ಅಂಕಣಸರಣಿ

ಹಳೆಯದನ್ನು ಮರೆತು ಸಂಬಂಧಗಳನ್ನು ಗೌರವಿಸಿ-ಹಾರಣಗೇರಾ

ಹಳೆಯದನ್ನು ಮರೆತು ಸಂಬಂಧಗಳನ್ನು ಗೌರವಿಸಿ..

ಮನುಕುಲದ ಅಪಾರ ಸಾವು ನೋವುಗಳಿಗೆ ಕಾರಣವಾಗುತ್ತಿರುವ ಕರೋನಾದ ಪರಿಣಾಮ ಲಾಕ್ ಡೌನ್‌ ದಿಂದ ಮನೆಯಲ್ಲಿರುವ ಸದಸ್ಯರ ನಡುವೆ ಬಹಳಷ್ಟು ಕ್ಷುಲ್ಲಕ ಕಾರಣಗಳಿಗಾಗಿ ವೈಮನಸ್ಸು ಉಂಟಾಗಿ ಜಗಳಗಳು ಸಂಭವಿಸುತ್ತಿವೆ ಎಂದು ಮಾದ್ಯಮಗಳು ವರದಿ ಮಾಡುತ್ತಿವೆ.

ಮನುಷ್ಯನಿಗೆ ಕೆಲವು ಸಂದರ್ಭಗಳು, ಸನ್ನಿವೇಶಗಳು, ಆಕಸ್ಮಿಕ ಭೇಟಿಗಳು ಸಂತೋಷ, ನೆಮ್ಮದಿ, ಸಂತೃಪ್ತಿ ನೀಡುತ್ತವೆ. ಜೊತೆಗೆ ಜಗಳಗಳಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಕರೋನಾ ಲಾಕ್ ಡೌನದ ಪ್ರಕ್ರಿಯೇ ಸಾಕ್ಷಿ. –

ಕುಟುಂಬದ ಸದಸ್ಯರು ಅಥವಾ ಸಂಬಂಧಿಕರು ತಮ್ಮ ತಮ್ಮ ಕೆಲಸ ಕಾರ್ಯಗಳ ಒತ್ತಡದಲ್ಲಿ, ಯಾಂತ್ರಿಕ ಬದುಕಿನಲ್ಲಿ ಒಂದು ದಿನ ಮನೆಯಲ್ಲಿ ಕುಳಿತು ಪರಸ್ಪರ ಕಷ್ಟ- ಸುಖ ಹಂಚಿಕೊಳ್ಳಲು ಸಮಯಾವಕಾಶ ಸಿಗುತ್ತಿರಲಿಲ್ಲ. ಇದರಿಂದ ಸಂಬಂಧಗಳಲ್ಲಿ ಔಪಚಾರಿಕತೆ, ಕೃತಕತೆ, ನಾಟಕೀಯತೆ, ಮುಖವಾಡ ಮುಂತಾದವು ಹೆಚ್ಚಾಗಿ ಲಾಭ ನಷ್ಟದಿಂದ ನೋಡುವ ಆರ್ಥಿಕ ದೃಷ್ಟಿಕೋನ ಬೆಳೆಯಿತು.

ಪರಸ್ಪರ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಕಡಿಮೆಯಾಗಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಂಡಿವೆ. ಇಂತಹ ಸಂದಿಗ್ದ ಸಾಮಾಜಿಕ ವ್ಯವಸ್ಥೆಯಲ್ಲಿ ಲಾಕ್ ಡೌನ್ ದಿಂದ ಕುಟುಂಬದವರು, ವಿವಿಧ ಕಾರಣಗಳಿಗಾಗಿ ಮನೆಗೆ ಆಗಮಿಸಿದ ಸಂಬಂಧಿಕರು ಬಹುದಿನಗಳವರೆಗೆ ಮನೆಯಲ್ಲಿ ಇರಬೇಕಾದ ಅನಿವಾರ್ಯತೆ ಬಂದೊದಗಿದೆ.

ಎಷ್ಟೋ ದಿನ, ತಿಂಗಳು, ವರ್ಷಗಳ ನಂತರ ಕುಟುಂಬದ ಗಂಡ, ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಮತ್ತು ಸಂಬಂಧಿಕರು ಒಟ್ಟಾಗಿ ಕುಳಿತು ಮುಖಾಮುಖಿಯಾಗಿರುವುದು, ಕೂಡಿ ಊಟ ಮಾಡುವುದು, ಚರ್ಚೆ, ಹಾಸ್ಯ, ವಿವಿಧ ಚಟುವಟಿಕೆಗಳ ಮೂಲಕ ಸಂಭ್ರಮಿಸುವ ಅವಕಾಶ ಸಿಕ್ಕಿದೆ. –

