ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ – ಜಯಶ್ರೀ ಅಬ್ಬಿಗೇರಿ
ಹೃದಯದ ಹೃದಯವೇ ನೀ ಕಣ್ಣಿಗೆ ಬಿದ್ದಾಗಿನಿಂದ ಎಂಥ ತ್ರಿಪುರ ಸುಂದರಿಯರಿಗೂ ಮನಸ್ಸು ಸೋಲುತ್ತಿಲ್ಲ. ಮುಷ್ಟಿಯಷ್ಟಿರುವ ಹೃದಯದಲ್ಲಿ ನೂರಾರು ಕನಸುಗಳು ತಾವಾಗಿಯೇ ಗೂಡು ಕಟ್ಟಿಕೊಂಡಿವೆ. ನಿನ್ನ ಒಪ್ಪಿಗೆ ಕಾಯದೇ ಬೆಚ್ಚನೆಯ ಎದೆಯಲ್ಲಿ ನಿನ್ನಂದ ಬಚ್ಚಿಟ್ಟುಕೊಂಡು ಹೋದಲ್ಲೆಲ್ಲ ನಿನ್ನನ್ನು ಕರೆದೊಯ್ಯುತಿರುವೆ. ಲೋಕದಲ್ಲೆÉಲ್ಲ ನೀನೇ ತುಂಬಿರುವೆ.ಈ ಪುಟ್ಟ ಹೃದಯವನು ಮನಸಾರೆ ನಿನ್ನ ಕೈಲಿಡಲು ಕಣ್ಣ ರೆಪ್ಪೆಗಳನು ಅಂಟಿಸದೇ ಕಾಯುತಿರುವೆ. ಪ್ರಪಂಚವು ಒಪ್ಪಲಿ ಬಿಡಲಿ ನಾನೆಂದಿಗೂ ನಿನ್ನವನೇ ಗೆಳತಿ. ಸಣ್ಣ ಸಣ್ಣ ಆಸೆಗಳ ಸಂಭ್ರಮ, ಹೊತ್ತು ಗೊತ್ತಿಲ್ಲದೇ ನಿದ್ದೆ ಕೆಡಿಸುತಿದೆ. ನಿನ್ನ ಮೈ ಮಾಟದ ಅಂದ ಚೆಂದದ ಬಣ್ಣನೆ ಕೇಳಿದರೆ ಹುಟ್ಟುಗುರುಡನೂ ನಿನ್ನ ಕಿರು ಬೆರಳನು ಹಿಡಿಯಲು ಹಟ ಹಿಡಿಯುತ್ತಾನೆ. ಅಂತಾದ್ರಲ್ಲಿ ನಾನಾವ ಲೆಕ್ಕ? ಇನ್ನಾರಾದರೂ ನಿನ್ನ ಕೈ ಕೇಳಿ, ನೀ ಒಪ್ಪಿಬಿಟ್ಟರೆ ಎಂಬ ಚಿಂತೆ ಕಾಡುತಿದೆ. ಪ್ರೇಮಲೋಕದಲ್ಲಿ ಕೊನೆಯಾಗದ ಪ್ರೇಮಗೀತೆಯನ್ನು ಜೊತೆ ಜೊತೆಯಲ್ಲಿ ಹಾಡುವಾಸೆ ಕೇಳು ಸಿಂಗಾರಿ.
ಅಳಿಸಲಾಗದ ಬಂಧನದಲ್ಲಿ ಬಂಧಿಸಿಕೊಳ್ಳುವ ಆಸೆ. ಹದಿ ಹರೆಯದ ಹುಡುಗರನ್ನು ಕಾಡುವಂಥ, ಮನ ಕೆಡಿಸುವಂಥ, ಪರವಶಗೊಳಿಸುವಂಥ ಬಂಗಾರದ ರೂಪ ನಿನ್ನದು. ಅರಗಿಣ ಯಂಥ ಮಾತಿನ ಮಾಂತ್ರಿಕತೆ ಅಂತೂ ರಸಿಕರ ಮನಸೂರೆಗೊಳ್ಳುತ್ತದೆ. ಪಟ ಪಟನೆ ಪುಟಿಯುವ ಎದೆಯಲ್ಲಿ ನಿನ್ನದೇ ನೆನಪಿನ ಅಲೆಯ ತಕಧಿಮಿತವನು ಎಷ್ಟು ಹೇಳಿದರೂ ಸಾಲದು. ಪದಕೋಶಗಳಲ್ಲಿಯ ಪದಗಳು ಸಾಲವು. ಪ್ರಪಂಚದ ಪದಕೋಶದಲ್ಲಿರುವ ಬಣ್ಣನೆಯ ಪದಪುಂಜಗಳನು ಸಾಲು ಸಾಲಾಗಿ ನಿಲ್ಲಿಸಿದರೂ ಸಾಲುತಿಲ್ಲ. .
