯಕ್ತಿಗೆ ಸಂದ ಗೌರವ ಎಂದು ಬಣ್ಣಿಸಿದರು.

ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್ಪ್ರೈಡ್ ಮಾತನಾಡಿ, ಜ್ಞಾನಿಯು ತನ್ನ ಜ್ಞಾನವನ್ನು ಒಮ್ಮೆ ಮಾತ್ರ ಗೊತ್ತು ಮಾಡುತ್ತಾನೆ. ಕ್ರಮೇಣ ವಿಕಾಶಿಸುತ್ತದೆ. ದಿನಾಲು ಗೊತ್ತು ಮಾಡುವ ಅಗತ್ಯತೆ ಇರುವದಿಲ್ಲ. ಸಂಘದಿಂದ ಇಂತಹ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಾಧಕರನ್ನು ಗುರುತಿಸುವುದು ನಮ್ಮ ಕರ್ತವ್ಯ ಎಂದರು.

ವೃತ್ತಿ ಸಾಧಕ ಪ್ರಶಸ್ತಿ ಸ್ವೀಕರಿಸಿದ ಹಿರಿಯ ವಕೀಲ ವೆಂಕಣ್ಣಗೌಡ ಹಾಲಬಾವಿ ಮಾತನಾಡಿ, ನಾನೇನು ಮಾತನಾಡಲಾರೆ, ನಿಮ್ಮ ಅಭಿಮಾನವನ್ನು ಕಂಡು ಪುಳಕಿತನಾಗಿದ್ದೇನೆ ಎಂದು ಭಾವುಕರಾದರು.

ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶ ಪ್ರಭು ಎನ್.ಬಡಿಗೇರ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಧೀಶ ಹಣಮಂತ್ರರಾವ್ ಕುಲಕರ್ಣಿ, ಕಾರ್ಯದರ್ಶಿ ಸಂತೋಷ್ ಸತ್ಯಂಪೇಟ ಉಪಸ್ಥಿತರಿದ್ದರು.

ಹಣಮೇಗೌಡ ಮರಕಲ್, ವಿಶ್ವನಾಥರಡ್ಡಿ ಸಾವೂರ, ಟಿ.ಗೋಪಾಲ್, ಚಂದ್ರಶೇಖರ ಲಿಂಗದಳ್ಳಿ, ವಿಶ್ವನಾಥರಡ್ಡಿ ಕೊಡಮನಳ್ಳಿ, ರಮೇಶ ದೇಶಪಾಂಡೆ, ಶಾಂತನಗೌಡ ಪಾಟೀಲ್, ಆರ್.ಎಂ.ಹೊನ್ನಾರಡ್ಡಿ, ಶರಬಣ್ಣ ರಸ್ತಾಪುರ ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button