ದಿನಕ್ಕೊಂದು ಕಥೆ
ಕೈಕೇಯಿಯ ವರ ಮತ್ತು ಶಾಪ
ಕೈಕೇಯ ದೇಶದ ರಾಜನ ಮಗಳು ಕೈಕೇಯಿ. ಕೈಕೇಯಿ ಇನ್ನೂ ಚಿಕ್ಕವಳು. ಒಮ್ಮೆ ಕೇಕೆಯ ರಾಜನ ಅರಮನೆಗೆ ಒಬ್ಬರು ಋಷಿಮುನಿಗಳು ಆಗಮಿಸಿದರು. ನಾವು ದೇಶ ಸಂಚಾರ ಕೈಗೊಳ್ಳುತ್ತಾ ನಿಮ್ಮಲ್ಲಿಗೆ ಬಂದಿದ್ದೇವೆ. ಸ್ವಲ್ಪ ದಿವಸ ಇಲ್ಲೆ ತಂಗಲು ನಿರ್ಧರಿಸಿದ್ದೇವೆ ಎಂದು ಕೇಳಿದಾಗ ಕೇಕೇಯ ರಾಜ ಆಗಲೆಂದು ಸಮ್ಮತಿಸಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿ ಅವರ ಸೇವೆಗೆ ಕೈಕೇಯಿಯನ್ನು ನೇಮಿಸುತ್ತಾನೆ.
ಕೈಕೇಯಿ ಹಿರಿಯರಾದ ಋಷಿಮುನಿಗಳಿಗೆ ಸೇವೆ ಸಲ್ಲಿಸುತ್ತಿದ್ದಳು. ಅತಿ ಕಡಿಮೆ ಕಾಲದಲ್ಲಿ ಕೈಕೇಯಿ ಹಾಗೂ ಋಷಿಮುನಿಗಳ ನಡುವೆ ಅಜ್ಜ – ಮೊಮ್ಮಗಳ ಬಾಂಧವ್ಯ ಬೆಳೆದುಬಿಟ್ಟಿತು. ಕೈಕೇಯಿ ಸದಾಕಾಲ ಅವರ ಸೇವೆ ಮಾಡುತ್ತಾ, ಅವರಿಗೆ ಬೇಕಾದನ್ನು ಒದಗಿಸುತ್ತ, ಅವರಿಂದ ಕಥೆ, ದೇವರನಾಮಗಳನ್ನು ಕೇಳುತ್ತಾ ಕಾಲ ಕಳೆಯುತ್ತಿರುತ್ತಾಳೆ.
ಒಮ್ಮೆ ಋಷಿಗಳು ಅಪರಾಹ್ನದಲ್ಲಿ ಒಳ್ಳೆಯ ಭೋಜನ ಮುಗಿಸಿ ಸುಖ ನಿದ್ರೆಯಲ್ಲಿದ್ದರು. ಆಗ ಕೈಕೇಯಿ ಬಂದು ಅವರನ್ನು ಎಬ್ಬಿಸಲು ಪ್ರಯತ್ನಿಸಿದಳು. ಆದರೆ ಋಷಿಗಳು ಗಾಢ ನಿದ್ರೆಯಲ್ಲಿದ್ದರಿಂದ ಎಚ್ಚರಗೊಳ್ಳಲಿಲ್ಲ. ಆಗ ಕೈಕೇಯಿಗೊಂದು ದುರ್ಬುದ್ಧಿ ಹೊಳೆಯಿತು.
ಅಜ್ಜ ಹೇಗಿದ್ದರೂ ಒಳ್ಳೆ ನಿದ್ರೆಯಲ್ಲಿದ್ದಾರೆ, ಅವರಿಗೆ ಸ್ವಲ್ಪ ಕುಚೋದ್ಯ ಮಾಡೋಣ ಎಂದೆನಿಸಿ ತನ್ನ ಕೊನೆಗೆ ಹೋಗಿ ತಾನು ಬಳಸುತ್ತಿದ್ದ ಸೌಂದರ್ಯದ ಸಾಮಗ್ರಿಗಳನ್ನು ಋಷಿಗಳ ಕೋಣೆಗೆ ತರುತ್ತಾಳೆ. ಮಲಗಿದ್ದ ಋಷಿಮುನಿಗಳಿಗೆ ತಾನು ಬಳಸುತ್ತಿದ್ದ ಚೂರ್ಣವನ್ನು ಅವರ ಮುಖಕ್ಕೆ ಬಳಿದು, ಹಣೆಗೆ ಕುಂಕುಮವನ್ನು ಇಟ್ಟು, ಕಣ್ಣಿಗೆ ಕಾಡಿಗೆ ಹಚ್ಚಿ, ಕೆನ್ನೆಯ ಮೇಲೆ ಒಂದು ದೃಷ್ಟಿ ಬೊಟ್ಟನ್ನು ಇಟ್ಟು ಅವರು ಎದ್ದಕೂಡಲೇ ಅವರು ನೋಡಿಕೊಳ್ಳಲೆಂದು ಅವರ ಮುಂದೆ ಒಂದು ದೊಡ್ಡ ಕನ್ನಡಿಯನ್ನು ತಂದಿಟ್ಟು ಅವರು ಏಳುವುದನ್ನೇ ಕಾಯುತ್ತಾ ಕುಳಿತುಕೊಳ್ಳುತ್ತಾಳೆ.