ಪ್ರೀತಿಯೊಂದು ಮಾಯಾವಿ ಲೋಕ ಎಂಬ ಮಾತೊಂದನು ಕೇಳಿದ್ದೆ. ಮಾಯಾಮೃಗ ಬೆನ್ನತ್ತಿದ ನನಗೆ ಮನದ ಬಯಲಲಿ ಬಯಕೆಗಳ ಅಮಲೇರುತಿದೆ. ಬಾಯ್ತೆರೆದು ಮಾತನಾಡಲಾರೆ. ಮೌನದ ಕಣ್ಣಲ್ಲೇ ಎಲ್ಲ ಹೇಳುವಾಸೆ. ನಗ್ನ ಕೊಟೆಯಲಿ ಒಂದಾಗುವಾಸೆ. ಚಿಗುರುವ ಮುನ್ನವೇ ಕನಸುಗಳ ಚಿವುಟಬೇಡ. ನನ್ನ ಮುತ್ತಿನ ಖನಿಯೇ. ಚಂದಿರನಂಥ ರೂಪವಿದ್ದರೂ ಹಾಸಿ ಹೊದ್ದು ಮಲಗುವಷ್ಟು ಸಿರಿವಂತಿಕೆ ನನ್ನ ಬಳಿ ಇಲ್ಲವೆಂದು ನನ್ನ ಪ್ರೀತಿ ನಿರಾಕರಿಸಿ, ಮೆತ್ತನೆಯ ಮನಸ್ಸಿನ ಮೇಲೆ ಗೀರಬೇಡ. ಗೀರಿನ ಕಲೆಯಲ್ಲಿ ಜೀವನ ಪೂರ್ತಿ ಜೀವಿಸುವ ಹಾಗೆ ಮಾಡಬೇಡ ಚೆಲುವೆ. ಚೆಂದುಳ್ಳಿ ಚೆಲುವಿಯರ ಮನವ ಚಂಚಲಗೊಳಿಸಿ ಬೇಟೆಯಾಡುವ ಮುಖವಾಡ ಹೊತ್ತ ಮಾಯಗಾರ ನಾನಲ್ಲ. ಬಿಸಿಲಿರಲಿ ಬಿರುಗಾಳಿ ಬೀಸುತಲಿರಲಿ ಮಳೆಯಿರಲಿ ನಡುಗುವ ಚಳಿಯಿರಲಿ ಕುಗ್ಗದೇ ಜಗ್ಗದೇ ಬಗ್ಗದೇ ನಿನ್ನ ಹೆಜ್ಜೆಯಲಿ ಹೆಜ್ಜೆಯಿಡುವೆ. ಪ್ರೀತಿಯ ಜ್ವರದ ಹಿತದಲಿ ಹಿಗ್ಗುತ ನಿನ್ನೊಂದಿಗೆ ಸದಾ ನಾನಿರುವೆ ಗೆಳತಿ.
ನಿನ್ನ ರಾಣ ಯಂತೆ ಸಾಕಲು ಬಂಗಲೆಯಂಥ ದೊಡ್ಡ ಅರಮನೆ ಇಲ್ಲದಿರಬಹುದು. ತಿಂಗಳ ಕೊನೆಯಲ್ಲಿ ಹಣಕ್ಕಾಗಿ ಪರದಾಡುವ ಸ್ಥಿತಿ ನನ್ನದಿರಬಹುದು. ಆದರೆ ಪ್ರೀತಿಗೆ ಎಂದೆಂದೂ ಬರವಿಲ್ಲ. ಬಡತನವಿಲ್ಲ. ಪ್ರೇಮ ದೇವತೆ ನನ್ನೆದೆಯಲ್ಲಿ ಕಾಲು ಮುರಿದುಕೊಂಡು ಕುಳಿತಿರುವಳು.ನನಗಾಗಿ ನಿನ್ನೊಲವಿಗಾಗಿ.ಒಲವ ಚಂದ್ರಿಕೆಯಲ್ಲಿ ಬಾಳು ತಾನೇ ಬೆಳಗುವುದು. ಒಲವಿದ್ದಲ್ಲಿ ಹಣದ ಕೊರತೆ ಒಂದು ಮುಖ್ಯವಾದ ವಿಷಯ ಅಲ್ಲವೇ ಅಲ್ಲ. ಇದು ಪ್ರೀತಿಯ ಚರಿತ್ರೆಯ ಪುಟದಲ್ಲಿ ದಾಖಲಾದ ಹೃದಯಗಳ ವಿಷಯ.
