ಕೊಳ್ಳೂರ(ಎಂ) ಸೇತುವೆ ಎತ್ತರಕ್ಕೇರಿಸಲು ಸಚಿವ ಚವ್ಹಾಣ ಭರವಸೆ
ಕೊಳ್ಳೂರ(ಎಂ) ಸೇತುವೆಗೆ ಸಚಿವ ಚವ್ಹಾಣ ಭೇಟಿ ಪರಿಶೀಲನೆ
yadgiri, ಶಹಾಪುರಃ ನಾರಾಯಣಪುರ ಬಸವಸಾಗರ ಜಲಾಶಯದಿಂದ ಅಪಾರ ಪ್ರಮಾಣದಿಂದ ನೀರು ಹರಿಬಿಟ್ಟ ಹಿನ್ನೆಲೆ ತಾಲೂಕಿನ ಕೃಷ್ಣಾ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಉಂಟಾಗಿರುವದರಿಂದ ಬುಧವಾರ ಜಿಲ್ಲಾ ಉಸ್ತುವಾರಿ ಮತ್ತು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ತಾಲೂಕಿನ ಕೊಳ್ಳೂರ(ಎಂ) ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿರುವ ಕೊಳ್ಳೂರು(ಎಂ) ಗ್ರಾಮ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯು ಪ್ರತಿವರ್ಷ ಬಸವಸಾಗರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕೃಷ್ಣಾ ನದಿಗೆ ಹರಿಸಿದ ಸಂದರ್ಭದಲ್ಲಿ ಈ ಸೇತುವೆ ಮುಳುಗಡೆಯಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಅಲ್ಲದೆ ನದಿ ಪಾತ್ರದ ಜನರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಸಮಸ್ಯೆ ಉಂಟಾಗುತ್ತಿದೆ. ಮತ್ತು ಯಕ್ಷಿಂತಿ, ಟೊಣ್ಣೂರ, ಗೌಡೂರ ಗ್ರಾಮಗಳ ಹಲವಾರು ಮನೆಗಳಿಗೂ ನೀರು ನುಗ್ಗಿದ ಉದಾಹರಣೆಗಳಿವೆ ಎಂದು ಸ್ಥಳೀಯರು ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರ ಸಮಸ್ಯೆ ಆಲಿಸಿದ ಸಚಿವರ ಪ್ರಭು ಚವ್ಹಾಣ, ಸೇತುವೆ ಎತ್ತರವನ್ನು ಮತ್ತಷ್ಟು ಹೆಚ್ಚಿಸಲು ಕೈಗೊಳ್ಳಬೇಕಾದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನೀಯರ್ ಅವರಿಗೆ ನಿರ್ದೇಶನ ನೀಡಿದರು.
ಕೃಷ್ಣಾ ನದಿಯ ಸಂಪರ್ಕ ಸೇತುವೆಯು ಪ್ರಮುಖವಾಗಿದ್ದು, ಇದರ ಪುನರ್ ನಿರ್ಮಾಣ ಮತ್ತು ಎತ್ತರ ಹೆಚ್ಚಿಸುವ ಕುರಿತು ರಾಯಚೂರು ಲೋಕಸಭಾ ಸದಸ್ಯರು ಸೇರಿದಂತೆ ಈ ಭಾಗದ ಶಾಸಕರ ನಿಯೋಗ ತೆರಳಿ ಸಿಎಂ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತಾಪಿ ಜನರು ಕಳೆದ ಬಾರಿ ಪ್ರವಾಹದಿಂದಾಗಿ ಉಂಟಾದ ಬೆಳೆ ಹಾನಿ ಪರಿಹಾರ ಇನ್ನೂ ಹಲವರಿಗೆ ತಲುಪಿಲ್ಲ. ಮತ್ತು ಬೆಳೆ ಪರಿಹಾರದ ವಿಮಾ ಮೊತ್ತವು ನೀಡಿಲ್ಲ ಎಂದು ದೂರಿದರು. ಈ ಕುರಿತು ಕೃಷಿ ಅಧಿಕಾರಿಗಳನ್ನು ಕರೆದು ರೈತಯರ ಸಮಸ್ಯೆ ಕುರಿತು ವಿಚಾರಿಸಿದರು ಕೂಡಲೇ ಬಾಕಿ ಉಳಿದ ಬೆಳೆ ಹಾನಿ ಪರಿಹಾರ ಮತ್ತು ವಿಮಾ ಸಮಸ್ಯೆ ಕುರಿತು ಶೀಘ್ರ ಪರಿಹರಿಸಬೇಕೆಂದು ಸೂಚಿಸಿದರು. ಅಲ್ಲದೆ ವಿದ್ಯುತ್ ಸಮಸ್ಯೆ ಕುರಿತು ಧ್ವನಿ ಎತ್ತಿದ ರೈತರ ಕುರಿತು ಸ್ಥಳದಲ್ಲಿದ್ದ ಜೆಸ್ಕಾಂ ಅಧಿಕಾರಿಗಳನ್ನು ಮುಂದೆ ಕರೆದು ಕೂಡಲೇ ರೈತರ ಜಮೀನಿಗೆ ನಿಯಮಿತ ವಿದ್ಯುತ್ ಪೂರೈಸುವಂತೆ ಖಡಕ್ ವಾರ್ನಿಂಗ್ ಮಾಡಿದರು.
