ಕುಮಾರಪರ್ವ ಸಮಾವೇಶದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರಿಟ್ಟಿದ್ದೇಕೆ?
ಎರಡನೇ ಜನ್ಮ ಸಿಕ್ಕಿದೆ, ನಿಮ್ಮ ಸೇವೆಗಾಗಿ ಬದುಕುತ್ತೇನೆ – ಹೆಚ್.ಡಿ.ಕೆ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಕುಮಾರ ಪರ್ವ ಯಾತ್ರೆಗೆ ಇಂದು ಚಾಲನೆ ಸಿಕ್ಕಿದೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕರ್ನಾಟಕ ವಿಕಾಸ ವಾಹಿನಿ ವಾಹನಕ್ಕೆ ಚಾಲನೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವಿಕಾಸ ವಾಹಿನಿ ವಾಹನವನ್ನೇರಿ ರಾಜ್ಯ ಪ್ರವಾಸ ಹೊರಟಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರ ಪರ್ವ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಗೆ 5ವರ್ಷ ಅಧಿಕಾರ ನೀಡಿದ್ದೀರಿ, ಕಾಂಗ್ರೆಸ್ಸಿಗೆ 5ವರ್ಷ ಅಧಿಕಾರ ನೀಡಿ ನೋಡಿದ್ದೀರಿ. ನಾನು 20ತಿಂಗಳ ಆಡಳಿತ ನಡೆಸಿದ್ದನ್ನೂ ನೋಡಿದ್ದೀರಿ ಅದು ಕೇವಲ ಟ್ರೈಲರ್. ನನಗೆ ಪೂರ್ಣಾವಧಿ ಅಧಿಕಾರ ಕೊಟ್ಟು ನೋಡಿ ಎಂದು ಜನರಲ್ಲಿ ಮನವಿ ಮಾಡಿದರು.
ಇತ್ತೀಚೆಗಷ್ಟೇ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದ ನನಗೆ ಹೃದಯ ಸಂಭಂಧಿ ಶಸ್ತ್ರ ಚಿಕಿತ್ಸೆ ಆಗಿದ್ದು ಎರಡನೇ ಜನ್ಮ ಸಿಕ್ಕಿದೆ. ಹೀಗಾಗಿ, ನನಗೆ ಈಗ ನನಗಾಗಿ ಬದುಕುವ ಅಗತ್ಯವಿಲ್ಲ. ನಿಮಗಾಗಿ, ನಿಮ್ಮ ಸೇವೆಗಾಗಿ ಬದುಕುತ್ತೇನೆ ಎಂದು ಜನರಲ್ಲಿ ಮನವಿ ಮಾಡುತ್ತ ಹೆಚ್.ಡಿ.ಕುಮಾರಸ್ವಾಮಿ ಗದ್ಗದಿತರಾದರು.
ಸಾಲಮನ್ನಾ ಹೇಗೆ ಸಾಧ್ಯ ಅಂತಾ ಹಲವರು ಪ್ರಶ್ನೆ ಕೇಳುತ್ತಾರೆ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಸಾಲಮನ್ನಾ ಮಾಡಿದ ನಂತರ ರೈತರು ಮತ್ತೆ ಸಾಲ ಮಾಡದಂತೆ ಯೋಜನೆಗಳನ್ನೂ ರೂಪಿಸಬೇಕಿದೆ. ಇದು ಭಾಷಣದಿಂದ ಸಾಧ್ಯವಿಲ್ಲ. ನನಗೆ ಸಾಕಷ್ಟು ಪ್ರೀತಿ ನೀಡಿದ್ದೀರಿ. ಮನೆಯ ಮಗನಂತೆ ಕಾಣುತ್ತೀರಿ. ಆದರೆ, ಅಧಿಕಾರವನ್ನು ಏಕೆ ನೀಡುತ್ತಿಲ್ಲ ಎಂದು ಜನರನ್ನು ಪ್ರಶ್ನಿಸಿದರು. ನನಗೆ ಅಧಿಕಾರ ಕೊಟ್ಟು ಕೇವಲ ಎರಡು ವರ್ಷ ಅವಕಾಶ ನೀಡಿ. ಪ್ರಾಮಾಣಿಕವಾಗಿ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸುತ್ತೇನೆ. ಯವ ಸಮೂಹದ ಕೈಗೆ ಕೆಲಸ ಕೊಡುತ್ತೇನೆ. ನನಗೆ ಅಕ್ರಮವಾಗಿ ಹಣ ಸಂಪಾದಿಸುವ ಅವಶ್ಯಕತೆ ಇಲ್ಲ. ನನ್ನನ್ನೂ ಒಮ್ಮೆ ಪರೀಕ್ಷಿಸಿ ನೋಡಿ. ಕೊಟ್ಟ ಮಾತು ತಪ್ಪಿದರೆ ನಿಮಗೆ ಮುಖ ತೋರಿಸುವುದಿಲ್ಲ ಎಂದು ಭಾವನಾತ್ಮಕವಾಗಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಸಮಾವೇಶದಲ್ಲಿ ನೆರೆದಿದ್ದ ಜನರ ಮನಸೆಳೆದರು.