ಅಂದು ನಾನು ಆಫೀಸ್ ಕೆಲಸ ಮುಗಿಸಿ ಸಂಜೆ ವಾಯು ವಿಹಾರಕ್ಕೆಂದು ಉದ್ಯಾನವನಕ್ಕೆ ಕಾಲಿಟ್ಟೆ. ಚೆಲುವಾದ ಚೆಂಗುಲಾಬಿ ಹೂದೋಟದಲ್ಲಿ ಕೆನ್ನೆಗೆ ಕೈ ತಾಕಿಸಿ ಕಲ್ಲಿನ ಬೆಂಚಿನ ಮೇಲೆ ಕುಳಿತ ರಾಣ ಜೇನು ಕಂಡೆ. ಬಲ್ಲದ ನಲ್ಲನ ಕುರಿತು ಹೊಂಬಣ್ಣದ ಕನಸು ಕಾಣುತ್ತ ಕುಳಿತ ನಿನ್ನ ಕಂಡು ಮನಸ್ಸು ನಿನ್ನತ್ತ ವಾಲಿತು. ಕನಸಿನಲ್ಲಿ ಮುಳುಗಿದ ನೀನು ನನ್ನ ಕಂಡು ಒಂದು ಕ್ಷಣ ಗಾಬರಿಯಾದೆ. ಹೆದರಿದ ಹರಿಣ ಯಂತೆ ಕಣ್ಣಲ್ಲೇ ಪ್ರಶ್ನೆ ಚಿನ್ಹೆ ಹಾಕಿ ನನ್ನತ್ತ ನೋಡಿದೆ. ನಿನ್ನ ರೂಪಕ್ಕೆ ಜೊಲ್ಲು ಸುರಿಸದವರು ವಿರಳ ಬೆನ್ನು ಬೀಳದವರು ಇನ್ನೂ ವಿರಳ. ಹೀಗಾಗಿ ನೀನು ರೋಸಿ ಹೋಗಿರಲಿಕ್ಕೂ ಸಾಕು. ಆದರೂ ನನ್ನನ್ನು ಕಂಡು ನಿನ್ನ ಮುಖದಲ್ಲಿ ಸಣ್ಣದೊಂದು ನಗುವರಳಿತು. ಆ ಕ್ಷಣಕ್ಕೆ ನಾನೇ ಅದೃಷ್ಟವಂತ ಎಂದುಕೊಂಡೆ.
ಸುಮ್ಮನೆ ಸುಯ್ಯೆಂದು ಸೂಸುತ್ತಿದ್ದ ಸುಳಿಗಾಳಿ ನಿನ್ನ ನುಣುಪಾದ ಮೈಯನು ನವಿರಾಗಿ ಸ್ಪರ್ಶಿಸುತ್ತಿತ್ತು. ಇದ್ದಕ್ಕಿದ್ದಂತೆ ಕಾರ್ಮೋಡ ಕರಗಿ ಸಣ್ಣಗೆ ಹನಿಯ ತೊಡಗಿತು. ನೀನುಟ್ಟ ಹಾಲು ಬಿಳುಪಿನ ಬಣ್ಣದ ರವಿಕೆ ಕೆಂಪು ಜರಿಯಂಚಿನ ಲಂಗ ಮೈಗಂಟಿಕೊಂಡವು. ಉಬ್ಬಿದೆದೆಯ ನೋಟ ನನ್ನೆದೆಯ ತಾಳ ತಪ್ಪಿಸತೊಡಗಿತು.ಒಮ್ಮೆಲೇ ಜೋರಾದ ಗಾಳಿ ಮತ್ತು ಗುಡುಗು ಸಿಡಿಲಿನ ಅಬ್ಬರಕೆ ಪಾಪ ಹೆಣ್ಣು ಜೀವ ಹೆದರದೇ ಹೇಗೆ ಇದ್ದೀತು? ಮುಂದೆ ನಿಂತಿದ್ದ ನನ್ನ, ಅರಿವಿಲ್ಲದೇ ನವಿರಾದ ತೋಳುಗಳಿಂದ ತಬ್ಬಿಕೊಂಡಿತು. ಬಳ್ಳಿಯೊಂದು ಮರವನು ಆಸೆಯಿಂದ ಆಸರೆಗೆ ಅಪ್ಪಿದಂತಾಯಿತು. ಬೆರಳಿಗೆ ಬೆರಳು ತಾಗಿಸಿ ಚಿತ್ರ ಬಿಡಿಸಿದಾಗ ಮೈಯಲೆಲ್ಲ ರೋಮಾಂಚನ. ನನಗಾಗ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂಥ ಅನುಭವ. ಆಹಾ! ಎಂಥ ಸುದಿನ ನನ್ನ ಬಾಳಿಗೊಬ್ಬ ಒಳ್ಳೆಯ ಬಾಳ ಸಂಗಾತಿ ಸಿಕ್ಕಳು. ಎಂದು ಹೃದಯ ಕುಣ ಯತೊಡಗಿತು. ಅದೇ ಖುಷಿಯನ್ನು ನಿನ್ನೊಂದಿಗೆ ಚುಟುಕಾಗಿ ಕಿವಿಯಲ್ಲಿ ಐ ಲವ್ ಯೂ ಎಂದು ಉಸುರಿದೆ. ಹಾಲುಗಲ್ಲದಲ್ಲಿ ಬೆಳದಿಂಗಳಿನಂಥ ಕಿರುನಗೆಯ ಚೆಲ್ಲಿ ಉತ್ತರ ಕೊಡದೇ ಓಡಿದೆ. ನಿನ್ನ ಹಿಂದೆಯೇ ಓಡಿದೆ ಆದರೆ ಮನೆ ಮುಂದೆ ನಿಂತ ನಿನ್ನ ಅಪ್ಪನÀ ಕಂಡು ಮರಳಿದೆ.
