ಕೆಪಿಎಸ್ಸಿ ಪ್ರಮಾದ : ಪರೀಕ್ಷೆಯಿಂದ ವಂಚಿತರಾಗಿ ಕಣ್ಣೀರಿಟ್ಟ ವಿದ್ಯಾರ್ಥಿಗಳು!
ಚಿತ್ರದುರ್ಗ : ಕರ್ನಾಟಕ ಲೋಕಸೇವಾ ಆಯೋಗ ತಪ್ಪುಗಳ ಮೇಲೆ ತಪ್ಪುಗಳನ್ನು ಎಸಗುತ್ತ ಸಾಗಿದೆ. ಪರಿಣಾಮ ಪ್ರತಿಭಾನ್ವಿತ ವಿದ್ಯರ್ಥಿಗಳು ತಮ್ಮದಲ್ಲದ ತಪ್ಪಿಗೆ ಬೆಲೆ ತೆರಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ. ಈ ಮಾತಿಗೆ ಸಾಕ್ಷಿಯೆಂಬಂತೆ ಇಂದು ಆಯೋಜಿಸಲಾಗಿರುವ ಎಸ್ ಡಿಎ ಪರೀಕ್ಷೆ ವೇಳೆ ಕೆಪಿಎಸ್ಸಿಯಿಂದ ಮತ್ತೊಂದು ಪ್ರಮಾದ ಆಗಿದೆ.
ಚಿತ್ರದುರ್ಗ ನಗರ ಮತ್ತು ಚಳ್ಳಕೆರೆ ಪಟ್ಟಣದಲ್ಲಿ ವಾಸವಿ ಶಾಲೆ ಹೆಸರಿನ ವಿದ್ಯಾಸಂಸ್ಥೆಗಳಿವೆ. ಎರಡೂ ಕಡೆ ಎಸ್ ಡಿಎ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಸುಮರು 50ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿಗೆ ನೀಡಿರುವ ಪ್ರವೇಶ ಪತ್ರದಲ್ಲಿ ಚಳ್ಳಕೆರೆ ಪಟ್ಟಣದ ವಾಸವಿ ಶಾಲೆಯ ಅಡ್ರೆಸ್ ದಾಖಲಿಸಲಾಗಿದೆ. ಆದರೆ, ಊರು ಮತ್ತು ಕೋಡ್ ನಂಬರ್ ಮಾತ್ರ ಚಿತ್ರದುರ್ಗ ವಾಸವಿ ಶಾಲೆಯದ್ದು ನಮೂದಿಸಲಾಗಿದೆ.
ಅಡ್ರೆಸ್ ಗೊಂದಲದ ಪರಿಣಾಮ ವಾಸವಿ ಶಾಲೆ ಪರೀಕ್ಷೆ ಬರೆಯಲು ಬಂದು ಸುಮಾರು 50ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನಿರಾಕರಿಸಲಾಗಿದೆ. ಹೀಗಾಗಿ, ಎಸ್ ಡಿಎ ಪರೀಕ್ಷೆಗೆ ಸುಮಾರು ತಿಂಗಳುಗಳಿಂದ ಓದಿಕೊಂಡಿದ್ದ ವಿದ್ಯಾರ್ಥಿಗಳು ಕಣ್ಣೀರಿಟ್ಟು ಕೆಪಿಎಸ್ಸಿಗೆ ಹಿಡಿಶಾಪ ಹಾಕಿದ್ದಾರೆ. ಕೆಪಿಎಸ್ಸಿ ವಿದ್ಯಾರ್ಥಿಗಳ ಬದುಕಿನಲ್ಲಿ ಚಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಪರೀಕ್ಷೆ ಬರೆಯಲು ಮರು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.