ಅಜ್ಜ ಎದ್ದ ಕೂಡಲೇ ತನ್ನ ಮುಖವನ್ನು ನೋಡಿಕೊಂಡು ತನಗೆ ಗುರುತು ಸಿಗದಂತಾಗಬೇಕು ಎಂದು ಕಾಯುತ್ತಿರುತ್ತಾಳೆ. ಸ್ವಲ್ಪ ಹೊತ್ತಿನ ನಂತರ ನಿದ್ರೆಯಿಂದ ಎಚ್ಚೆತ್ತ ಋಷಿಗಳು ಎದುರಿಗಿದ್ದ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಂಡು ಅವರಿಗೆ ಆಶ್ಚರ್ಯವಾಯಿತು. ಇದೇನಿದು ನನ್ನ ಮುಖ ಹೀಗೆ ತಯಾರಾಗಿದೆ ಎಂದು ಚಿಂತಿಸುತ್ತಿದ್ದರು.
ಅಷ್ಟರಲ್ಲಿ ಕೈಕೇಯಿ ಜೋರಾಗಿ ನಗಲು ಶುರುಮಾಡಿದರು. ಇದರಿಂದ ಕುಪಿತಗೊಂಡ ಋಷಿಗಳು ಕೈಕೇಯಿಗೆ ಶಾಪ ಕೊಟ್ಟರು. ನನ್ನ ಮುಖಕ್ಕೆ ಹೀಗೆ ಮಸಿ ಬಳಿದ ನಿನಗೆ ಮುಂದೆ ನಿನ್ನ ಮುಖಕ್ಕೂ ಮಸಿ ಬಳಿಯುವಂತಾಗಲಿ, ಅದು ಆಳಿಸುವಂಥ ಮಸಿ ಅಲ್ಲ. ಜನ ನಿನ್ನನ್ನು ನೋಡಿ ಅಸಹ್ಯ ಪಡುವಂತಾಗಬೇಕು. ಅಂತಹ ಮಸಿ ನಿನ್ನ ಮುಖಕ್ಕೆ ಬಳಿಯಲಿ ಎಂದು ಶಾಪ ನೀಡಿ ಇನ್ನೂ ನಿನ್ನ ಮನೆಯಲ್ಲಿ ನಾನು ಉಳಿಯುವುದಿಲ್ಲ ಎಂದು ಅಲ್ಲಿಂದ ಸರಸರನೆ ಹೊರಟು ಬಿಟ್ಟರು.
ಋಷಿಮುನಿಗಳು ಹೋರಾಟ ಭರದಲ್ಲಿ ತಮ್ಮ ಒಂದು ಸಾಲಿಗ್ರಾಮದ ಪೆಟ್ಟಿಗೆಯನ್ನು ಅಲ್ಲೇ ಬಿಟ್ಟು ಹೊರಟಿದ್ದರು. ಅದನ್ನು ಕಂಡ ಕೈಕೇಯಿ ಆ ಪೆಟ್ಟಿಗೆಯನ್ನು ಹಿಡಿದು ಅವರ ಹಿಂದೆಯೇ ಓಡಿ ಬಂದು ಅಜ್ಜ ನೀವೊಂದು ಪೆಟ್ಟಿಗೆಯನ್ನು ಬಿಟ್ಟು ಬಂದಿದ್ದೀರಿ ತೆಗೆದುಕೊಳ್ಳಿ ಎಂದು ಆ ಪೆಟ್ಟಿಗೆಯನ್ನು ಕೊಟ್ಟಳು.