ಈ ಸಂದರ್ಭದಲ್ಲಿ ಲೋಕಸಭೆ ಸದಸ್ಯೆ ರಾಜಾ ಅಮರೀಶ್ವರ ನಾಯಕ, ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬಿಜೆಪಿ ಪ್ರಮುಖರು ಇದ್ದರು.
ಸೇತುವೆ ಮಹತ್ವ ಅರಿಯದವರಿಂದ ಸೇತುವೆ ಎತ್ತರಕ್ಕೇರಿಸುವ ಭರವಸೆ-ಶಿವರಡ್ಡಿ ವ್ಯಂಗ್ಯ
ಶಹಾಪುರಃ ಕಳೆದ ಬಾರಿ ಬೆಳೆ ಪರಿಹಾರ ಕೊಳ್ಳೂರ ವ್ಯಾಪ್ತಿ 31 ಜನರಿಗೆ ಬಂದಿಲ್ಲ. ಅಲ್ಲದೆ ಬೆಳೆ ವಿಮೆ ಹಣ ಇದುವರೆಗೂ ಬಂದಿಲ್ಲ ಎಂದು ಗ್ರಾಮದ ಮುಖಂಡ ಶಿವರಡ್ಡಿ ಎಂ. ಕೊಳ್ಳೂರ ದೂರಿದರು. ಸಚಿವರ ಮುಂದೆ ಸಮಸ್ಯೆ ಕುರಿತು ಹೇಳಿದ, ಶಿವರಡ್ಡಿ, ಕಳೆದ ಬಾರಿ ಭರವಸೆ ನೀಡಿ ಹೋದವರು, ಹೋದರು ಇದೀಗ ನೀವು ಬಂದಿದ್ದೀರಿ ನಿಮ್ಮ ಮಂದೆಯೂ ರೈತರಾದ ನಾವುಗಳು ಅಳಲನ್ನು ತೋಡಿಕೊಳ್ಳುತ್ತಿದ್ದೇವೆ.
ರೈತರ ಸಮಸ್ಯೆ ಪರಿಹರಿಸುವ ಕಾಳಜಿ ಇದ್ದಲ್ಲಿ ಮೊದಲು ಕಳೆದ ಬಾರಿ ರೈತರಿಗಾದ ನಷ್ಟವನ್ನು ನೀಡಿ, ಕಳೆದ ಬಾರಿ ವಿಮೆ ಮೊತ್ತ ತಲುಪಿಸಿ. ತದನಂತರ ಈ ವರ್ಷದ ನಷ್ಟ, ಪರಿಹಾರ ಮಾತಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದುವರೆಗೂ ಬೆಳೆ ಹಾನಿ ಬಂದಿಲ್ಲ ಎಂದರೆ, ಕೆಲವರಿಗಷ್ಟೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಅದನ್ನೆ ಯಾಕೆ ಬಂದಿಲ್ಲ ಅಂದರೆ ಆಧಾರ ಕಾರ್ಡ್ ಸಮಸ್ಯೆ ಹೇಳುತ್ತಾರೆ. ಅದನ್ನು ಸರಿಪಡಿಸಲು ಎಷ್ಟೋ ವರ್ಷ ಬೇಕು.? ಎಂದು ಪ್ರಶ್ನಿಸಿದ ಅವರು, ಜಿಲ್ಲಾಡಳಿತ ಗಮನಕ್ಕಿದ್ದರೂ ಇದುವರೆಗೂ ಸಮಸ್ಯ ಪರಿಹರಿಸುವ ಗೋಜಿಗೆ ಹೋಗಿಲ್ಲ. ಸಚಿವರು, ಮುಖ್ಯಮಂತ್ರಿಗಳು ಬಂದಾಗ ಭರವಸೆ ನೀಡ್ತಾರೆ ಹೋಗ್ತಾರೆ ಅಷ್ಟೆ ಯಾವ ಕೆಲಸವು ಆಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೊಳ್ಳೂರ(ಎಂ) ಸೇತುವೆ ಎತ್ತರಕ್ಕೆ ಏರಿಸುವದಷ್ಟು ಸುಲಭವಲ್ಲ. ಏಷ್ಯಖಂಡದಲ್ಲಿಯೇ ಪ್ರಸಿದ್ಧಿ ಪಡೆದ ಎರಡನೇಯ ಸೇತುವೆ ಇದು. ಸೇತುವೆ ವಿಶೇಷವಾಗಿದ್ದು, ಸೇತುವೆ ಬುಡದಲ್ಲಿ ಸ್ಪ್ರಿಂಗ್‍ನಿಂದ ಕೂಡಿದೆ ಸೇತುವೆ ಮಹತ್ವವೇ ಗೊತ್ತಿಲ್ಲದ ಅಧಿಕಾರಿಗಳು ಮತ್ತು ಸಚಿವರು ಸೇತುವೆ ಎತ್ತರಿಕೆ ಏರಿಸುವ ಮಾತನಾಡಿ ಹೋದರು. ಹೀಗೆ ಬಂದ ಪುಟ್ಟ ಹೀಗೆ ಹೋದ ಪುಟ್ಟ ಎಂಬಂತಾಗಿದೆ ಎಂದರು ಶಿವರಡ್ಡಿ.