ಸಮಾಜದಲ್ಲಿ ನಮ್ಮ ವ್ಯಕ್ತಿತ್ವ ಪರಿಚಯಕ್ಕೆ ಮಾಧ್ಯಮ ಕಾರಣ – ಅನಪೂರ
ಯಾದಗಿರಿಯಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ

ನಮ್ಮ ಕೆಲಸ ಕಾರ್ಯಗಳ ಯಶಸ್ಸಿಗೆ ಪತ್ರಿಕಾ ಕ್ಷೇತ್ರದ ಸಹಕಾರ ಸಾಕಷ್ಟಿದೆ – ಅನಪೂರ
ಸಮಾಜದಲ್ಲಿ ನಮ್ಮ ವ್ಯಕ್ತಿತ್ವ ಪರಿಚಯಕ್ಕೆ ಮಾಧ್ಯಮ ಕಾರಣ – ಅನಪೂರ
ಯಾದಗಿರಿಃ ನಾವು ಮಾಡತಕ್ಕಂತ ಕೆಲಸಗಳ ಮೇಲೆ ಬೆಳಕು ಚಲ್ಲುವ ಮೂಲಕ ಕಾರ್ಯಯೋಜನೆಯ ಯಶಸ್ಸಿಗೆ ಮಾಧ್ಯಮ ಕ್ಷೇತ್ರ ಸಹಕಾರ ಸಾಕಷ್ಟಿದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಅವರು ಅಭಿಪ್ರಾಯಪಟ್ಟರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ- 2025 ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ವ್ಯಕ್ತಿತ್ವದ ಪರಿಚಯಕ್ಕೂ ಪತ್ರಿಕಾ ರಂಗದ ಕೊಡುಗೆ ಇದೆ. ಯಾವುದೇ ಒಂದು ಸರ್ಕಾರಿ ಯೋಜನೆ ಜನರ ಮನೆ ಮನಕ್ಕೆ ತಲುಪಬೇಕಾದರೆ ಪತ್ರಿಕಾಕ್ಷೇತ್ರದ ಕಾರ್ಯ ಬಹುಮುಖ್ಯವಾಗಿದೆ. ಎಲ್ಲೋ ಒಬ್ಬರಿಬ್ಬರು ಕ್ಷೇತ್ರದಲ್ಲಿದ್ದು ಮಾಧ್ಯಮದ ಜವಬ್ದಾರಿ ಮರೆತು ವರ್ತಿಸುವ ಮೂಲಕ ಮಸಿ ಬಳಿಯುವ ಕೆಲಸ ನಡೆಯುಬಹುದು, ಆದರೆ ಸಂಘದ ಜಿಲ್ಲಾ ಅಧ್ಯಕ್ಷರು ಸಂಕೀನ್ ಅವರು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಪತ್ರಕರ್ತ ಬಾಂಧವರಿಗೆ ಶಕ್ತಿಯಾಗಿ ನಿಂತಿದ್ದಾರೆ. ಪತ್ರಿಕಾ ಬಳಗದ ಜತೆಗೆ ನಾನು ಸದಾ ಕೈ ಜೋಡಿಸಲಿದ್ದು, ಯಾವುದೇ ನಗರಸಭೆ ಯೋಜನೆ ಇರಲಿ, ಸಾಮಾಜಿಕ ಸಮಸ್ಯೆ ಇರಲಿ ತಮ್ಮಗಳೊಂದಿಗೆ ಕೈಲಾದ ಸಹಾಯ ಸಹಕಾರದೊಂದಿಗೆ ಕೆಲಸ ಮಾಡುವೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಮಾನೇಗಾರ ಮಾತನಾಡಿ, ಪತ್ರಿಕಾ ರಂಗದಲ್ಲಿ ಅನ್ವೇಷಣಾ ವರದಿಗಳು ಬಹು ಮುಖ್ಯವಾಗಿ ಬರಬೇಕಿದೆ. ಆದರೆ ಪ್ರಸ್ತುತ ಅನ್ವೇಷಣಾ ವರದಿಗಳು ಕಡಿಮೆ ಆಗ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ರಾಜಕೀಯ ತಪ್ಪು ಹಾದಿ ಹಿಡಿದಾಗ ಅದನ್ನು ಸರಿಪಡಿಸುವಲ್ಲಿ ಮುತುವರ್ಜಿವಹಿಸಿ ಕೆಲಸ ಮಾಡಬೇಕಿರುವದು ಪತ್ರಕರ್ತರು. ಆ ನಿಟ್ಟಿನಲ್ಲಿ ಪತ್ರಿಕಾ ರಂಗ ಇನ್ನಷ್ಟು ಮುನ್ನಡೆಯುವ ಕೆಲಸವಾಗಲಿ. ಪ್ರಸ್ತುತ ಜಿಲ್ಲಾ ಪತ್ರಕರ್ತರ ಸಂಘ ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದರು.
