ಕನ್ನಡವಾಯಿತು ‘ಗೂಗಲ್’ : ಗೂಗಲ್ ಡೂಡಲ್ ಮೂಲಕ ‘ವಿಶ್ವ ಮಾನವ’ ಸಂದೇಶ
ಇಂದು ರಾಷ್ಟ್ರಕವಿ ಕುವೆಂಪು ಅವರ ಜನುಮ ದಿನ. ವಿಶ್ವ ಮಾನವ ಸಂದೇಶ ಸಾರಿದ ಹೃದಯ ಕವಿಗೆ ಗೂಗಲ್ ಸಹ ಇಂದು ಡೂಡಲ್ ನಮನ ಸಲ್ಲಿಸಿದೆ. ಶಿವಮೊಗ್ಗದ ಕವಿಶೈಲದಲ್ಲಿ ಸುಂದರ ಪರಿಸರದ ಮದ್ಯೆ ಕಲ್ಲು ಬಂಡೆಯ ಮೇಲೆ ಸಾಹಿತ್ಯ ತಪಸ್ಸಿನಲ್ಲಿ ತಲ್ಲೀನರಾಗಿರುವ ಕುವೆಂಪು ಅವರ ಅದ್ಭುತವಾದ ಚಿತ್ರವನ್ನು ಗೂಗಲ್ ಅಳವಡಿಸಿದೆ. ಅಲ್ಲದೆ ಚಿತ್ರದಲ್ಲಿ ‘ಗೂಗಲ್’ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಆ ಮೂಲಕ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ಜನುಮ ದಿನವನ್ನು ಗೂಗಲ್ ವಿಶ್ವಕ್ಕೆ ನೆನಪಿಸಿದೆ. ವಿಶ್ವಕವಿ ಕುವೆಂಪು ಹಾಗೂ ಗೂಗಲ್ ಗೆ ವಿನಯವಾಣಿ ಬಳಗದ ನಮನ…
ವಿಶ್ವಮಾನವ ಗೀತೆ
ಓ ನನ್ನ ಚೇತನ,
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!
ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
–ಕುವೆಂಪು