ಉದ್ಯೋಗ ಖಾತ್ರಿ ಕೆಲಸ ನೀಡಲು ಕೃಷಿ ಕೂಲಿಕಾರರ ಆಗ್ರಹ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೃಷಿ ಕೂಲಿಕಾರರ ಧರಣಿ
ಯಾದಗಿರಿ, ಶಹಾಪುರಃ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕಿನ ನಾಗನಟಗಿ ಗ್ರಾಪಂ ಕಚೇರಿ ಎದುರು ಅನಿರ್ಧಿಷ್ಠ ಅವಧಿ ಧರಣಿ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ದಾವಲಸ್‍ಸಾಬ, ಸಕಾಲಕ್ಕೆ ಮಳೆ ಬಾರದೆ ರೈತರು, ಕೂಲಿಕಾರರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಕೂಲಿಕಾರ್ಮಿಕರಿಗೆ ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸತತವಾಗಿ 100 ದಿನಗಳ ಕಾಲ ಕೆಲಸ ನೀಡಬೇಕು.
ಪ್ರಸ್ತುತ ವರಗಾಲ ಛಾಯೆ ಆವರಿಸಿರುವದನ್ನು ಗಮನಿಸದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೂಲಿಕಾರರಿಗೆ ಯಾವುದೇ ಖಾತರಿ ಕೆಲಸ ನೀಡದೆ ಯೋಜನೆಯ ವಿಫಲತೆಗೆ ಕಾರಣವಾಗಿದೆ. ಕೂಡಲೇ ಮೇಲಧಿಕಾರಿಗಳು ಗ್ರಾಪಂ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಬೇಕು. ನಾಗನಟಗಿ ಗ್ರಾಪಂ ವ್ಯಾಪ್ತಿ ಕೂಲಿಕಾರರ ಸ್ಥಿತಿ ಏನಿದೆ ಎಂಬುದನ್ನು ಮನಗಾಣಬೇಕು. ಗೂಳೆ ಹೊರಡದಂತೆ ರೈತರಿಗೆ ಕೂಲಿಕಾರರಿಗೆ ಕಐತುಂಬಾ ಕೆಲಸ ನೀಡಿದಲ್ದಲ್ಲಿ ಅನುಕೂಲವಾಗಲಿದೆ.
ಆದರೆ ಅಧಿಕಾರಿಗಳು ಕೇವಲ 7 ದಿನಗಲವರೆಗೆ ಮಾತ್ರ ಕೆಲಸ ನೀಡುತ್ತಿದ್ದು, ನಂತರ ಕೆಲಸ ಸ್ಥಗಿತಗೊಳಸಲಾಗುತ್ತಿದೆ. ನೀಡಿದ ಕೆಲಸವು ಪರಿಪೂರ್ಣವಾಗದೆ, ಹಣ ಮಾತ್ರ ಪೋಲಾಗುತ್ತಿದೆ. ಅದು ಕೂಲಿಕಾರರ ಪಾಳಿಗೆ ಹಣವು ಇಲ್ಲ ಕೆಲಸವು ಇಲ್ಲ. ಅಧಿಕಾರಿಗಳು ಆಡಳಿತ ಪಂಚಾಯತ ಮಂಡಳಿ ಶಾಮೀಲಾಗಿ ಉದ್ಯೋಗ ಖಾತ್ರಿ ಹಣ ಸಂಪೂರ್ಣವಾಗಿ ಕೆಲಸ ಮಾಡದೆ ಲಕ್ಷಾಂತರ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಸಾಕಷ್ಟು ಬಾರಿ ತಾಪಂ ಅಧಿಕಾರಿಗಳ ಗನಮಕ್ಕೆ ತಂದರೂ ಯಾವುದೇ ಪರಯೋಜನವಾಗಿಲ್ಲ. ಅಲ್ಲದೆ ನಾಗನಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸೈದಾಪುರ, ಬಾಣತಿಹಾಳ ಗ್ರಾಮಗಳಲ್ಲಿ ಕೂಲಿಕಾರರಿಗೆ ಸ್ಮಶಾನ ಭೂಮಿ ಇಲ್ಲದೆ ಪರದಾಡುತ್ತಿದ್ದಾರೆ. ಕೂಡಲೇ ಪ್ರತಿ ಗ್ರಾಮಕ್ಕೆ 2 ಎಕರೆ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಾಗನಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸತತವಾಗಿ 100 ದಿನಗಳ ಕೆಲಸ ಕೊಡಬೇಕು. ಗ್ರಾಪಂ ಪಿ.ಡಿ.ಓ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು. ನಿವೇಶನ ಇಲ್ಲದ ಕೂಲಿಕಾರರಿಗೆ ಭೂಮಿ ಖರೀದಿಸಿ ನಿವೇಶನ ಕೊಡಬೇಕು. ಮನೆ ಇಲ್ಲದ ಕೂಲಿಕಾರರಿಗೆ ಮನೆ ಹಂಚಿಕೆ ಮಾಡಬೇಕು. ಮತ್ತು ಬಾಣತಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ 4 ತೊಟ್ಟಿಗಳ ನಿರ್ಮಾಣ, ನಾಗನಟಗಿಯಲ್ಲಿ ಬಿ.ಸಿ.ಎಂ ಹಾಸ್ಟೆಲ್ ಕಟ್ಟಡ ನಿರ್ಮಾಣ, ಉದ್ಯೋಗ ಖಾತ್ರಿಯಲ್ಲಿ ದುಡಿದ ಕೂಲಿಕಾರರಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸವಿತಾ ಪೂಜಾರಿ,ಚಂದ್ರಪ್ಪ ಹೊಸಕೇರಾ, ರಂಗಮ್ಮ ಕಟ್ಟಿಮನಿ,ಅಂಬ್ಲಯ್ಯ ಬೇವಿನಕಟ್ಟಿ,ಗುಲಾಂ ಹುಸೇನ್, ಹಣಮಂತ್ರಾಯ ಮೇಟಿ, ಭೀಮಣ್ಣ ನಾಯ್ಕೋಡಿ, ನಿಂಗಣ್ಣ ಬೋನಾಳ ಸೇರಿದಂತೆ ಇತರರಿದ್ದರು.