ಆದರೆ ಅನೇಕ ಕುಟುಂಬಗಳಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪ, ದ್ವೇಷ, ಹಳೆಯ ವೈಷಮ್ಯಗಳು, ಅಸಹಿಷ್ಣುತೆ ಮುಂತಾದವುಗಳಿಂದ ಕೌಟುಂಬಿಕ ಜಗಳಗಳು ಸಂಭವಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

ಮನುಷ್ಯನ ಸಮಾಜವು ಸಂಬಂಧಗಳ ಬಲೆಯಿಂದ ಆವರಿಸಿಕೊಂಡಿದೆ. ಅನೇಕ ಘಟನೆಗಳ, ಸನ್ನಿವೇಶಗಳ ಸರಮಾಲೆಯೇ ಮನುಷ್ಯನ ಬದುಕಾಗಿದೆ ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಗಳು ವ್ಯವಹಾರಿಕವಾಗಬಾರದು. ಈ ಸಂಬಂಧಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಆತ್ಮೀಯತೆ, ಅರ್ಥೈಸುವಿಕೆ, ಅನುಕಂಪ, ತಾಳ್ಮೆ, ಹೊಂದಾಣಿಕೆ, ಸಹನೆ ಮುಂತಾದವು ತುಂಬಾ ಅಗತ್ಯವಾಗಿರುತ್ತವೆ. – ಪ್ರತಿಯೊಂದು ಸಂಬಂಧಗಳನ್ನು ಹಗುರವಾಗಿ ಕಾಣದೆ ಪ್ರೀತಿ, ವಿಶ್ವಾಸದಿಂದ, ಒಳ್ಳೆತನಗಳಿಂದ ಕಾಣಬೇಕು.

ಹಳೆಯ ವೈಷಮ್ಯ, ದ್ವೇಷ, ಒಣ ಪ್ರತಿಷ್ಟೆ, ಢಾಂಬಿಕತೆ, ಅಸಭ್ಯ ವರ್ತನೆ, ಅಸೂಯೆ, ಸಂಶಯ ಇತ್ಯಾದಿ ಸಂಬಂಧಗಳನ್ನು ಹದಗೆಡಿಸಿ ದೂರ ಮಾಡುತ್ತವೆ. – ಮನುಷ್ಯ ಸಂಬಂಧಗಳಲ್ಲಿ ಮಾನವೀಯ ಸಂವೇದನೆಯ ನಡುವಳಿಕೆಗಳು ಇಂದು ತುಂಬಾ ಅಗತ್ಯವಾಗಿವೆ.

ನಮ್ಮ ಪದವಿ, ಅಂತಸ್ತು, ಸಂಪತ್ತು, ಅಧಿಕಾರಗಳಿಗಿಂತ ಒಳ್ಳೆಯ ನಡುವಳಿಕೆಗಳು, ಮನಸ್ಸುಗಳನ್ನು ಕಟ್ಟುವ, ಒಂದಾಗಿಸುವ, ಬದುಕಿನ ಚೆಲವುಗಳಿಗೆ ಅರ್ಥವನ್ನು ತುಂಬುವ ಸೃಜನಾತ್ಮಕ ಕಾರ್ಯಗಳು ಆರೋಗ್ಯಕರ ಸಮಾಜಕ್ಜೆ ತುಂಬಾ ಅಗತ್ಯವಾಗಿವೆ. ಆದ್ದರಿಂದ ಸಂಬಂಧಗಳಲ್ಲಿ ಬಿಗುಮಾನ, ದ್ವೇಷ, ಅಸಹನೆ, ಅಸೂಯೆಗಳಿಗೆ ಅವಕಾಶ ಕೊಡದೆ ಎಲ್ಲರನ್ನೂ ಪ್ರೀತಿಯಿಂದ, ಗೌರವದಿಂದ, ಸೌಜನ್ಯದಿಂದ, ಮಾನವೀಯ ಅನುಕಂಪದಿಂದ ಕಂಡರೆ ಮನಷ್ಯ ಸಂಬಂಧಗಳಿಗೆ ಅರ್ಥ ಬರುತ್ತದೆ, ಮೌಲ್ಯ ಬರುತ್ತದೆ.

ಈ ಹಿನ್ನಲೆಯಲ್ಲಿ ಎಲ್ಲಾ ಸಂಬಂಧಗಳೊಂದಿಗೆ ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸೋಣ, ಬದುಕನ್ನು ಸಂಭ್ರಮಿಸೋಣ, ಸಂಬಂಧಗಳಿಗೆ ಹೊಸ ವ್ಯಾಖ್ಯಾನ ಬರೆಯೋಣ.

ರಾಘವೇಂದ್ರ ಹಾರಣಗೇರಾ. ಸಮಾಜಶಾಸ್ತ್ರ ಉಪನ್ಯಾಸಕರು ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜು ಶಹಾಪುರ. ಮೊ. ನಂ. ೯೯೦೧೫೫೯೮೭೩

Related Articles

Leave a Reply

Your email address will not be published. Required fields are marked *

Back to top button