ತಾನು ಅಷ್ಟೆಲ್ಲ ಕೋಪ ಮಾಡಿಕೊಂಡು ಶಾಪ ಹಾಕಿದರೂ ನನ್ನ ಮೇಲಿನ ಗೌರವದಿಂದ ನಾನು ಬಿಟ್ಟ ವಸ್ತುವನ್ನು ಮರಳಿ ತಂದು ಕೊಟ್ಟಲಲ್ಲ ಎಂದು ಅಭಿಮಾನ ಮೂಡಿ ಯಾವ ಕೈಯಿಂದ ನೀನು ನನ್ನ ವಸ್ತುವನ್ನು ತಂದು ಕೊಟ್ಟೆಯೊ ಆ ನಿನ್ನ ಕೈವಜ್ರದಂತೆ ಕಠಿಣವಾಗಲಿ, ಅಭೇಧ್ಯವಾಗಲಿ ಎಂದು ವರವನ್ನು ಕೊಟ್ಟರು.
ಕಾಲಾಂತರದಲ್ಲಿ ಕೈಕೇಯಿ ದಶರಥನ ಜೊತೆ ವಿವಾಹವಾಗುತ್ತಾಳೆ.
ಒಮ್ಮೆ ದಶರಥ ಯುದ್ಧಕ್ಕೆಂದು ಹೊರಟಿದ್ದಾಗ ಕೈಕೇಯಿಯನ್ನೂ ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿರುತ್ತಾನೆ. ಯುದ್ಧ ನಡೆಯುತ್ತಿದ್ದಾಗ ದಶರಥನ ಚಕ್ರದ ಕಡಾಣಿ ಆಚೆ ಬಂದು ರಥದ ಚಕ್ರ ಆಚೆ ಬರುತ್ತಿತ್ತು. ಚಕ್ತ್ರ ಆಚೆ ಬರುತ್ತಿರುವುದನ್ನು ಕಂಡ ಕೈಕೇಯಿ ಎಲ್ಲಿ ಚಕ್ರ ಆಚೆ ಬಂದರೆ ದಶರಥ ರಥದಿಂದ ಕೆಳಗೆ ಬೀಳುತ್ತಾನೆ ಎಂದು ಯೋಚಿಸಿ ಆ ಕಡಾನಿಯಿದ್ದ ಜಾಗದಲ್ಲಿ ತನ್ನ ಕೈಯನ್ನು ಇಟ್ಟು ಬಿಟ್ಟಳು.
ರಥ ವೇಗವಾಗಿ ಓಡುತ್ತಿದೆ. ಮುನಿಗಳು ಕೊಟ್ಟ ಶಾಪದಿಂದ ಕೈಕೇಯಿಯ ಕೈಗೆ ಯಾವುದೇ ಅಪಾಯವೂ ಆಗುವುದಿಲ್ಲ. ನಂತರ ಯುದ್ಧವೆಲ್ಲ ಮುಗಿದ ಮೇಲೆ ಕೈಕೇಯಿ ಚಕ್ರದ ಕಡಾನಿಯಿದ್ದ ತೂತಿನಲ್ಲಿ ಕೈ ಇಟ್ಟಿದ್ದನು ಕಂಡು ದಶರಥ ದಂಗಾಗುತ್ತಾನೆ. ಕೈಕೇಯಿ ಯಾಕೆ ಕೈ ಇಟ್ಟಿದ್ದೀಯಾ ಎಂದು ಕೇಳಿದಾಗ ಅಲ್ಲಿದ್ದ ಕಡಾಣಿ ಆಚೆ ಬಂದು ಚಕ್ರ ಆಚೆ ಬರುತ್ತಿತ್ತು. ಅದಕ್ಕೆ ಅಲ್ಲಿ ನನ್ನ ಕೈಯನ್ನು ಇಟ್ಟು ಚಕ್ರ ಆಚೆ ಬರದಂತೆ ತಡೆದ ಎನ್ನುತ್ತಾಳೆ.
ಇದರಿಂದ ಸಂತಸಗೊಂಡ ದಶರಥ ಕೈಕೇಯಿ ನಿನ್ನ ಧೈರ್ಯ ಹಾಗೂ ಸಾಹಸದಿಂದ ಇಂದು ನನ್ನ ಪ್ರಾಣ ರಕ್ಷಣೆ ಮಾಡಿದ್ದೀಯ. ಅದಕ್ಕಾಗಿ ನಿನಗೆ ಎರಡು ವರಗಳನ್ನು ಕೊಡುತ್ತೇನೆ. ನೀನು ಯಾವಾಗ ಬೇಕಾದರೂ ಈ ವರಗಳನ್ನು ಕೇಳಬಹುದು ಎಂದು ವರವನ್ನು ನೀಡುತ್ತಾನೆ.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.