ಕಾಂಗ್ರೆಸ್ ಪಕ್ಷದಿಂದ ಶಾಸಕ ಮಾಲೀಕಯ್ಯ ಗುತ್ತೇದಾರ್ ಉಚ್ಛಾಟನೆ!
ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಚಮಚಾಗಿರಿಗೆ ಬೆಲೆಯಿದೆ. ಮೊದಲ ಸಲ ಗೆದ್ದವರಿಗೆ ಕ್ಯಾಬಿನೆಟ್ ಸಚಿವರನ್ನಾಗಿಸಲಾಗಿದೆ. ಆರು ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ನೀಡದೆ ಮೂಲೆಗುಂಪಾಗಿಸುವ ಮೂಲಕ ಕೆರಳಿಸಲಾಗಿದೆ. ಪರಿಣಾಮ ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಅದ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಸೇರುವುದಾಗಿ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಇಂದು ಘೋಷಿಸಿದ್ದಾರೆ.
ಇಂದು ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಬಿಜೆಪಿ ಸೇರುವುದಾಗಿ ಶಾಸಕ ಗುತ್ತೇದಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಎರಡು ದಿನಗಳಲ್ಲಿ ಸ್ಪೀಕರ್ ಕೋಳಿವಾಡರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದರು.
ಶಾಸಕ ಮಾಲೀಕಯ್ಯ ಗುತ್ತೇದಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಪಕ್ಷ ತೊರೆಯುವ ಮುನ್ನವೇ ಪಕ್ಷ ವಿರೋಧಿ ಹೇಳಿಕೆ ನೀಡಿರುವ ಕಾರಣಕ್ಕೆ ಮಾಲೀಕಯ್ಯ ಗುತ್ತೇದಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ 6ವರ್ಷಗಳ ಕಾಲ ಉಚ್ಛಾಟಿಸಿ ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಆಧೇಶಿಸಿದ್ದಾರೆ. ಆ ಮೂಲಕ ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಗೆ ಬೈ ಹೇಳುತ್ತಿದ್ದೇನೆ ಎಂದಿರುವ ಮಾಲೀಕಯ್ಯ ಗುತ್ತೇದಾರ್ ಗೆ ಕಾಂಗ್ರೆಸ್ ಟಾಂಗ್ ನೀಡಿದೆ.
ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಿದ ಬಳಿಕ ಉಚ್ಛಾಟನೆ ಮಾಡಿರುವ ಕೆಪಿಸಿಸಿ ವಿರುದ್ಧ ಮಾಲೀಕಯ್ಯ ಗುತ್ತೇದಾರ್ ಉತ್ತರವೇನು ಎಂಬುದು ಸದ್ಯದ ಕುತೂಹಲವಾಗಿದೆ. ಮೊದಲೇ ಕಾಂಗ್ರೆಸ್ ನಾಯಕರ ವಿರುದ್ಧ ಕೆರಳಿರುವ ಶಾಸಕ ಮಾಲೀಕಯ್ಯ ಗುತ್ತೇದಾರ ಉಚ್ಛಾಟನೆ ಸುದ್ದಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಹೀಗಾಗಿ, ಕಾಂಗ್ರೆಸ್ ವಿರುದ್ಧ ಕೆರಳಿದ ಸಿಂಹದಂತೆ ಮಾಲೀಕಯ್ಯ ಗುತ್ತೇದಾರ್ ಮುಗಿಬೀಳುವ ಸಾಧ್ಯತೆ ಹೆಚ್ಚಾಗಿದೆ. ಹೈದರಾಬಾದ್ ಕರ್ನಾಟಕದಲ್ಲಿ ಕಮಲ ಪಡೆಯ ಗೆಲುವಿಗಾಗಿ ಟೊಂಕಕಟ್ಟಿ ನಿಲ್ಲಲಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.
Nice. Sir