ಪ್ರಮುಖ ಸುದ್ದಿ

ಕುಷ್ಠರೋಗ ಪತ್ತೆಗಾಗಿ 847 ತಂಡಗಳ ರಚನೆ- DC ಕೂರ್ಮಾರಾವ್

ನ.11ರಿಂದ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ

ಯಾದಗಿರಿಃ ಸ್ಪರ್ಶ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಾದ್ಯಂತ ನವೆಂಬರ್ 11ರಿಂದ 28ರವರೆಗೆ ಹಮ್ಮಿಕೊಂಡಿರುವ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನವನ್ನು ಯಶಸ್ವಿಗೊಳಿಸುವ ಮೂಲಕ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ಸ್ಪರ್ಶ ಕುಷ್ಠ ರೋಗದ ಕುರಿತು ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಂದೋಲನದ ಅವಧಿಯಲ್ಲಿ ಮನೆಮನೆಗೆ ಭೇಟಿ ನೀಡಿ, ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ರೋಗಿಗಳನ್ನು ಪತ್ತೆಹಚ್ಚಿ ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಅವರು ನಿರ್ದೇಶಿಸಿದರು.

ನವೆಂಬರ್ 10ರಂದು ಪೂರ್ವಭಾವಿಯಾಗಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಬಗ್ಗೆ ಪ್ರತಿಯೊಂದು ತಂಡದವರು ತಮ್ಮ ತಮ್ಮ ಗ್ರಾಮದಲ್ಲಿ ಸಮುದಾಯದ ಸಭೆ ನಡೆಸಬೇಕು. ತಾಲ್ಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ತರಬೇತಿಯನ್ನು ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಭಗವಂತ ಅನವಾರ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 43 ಜನ ಕುಷ್ಠರೋಗದ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 27 ಜನ ಗುಣಮುಖ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,32,605 ಮನೆಗಳಿದ್ದು, ಕುಷ್ಠರೋಗ ಪತ್ತೆಗಾಗಿ ಒಟ್ಟು 847 ತಂಡಗಳನ್ನು ರಚಿಸಲಾಗಿದೆ.

ಪ್ರತಿಯೊಂದು ತಂಡದಲ್ಲಿ ಒಬ್ಬ ಆಶಾ ಕಾರ್ಯಕರ್ತೆ, ಮತ್ತೊಬ್ಬರು ವಾಲೆಂಟ್ರಿ ಇರುತ್ತಾರೆ. ಪ್ರತಿ 5 ತಂಡಕ್ಕೆ ಒಬ್ಬರು ಮೇಲ್ವಿಚಾರಕರಂತೆ ಒಟ್ಟು 168 ಮೇಲ್ವಿಚಾರಕರು ಇರುತ್ತಾರೆ ಎಂದು ಮಾಹಿತಿ ನೀಡಿದರು.

ಕುಷ್ಠರೋಗ ಎಂದರೇನು: ಕುಷ್ಠರೋಗವು ಮೈಕೊಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಇದು ಮುಖ್ಯವಾಗಿ ನರಗಳು ಹಾಗೂ ಚರ್ಮದ ಮೇಲೆ ಪರಿಣಾಮ ಬಿರುತ್ತದೆ. ಚರ್ಮದ ಮೇಲಿನ ಯಾವುದೇ ತಿಳಿ, ಬಿಳಿ, ತಾಮ್ರ ಬಣ್ಣದ ಮಚ್ಚೆಗಳಿದ್ದರೆ ಗುಪ್ತವಾಗಿರಿಸದೆ ವೈದ್ಯರಿಗೆ ತೋರಿಸಬೇಕು.

ಈ ಮಚ್ಚೆಗಳ ಮೇಲೆ ಸ್ಪರ್ಶಜ್ಞಾನ ಇರುವುದಿಲ್ಲ. ರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಈ ಔಷಧಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ವಿವರಿಸಿದರು. ಆಂದೋಲನದ ಅಂಗವಾಗಿ ಕುಷ್ಠರೋಗದ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಯಾದಗಿರಿ ಡಿವೈಎಸ್‍ಪಿ ಯು.ಶರಣಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನಾರಾಯಣಪ್ಪ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ಸೂರ್ಯಪ್ರಕಾಶ ಎಂ.ಕಂದಕೂರ, ನಗರಸಭೆ ಪೌರಾಯುಕ್ತರಾದ ರಮೇಶ ಸುಣಗಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಜಿಲ್ಲಾ ಸಮನ್ವಯ ಸಮಿತಿ ಸದಸ್ಯ ರಾಯಪ್ಪ ಅವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button