ಪ್ರಮುಖ ಸುದ್ದಿ

ಆರೋಪಿಗಳ ಬಂಧನ ವಿಳಂಬಃ ಕೋಲಿ ಸಮಾಜದಿಂದ ಬೃಹತ್ ಪ್ರತಿಭಟನೆ

ಶಹಾಪುರಃ ಕೋಲಿ ಸಮಾಜದಿಂದ ಬೃಹತ್ ಪ್ರತಿಭಟನೆ

ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಶ್ರೀಯಮನೂರಪ್ಪ ದೇವಸ್ಥಾನದ ಪೀಠಾಧೀಶ ಹಣಮಂತ್ರಾಯ ಪೂಜಾರಿ (ಮುತ್ಯಾ) ಯವರನ್ನು ಬರ್ಬರ ಹತ್ಯೆಗೈಯಲು ಕುಮ್ಮಕ್ಕು ನೀಡಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಶುಕ್ರವಾರ ಕೋಲಿ ಸಮಾಜದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ತಾಲೂಕು ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರ, ಕಲಬುರ್ಗಿ, ಯಾದಗಿರಿ ಜಿಲ್ಲೆ ಸೇರಿದಂತೆ ಹಲವಡೆ ಕೋಲಿ ಸಮಾಜದವರ ಮೇಲೆ ನಿರಂತರ ದೌರ್ಜನ್ಯ, ಅತಾಚಾರ ಕೊಲೆಗಳು ನಡೆಯುತ್ತಿವೆ. ತಾಲೂಕಿನ ಮಹಲ್ ರೋಜಾ ಗ್ರಾಮದಲ್ಲಿ ಸಮಾಜದ ಗುರುಗಳಾದ ಮತ್ತು ಜಾತ್ಯಾತೀತವಾಗಿ ಅಪಾರ ಸಂಖ್ಯೆಯ ಭಕ್ತಾಧಿಗಳನ್ನು ಹೊಂದಿದ್ದ ಶರಣ ಹಣಮಂತ್ರಾಯ ಪೂಜಾರಿಯವರನ್ನು ಕಳೆದ 15 ದಿನಗಳ ಹಿಂದೆಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಹತ್ಯೆಗೆ ಕಾರಣೀಭೂತರನ್ನು ಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕೊಲೆಗೆ ಕುಮ್ಮಕ್ಕು ನೀಡಿದವರು ಪಟ್ಟಣದಲ್ಲಿಯೇ ರಾಜಾರೋಷವಾಗಿ ತಿರುಗುತ್ತಿದ್ದು, ಪೊಲೀಸ್ ಇಲಾಖೆ ಅವರನ್ನು ಬಂಧಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ 3 ತಿಂಗಳ ಹಿಂದೆ ಕಲಬುರ್ಗಿತ ಮೂಗನೂರಿನಲ್ಲಿ 5 ಜನರ ಹತ್ಯೆ ಮಾಡಲಾಯಿತು. ಅದೇ ರೀತಿ ತಳ್ಳಳ್ಳಿ ಗ್ರಾಮದಲ್ಲಿ ಒಬ್ಬರ ಹತ್ಯೆ ಇದೇ ರೀತಿ ರಾಜ್ಯದಾದ್ಯಂತ ಕೋಲಿ ಸಮಾಜದವರನ್ನು ಕೊಲೆಗೈದರು ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಮರ್ಪಕ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಸಮುದಾಯದ ಜನ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ ಎಂದು ದೂರಿದರು.

ಅಲ್ಲದೆ ಹಣಮಂತ್ರಾಯ ಪೂಜಾರಿ ಅವರ ಕೊಲೆಯಲ್ಲಿ ಭಾಗಿಯಾದ ಇನ್ನುಳಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಕೋಲಿ ಸಮುದಾಯ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ ಮಾತನಾಡಿ, ಮಹಲ್ ರೋಜಾ ಗ್ರಾಮದ ಸಮಾಜದ ಗುರುಗಳಾದ ಹಣಮಂತ್ರಾಯ ಪೂಜಾರಿ ಕೊಲೆ ಅತ್ಯಂತ ಹೇಯ ಕೃತ್ಯ. ಪ್ರತಿ ವರ್ಷ ಸಾಮೂಹಿಕ ವಿವಾಹದಂತ ಮಹತ್ಕಾರ್ಯಗಳನ್ನು ಮಾಡುತ್ತಾ, ದೇವಸ್ಥಾನ ಜಾತ್ರೆ, ವಿವಿಧ ಧಾರ್ಮಿಕ ಕಾರ್ಯಕ್ರಗಳನ್ನು ಮಾಡುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದ, ಪೂಜಾರಿಯಂತ ಶರಣನನ್ನು ಕೊಲೆಗಡುಕರು ಕೊಂದಿದ್ದಾರು ಏತಕೆ ಎಂಬ ವಿಷಯ ಬಹಿರಂಗವಾಗಬೇಕಿದೆ.

