ವಿದ್ಯಾರ್ಥಿಗಳಿಂದ 1.5 ಲಕ್ಷ ರೂ. ಕೊಡಗು ಸಂತ್ರಸ್ಥರಿಗೆ ನೆರವು
ಸಿ.ಬಿ.ವಿದ್ಯಾವರ್ಧಕ ಸಂಸ್ಥೆಯ ಮಾನವೀಯಕಾರ್ಯ ಶ್ಲಾಘನೀಯ-ದರ್ಶನಾಪುರ
ಯಾದಗಿರಿ, ಶಹಾಪುರಃ ನಗರದ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರೌಢ ಶಾಲಾ, ಪದವಿ ಪೂರ್ವ ಮತ್ತು ಪದವಿ ವಿಭಾಗಗಳ 800ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಕೊಡಗು ನಿರಾಶ್ರಿತರಿಗೆ ಪರಿಹಾರ ನಿಧಿ ಸಂಗ್ರಹಕ್ಕಾಗಿ ನಗರದಾದ್ಯಂತ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು 1 ಲಕ್ಷದ 5 ಸಾವಿರ ರೂ.ಸಂಗ್ರಹಿಸಿರುವ ವಿದ್ಯಾಸಂಸ್ಥೆಯ ಮಾನವೀಯ ಕಾರ್ಯ ಶ್ಲಾಘನೀಯವಾದದ್ದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಹಾರ ನಿಧಿ ಸಂಗ್ರಹಿಸಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡಗು ನಿರಾಶ್ರಿತರಿಗೆ ತಲುಪಿಸಲು ವಿದ್ಯಾರ್ಥಿಗಳು ಸಂಗ್ರಹಿಸಿದ ಡಿಡಿಯನ್ನು ಸಂಬಂಧಿಸಿದ ಕೊಡಗು ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಲಾಗುವುದು.
ಕೊಡಗು ಸಂತ್ರಸ್ತರು ಜೀವನ್ಮರಣದಲ್ಲಿ ಹೋರಾಡುತ್ತಿದ್ದು, ಮಹಾ ಮಳೆಯಿಂದಾಗಿ ರೋಸಿ ಹೋಗಿದ್ದಾರೆ. ಹೆತ್ತವರು ಮಕ್ಕಳು ಬೇರ್ಪಟಿದ್ದು, ಸಂತಸ್ರಸ್ತರ ಬದುಕು ತೀವ್ರ ಹದಗೆಟ್ಟಿದೆ. ಮನೆ, ಮಠ ಎಲ್ಲಾ ಕಳೆದುಕೊಂಡು ರಣ ಬೀಕರತೆಗೆ ನಲುಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಾಯ ಹಸ್ತ ಚಾಚುವದು ಅಗತ್ಯವಿದೆ.
ಸಂದಿಗ್ಧ ಪರಿಸ್ಥಿತಿಯಲ್ಲಿರುವ ಕೊಡಗು ಸಂತ್ರಸ್ಥರಿಗೆ ಸಿ.ಬಿ.ವಿದ್ಯಾಸಂಸ್ಥೆಯು ಪರಿಹಾರ ನಿಧಿ ಸಂಗ್ರಹಿಸಿ ಸ್ಪಂಧಿಸುತ್ತಿರುವುದು ಜೀವಪರ ಕಾಳಜಿಯ ದ್ಯೋತಕವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಬಸವರಾಜಪ್ಪಗೌಡ ದರ್ಶನಾಪುರ, ಮುಖ್ಯಗುರು ಬಾಪುಗೌಡ ಅಸಂತಪೂರ, ಪ್ರಾಚಾರ್ಯ ಧರ್ಮಣ್ಣಗೌಡ ಬಿರಾದಾರ, ಶಿವಲಿಂಗಣ್ಣ ಸಾಹು, ರಾಘವೇಂದ್ರ ಹಾರಣಗೇರ ಇತರರಿದ್ದರು.
800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಖ್ಯಗುರುಗಳು, ಪ್ರಾಂಶುಪಾಲರು, ಅಧ್ಯಾಪಕರು, ಸಿಬ್ಬಂದಿವರ್ಗ ಶಹಾಪುರದ ನಗರದ ಬಸವೇಶ್ವರ ಚೌಕ, ಮೊಚಿಗಡ್ಡ, ಗಾಂಧಿ ಚೌಕ, ದಿಗ್ಗಿಬೇಸ್, ಸಿ.ಬಿಕಮಾನ್, ಹೊಸ ತಹಸೀಲ ಹತ್ತಿರ, ಗ್ಯಾರೇಜ್ ಲೈನ್, ಹಳೆ ಬಸ್ ನಿಲ್ದಾಣ ಮುಂತಾದ ಕಡೆ ಸಂಚರಿಸಿ ನಿಧಿ ಸಂಗ್ರಹಿಸಿದರು.