ಬಳ್ಳಾರಿಯಲ್ಲಿ ನಾಗರಹಾವು ನಾಯಿಮರಿ ನುಂಗಿತ್ತಾ!?
‘ಕೊಡಗಾನ ಕೋಳಿ ನುಂಗಿತ್ತಾ…’ ಸಂತ ಶಿಶುನಾಳ ಶರೀಫ ಸಾಹೇಬರ ತತ್ವಪದ ಹಲವು ಚಿಂತನೆಗಳಿಗೆ ಹಚ್ಚುತ್ತದೆ. ಬದುಕಿನ ಬಣ್ಣವನ್ನು ಬಿಡಿಸಿ ಹೇಳುವ ಮೂಲಕ ಸಾಕ್ಷಾತ್ ದರ್ಶನ ಮಾಡಿಸುತ್ತದೆ. ಆದರೆ, ಇದೆಂತ ಕಲಿಗಾಲವೋ ಗೊತ್ತಿಲ್ಲ. ಬಳ್ಳಾರಿ ಜಿಲ್ಲೆಯ ಸಿರಿವಾರ ಬಳಿಯ ಜಮೀನೊಂದರಲ್ಲಿ ಏಳು ಅಡಿ ಉದ್ದದ ನಾಗರಹಾವೊಂದು ನಾಯಿಮರಿ ನುಂಗಲು ಯತ್ನಿಸಿದ ಘಟನೆ ನಡೆದಿದೆ.
ಹಾವಿನ ಬಾಯಿಗೆ ಸಿಕ್ಕ ನಾಯಿಮರಿ ಜೀವಭಯದಿಂದ ಒದ್ದಾಡಿದೆ. ತಪ್ಪಿಸಿಕೊಳ್ಳಲು ಸಾಕಷ್ಟು ಹೆಣಗಾಡಿದೆ ಆದರೂ ಪ್ರಯೋಜನವಾಗಿಲ್ಲ. ನಾಯಿಮರಿ ನುಂಗಲು ಮುಂದಾದ ಹಾವನ್ನು ಕಂಡಿ ಜನ ದಂಗಾಗಿ ನಿಂತಿದ್ದಾರೆ. ಇನ್ನೂ ಕೆಲವು ಸ್ಥಳೀಯರು ಹಾವಿನ ಬಾಯಿಂದ ನಾಯಿಮರಿಯನ್ನು ಉಳಿಸಲು ಯತ್ನಿಸಿದ್ದಾರೆ. ಆದರೆ, ಕೊನೆಗೂ ನಾಯಿಮರಿಯ ಪ್ರಾಣ ಪಕ್ಷಿ ಹಾರಿಹೋಗಿದೆ.
ಪರಿಣಾಮ ಕೆಲ ಸ್ಥಳೀಯರು ನಾಗರಹಾವನ್ನು ಕೋಲು, ಕಲ್ಲುಗಳಿಂದ ಹೊಡೆದು ಸಾಯಿಸಿದ್ದಾರೆ. ನಾಗರಹಾವು ನಾಯಿಮರಿಯನ್ನು ನುಂಗಲು ಯತ್ನಿಸಿದ ದೃಶ್ಯವನ್ನು ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಚ್ಚರಿಯ ದೃಶ್ಯವೀಗ ಜಿಲ್ಲೆಯಲ್ಲಿ ವೈರಲ್ ಆಗಿದೆ.