ದಿನಗಳೆದಂತೆ ನಾನು ನಾನಾಗಿ ಉಳಿದಿಲ್ಲ. ನಾನು ನೀನು ಬೇರೆ ಬೇರೆ ಎಂಬ ಭೇದವೂ ಉಳಿದಿಲ್ಲ. ನೀನೇ ನಾನು ನಾನೇ ನೀನು ಎಂಬ ಭಾವ ಮೈದಳೆದು ನಿಂತಿದೆ. ನನ್ನೊಳಗೆ ನೀನೊಬ್ಬಳೇ ಪ್ರೇಮ ದೇವತೆಯಾಗಿ ನೆಲೆ ನಿಂತಿರುವೆ. ನೀನೊಬ್ಬಳು ಜೊತೆಗಿದ್ದರೆ ಸಾಕು ಜಗವೇ ಬೇಕಿಲ್ಲ. ಜಗವೇ ನೀನಾಗಿರುವಾಗ ಜಗದ ಗೊಡವೆ ನನಗೆ ಬೇಕಿಲ್ಲ. ನನಗೆ ನೀನು ಬೇಕೇ ಬೇಕು. ನೀನಿಲ್ಲದೇ ನಾನಿಲ್ಲವೇ ಇಲ್ಲ ಎಂಬ ಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಸ್ತವದಲ್ಲಿ ಅಲ್ಲ ಕಲ್ಪನಾ ಲೋಕದಲ್ಲೂ ನಿನ್ನ ಬಿಟ್ಟಿರಲಾರೆ ಎನ್ನುವಷ್ಟು ಮನಸ್ಸು ನಿನ್ನನ್ನು ಜಪಿಸುತ್ತಿದೆ. ನಾಚಿಕೆಯ ಸೆರಗನು ದಾಟಿ ಒಂದೇ ಒಂದು ಬಾರಿ ನಿನ್ನ ನೀಳ ತೋಳ ಹಾರವನು ನನ್ನ ಕೊರಳಿಗೆ ಸುತ್ತಿ ಕಿವಿಯಲ್ಲಿ ಮೂರು ಪದಗಳನು ಹೇಳಿ ಬಿಡು. ಅರಿಷಿಣ ಕೊಂಬಿನ ದಾರ ಕಟ್ಟಿ ಬಿಡುವೆ. ಇದುವರೆಗೂ ನಿನ್ನ ಕೆಂದುಟಿಯಲ್ಲಿ ನನಗಾಗಿ ಕೂಡಿಟ್ಟ ಲೆಕ್ಕವಿಲ್ಲದಷ್ಟು ಸವಿ ಮುತ್ತುಗಳನು ಪ್ರತಿ ರಾತ್ರಿಯೂ ಲೆಕ್ಕ ಮಾಡದೇ ಕೊಟ್ಟು ಮೈ ಬಿಸಿ ಏರಿಸು. ಮುತ್ತಿನ ಗಂಗೆಯಲಿ ನಿನ್ನ ಮೀಯಿಸುವೆ. ನಾಚದಿರು ಒಲವೆ ನನ್ನ ಬಳಿಯೂ ನಿನಗೆ ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ! ಚೆಲುವೆ…
ಇತಿ ನಿನ್ನ ಹೃದಯದ ಹೃದಯ