ಈ ನಿಟ್ಟಿನಲ್ಲಿ ಪೊಲೀಸರು ಮೊದಲು ಕೊಲೆಯಾಗಲು ಕಾರಣವೇನು ಎಂಬುದನ್ನು ಪತ್ತೆ ಮಾಡಲಿ. ಆಗ ಕೊಲೆ ಮಾಡಿಸಲು ಯಾರು ಕಾರಣರು ಎಂಬುದನ್ನು ತಿಳಿಯುತ್ತದೆ. ಸಮರ್ಪಕ ಮಾಹಿತಿ ಆಧರಿಸಿ ದೂರು ಸಲ್ಲಿಸಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಸಾಮಾಜಿಕ ವಿಕೃತ ಘಟನೆಗಳಿಗೆ ಕಾರಣರಾದವರನ್ನು ರಾಜಕೀಯ ಒತ್ತಡ ಅಥವಾ ಇನ್ನಾವ ಕಾರಣಕ್ಕೋ ಪೊಲೀಸರು ಪ್ರಮುಖ ಆರೋಪಿಗಳನ್ನು ಕೈಬಿಟ್ಟಲ್ಲಿ ಅದು ಮುಂದೆ ಹೆಮ್ಮರವಾಗಿ ಬೆಳೆಯಲಿದೆ. ಪ್ರಾಮಾಣಿಕರಿಗೆ, ಶರಣ, ಸಂತರಿಗೆ ಸಾಮಾಜಿಕವಾಗಿ ಉತ್ತಮ ಕೆಲಸ ಮಾಡುವವರು ನಿತ್ಯ ಕೊಲೆಯಾಗುವ ದುಸ್ಥಿತಿ ಬರುತ್ತದೆ. ಕಾರಣ ಪೊಲೀಸರು ಮಾನವೀಯತೆ, ಕರುಣೆ ತೋರಿ ಕೊಲೆಯಾದ ಕುಟುಂಬಸ್ಥರ ರೋದನೆ ನೋಡಿ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಮಾನಯ್ಯ ಹಾದಿಮನಿ, ಮಲ್ಲರಡ್ಡಿ ವಿಭೂತಿಹಳ್ಳಿ, ಭೀಮರಾಯ ಮಮದಾಪುರ, ರವೀಂದ್ರನಾಥ ನರಸನಾಯಕ, ನಾಗಪ್ಪ ತಹಸೀಲ್ದಾರ, ಗೋಪಾಲ ಸುರಪುರ, ಪಿಡ್ಡಪ್ಪ ಯಡಗಿಮದ್ರಿ, ಮರೆಪ್ಪ ಚಂಡು, ಬಸವರಾಜ ಕಂದಳ್ಳಿ ರಾಮಾಂಜನೇಯ ಬೋನೇರ, ಸಾಯಬಣ್ಣ ಚಂಡು, ನಾಗಪ್ಪ ಯಡಗಿಮದ್ರಿ, ಮಲ್ಲಪ್ಪ ಮಣಿಗಿರಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಸಿಬಿ ಕಮಾನದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಬಸವೇಶ್ವರ ವೃತ್ತದಲ್ಲಿ ಅನಾವರಣಗೊಂಡಿತು. ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಸೋಮಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟೀನ್, ನಗರ ಸಿಪಿಐ ನಾಗರಾಜ ಜೆ, ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.

ಕೆಲಹೊತ್ತು ಸಂಚಾರ ಅಸ್ತವ್ಯಸ್ತ
ನಗರದ ಪ್ರಮುಖ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆದ ಪರಿಣಾಮ, ಬಸ್ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ಅಡೆತಡೆಯುಂಟಾಯಿತು. ಹೀಗಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಒಂದು ಗಂಟೆವರೆಗೂ ಟ್ರಾಫೀಕ್ ಸಮಸ್ಯೆ ಉಂಟಾಗಿತ್ತು. ಬೈಕ್ ಸವಾರರು, ಶಾಲಾ ಮಕ್ಕಳು ಸೇರಿದಂತೆ ಬಸ್, ಕಬ್ಬು ಸಾಗಣೆ ಲಾರಿಗಳು ರಸ್ತೆಯುದ್ದಕ್ಕೂ ನಿಂತಿರುವುದು ಕಂಡು ಬಂದಿತು. ನಗರದ ಹಲವು ವಾಹನಗಳು ಒಳ ರಸ್ತೆಗಳು ಸೇರಿದಂತೆ ಹಲವು ಬಡಾವಣೆಗ ಮೂಳಕ ಪ್ರಯಾಣಿಸುತ್ತಿರುವುದರಿಂದ ದಿಗ್ಗಿಬೇಸ್ ದಿಂದ ಮೋಚಿಗಡ್ಡಾ ರಸ್ತೆಯೂ ಟ್ರಾಫಿಕ್ ನಿಂದ ಕೂಡಿತ್ತು. ಹೀಗಾಗಿ ಪ್ರಯಾಣಕ್ಕಾಗಿ ಸಾರ್ವಜನಿಕರು ಪ್ರಯಾಸಪಟ್ಟ ಘಟನೆ ಜರುಗಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಹೇಳಿಕೆಃ
ಕೊಲೆ ಮಾಡಿದ ಆರೋಪಿ ಅಂದೇ ಶರಣಾಗಿದ್ದಾನೆ. ಆದರೆ ದೂರಿನಲ್ಲಿ ತಿಳಿಸಿರುವ ಪ್ರಕಾರ ಇನ್ನೂ ಮೂವರು ಆರೋಪಿಗಳಿದ್ದಾರೆ ಎನ್ನಲಾಗಿದೆ.  ಆ ಆರೋಪಿಗಳ ಹೆಸರು ತಿಳಿಸಲು ಬರುವುದಿಲ್ಲ. ಪ್ರಕರಣ ತೀವ್ರ ತನಿಖೆಯ ಹಂತದಲ್ಲಿದೆ. ಕಾರಣ ಆರೋಪಿಗಳ ಹೆಸರು ಬಹಿರಂಗ ಪಡಿಸಲ್ಲ. ತನಿಖೆ ನಂತರ ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳಿವು ದೊರೆತ ನಂತರವೇ ಅವರನ್ನು ಬಂಧಿಸಲಾಗುವುದು. ಅಲ್ಲಿವರೆಗೂ ಏನು ಹೇಳಲಾಗದು.

ಯಡಾ ಮಾರ್ಟೀನ್. ಎಸ್‍ಪಿ. ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button