ಸಚಿವ ರಮೇಶಕುಮಾರ್ ಮಂಡಿಸಿದ ಕೆಪಿಎಂಇ ವಿಧೇಯಕದಲ್ಲಿರುವ ಅಂಶಗಳೇನು ಗೊತ್ತಾ?
ಚಿಕಿತ್ಸೆ ಫಲಿಸದೆ ರೋಗಿ ಮೃತಪಟ್ಟರೆ ಹಣಕ್ಕೆ ಬೇಡಿಕೆ ಇಡುವಂತಿಲ್ಲ
ಕೊನೆಗೂ ಇಂದು ವಿಧಾನ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್ ಕುಮಾರ್ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ಮಂಡಿಸಿದ್ದಾರೆ. ಜೈಲು ಶಿಕ್ಷೆಯ ಅಂಶವೊಂದನ್ನು ವಿಧೇಯಕದಿಂದ ಕೈಬಿಡಲಾಗಿದೆ. ಆದರೆ, ಇನ್ನಿತರೆ ಕಠಿಣ ಕಾನೂನನ್ನು ಜಾರಿಗೊಳಿಸುವ ವಿಧೇಯಕವನ್ನು ಸಚಿವ ರಮೇಶ ಕುಮಾರ್ ವಿಧಾನ ಸಭೆಯ ಮುಂದಿಟ್ಟಿದ್ದಾರೆ ವಿಧೇಯಕದಲ್ಲಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
ಖಾಸಗಿ ಆಸ್ಪತ್ರೆಗಳ ವೆಬ್ ಸೈಟ್ ಗಳಲ್ಲಿ ಕಡ್ಡಾಯವಾಗಿ ದರ ಪಟ್ಟಿ ಪ್ರಕಟಿಸಬೇಕು. ವೆಬ್ ಸೈಟ್ ಜೊತೆಗೆ ಆಸ್ಪತ್ರೆಗಳಲ್ಲೂ ದರ ಪಟ್ಟಿ ಪ್ರಕಟಿಸಬೇಕು. ಚಿಕಿತ್ಸೆ ಫಲಿಸದೆ ರೋಗಿ ಮೃತ ಪಟ್ಟರ ಹಣಕ್ಕೆ ಬೇಡಿಕೆ ಇಡುವಂತಿಲ್ಲ. ನಿಗದಿತ ಅವಧಿಯೊಳಗೆ ರೋಗಿಗಳ ಜೊತೆಗೆ ಚರ್ಚಿಸಬೇಕು. ರೋಗಿ ಸಂಭಂಧಿಗಳು ಮತ್ತು ಸ್ನೇಹಿತರಿಗೆ ಸಮಾಲೋಚನೆ ಕೊಠಡಿಯೊಳಗೆ ಅವಕಾಶ ಕಲ್ಪಿಸಬೇಕು. ಸರ್ಕಾರದ ಯೋಜನೆಗಳ ಅಡಿಯಲ್ಲಿ ಚಿಕಿತ್ಸೆ ವಿಚಾರ, ರಾಜ್ಯ ಸರ್ಕಾರವೇ ದರ ನಿಗದಿ ಮಾಡಲಿದೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕುಂದು ಕೊರತೆ ದೂರು ಪ್ರಾಧಿಕಾರ ರಚನೆ.
ಪ್ರಾಧಿಕಾರ ಸಮಿತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಇರಲಿದ್ದಾರೆ. ಅಲ್ಲದೆ ಪ್ರಾಧಿಕಾರ ಸಮಿತಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಓರ್ವ ಪ್ರತಿನಿಧಿ, ಜಿಲ್ಲಾ ಮಟ್ಟದ ಓರ್ವ ಮಹಿಳಾ ಪ್ರತಿನಿಧಿ ಒಳಗೊಂಡಿರುತ್ತಾರೆ. ದೂರು ಪ್ರಾಧಿಕಾರದಲ್ಲಿ ವಾದ ಮಂಡನೆಗೆ ಅವಕಾಶ ನೀಡಲಾಗುವುದಲ್ಲದೆ ವಾದ ಮಂಡನೆಗೆ ವಕೀಲರನ್ನು ನೇಮಿಸಿಕೊಳ್ಳಬಹುದು.