ಮುಖಂಡ ಭೀಮಣ್ಣ ಮೇಟಿ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿ ಆವೊಂದು ಖುರ್ಚಿ ಮೇಲೆ ಕುಂತಾಗ ಆ ಖುರ್ಚಿಗೆ ಘನತೆ ಬರಲಿದೆ. ಕೆಲವೊಮ್ಮೆ ಆ ವ್ಯಕ್ತಿ ಖುರ್ಚಿಗೆ ಕುಂತಾಗ ಅವರಿಂದ ಆ ಖುರ್ಚಿ ಘನತೆ ಕಳೆದುಕೊಳ್ಳುವ ಸ್ಥಿತಿ ಹಲವಡೆ ನಾವು ಕಂಡಿದ್ದೀವಿ. ಅದರಂತೆ ಇಲ್ಲಿನ ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷರು ಆ ಖುರ್ಚಿಗೆ ಘನತೆ ತರುವಂತ ಕೆಲಸ ಮಾಡ್ತಿದ್ದಾರೆ. ಅವರ ಜತೆ ಎಲ್ಲರೂ ಕೈ ಜೋಡಿಸಿ ಇನ್ನೂ ಪತ್ರಿಕಾ ರಂಗದ ಮಹತ್ವವನ್ನು ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.
ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ರಾಘವೇಂದ್ರ ಕಾಮನಟಗಿ, ಹಿರಿಯರಾದ ಭವಾನಿಸಿಂಗ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಬಸವರಾಜ ಕರೆಗಾರ, ಜಿಲ್ಲಾ ಛಾಯಾಚಿತ್ರ ಗಾರ ಮಂಜುನಾಥ ಸಗರ, ಹುಣಸಿಗಿಯ ಬಾಲಪ್ಪ ಕುಪ್ಪಿ ಸೇರಿದಂತೆ ಹಲವು ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆವಹಿಸಿದ್ದ ಕಾನಿಪ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಮೊದಲಿಗೆ ಮೊನ್ನೆ ಜಿಲ್ಲಾಧಿಕಾರಿಗಳನ್ನು ಕಾನಿಪದಿಂದ ಸನ್ಮಾನಿಸಲಾಯಿತು ಎಂದು ಓರ್ವರು ತಪ್ಪು ವರದಿ ಮಾಡುವ ಮೂಲಕ ಸಂಘದ ಹೆಸರು ದರ್ಬಳಕೆ ಮಾಡಿಕೊಂಡಿರುವ ಕುರಿತು ಕಳವಳ ವ್ಯಕ್ತಪಡಿಸಿದರು.ಅಲ್ಲದೆ ಜಿಲ್ಲಾ ಮಟ್ಟದ ಕಾನಿಪ ಬಳಗಕ್ಕೆ ಇಷ್ಟರಲ್ಲಿಯೇ ನಿವೇಶನ ಒದಗಿಸುವ ಕೆಲಸವನ್ನು ನಗರಸಭೆ ಅಧ್ಯಕ್ಷರಾದ ಲಲಿತಾ ಅನಪೂರ ಅಕ್ಕನವರು ಮಾಡಲಿದ್ದಾರೆ ಕಾರ್ಯಯೋಜನೆ ತೀವ್ರ ಪ್ರಗತಿಯಲ್ಲಿದೆ ಎಂದರು.
ಪತ್ರಕರ್ತ ನರಸಪ್ಪ ನಾರಯಣೋರ ನಿರೂಪಿಸಿದರು, ಪತ್ರಕರ್ತ ವಿಶಾಲ್ ಶಿಂದೆ ಸ್ವಾಗತಿಸಿ ವಂದಿಸಿದರು.
ನಾವು ಹಾಸ್ಯ ಕಲಾವಿದರಾಗಿ ಪ್ರಸಿದ್ಧವಾಗಿರುವುದೇ ಪತ್ರಕರ್ತರಿಂದ, ಅವರು ಸುದ್ದಿ ಮಾಡಿ ನಮ್ಮ ಅರ್ಹತೆ ಪ್ರತಿಭೆ ಹೊರ ಹಾಕುವ ಮೂಲಕ ನಮ್ಮನ್ನು ಬೆಳೆಸಿದ್ದಾರೆ. ಯಾದಗಿರಿ ಪತ್ರಕರ್ತರು ಒಡನಾಟ ಅವರ ಪ್ರೀತಿ, ವಿಶ್ವಾಸ ಎಂದಿಗೂ ನಾವು ಮರೆಯುವಂತಿಲ್ಲ. ಪತ್ರಿಕಾ ರಂಗ ಸಮಾಜಕ್ಕೆ ಬಹುಮುಖ್ಯವಾಗಿದೆ. ಅಂತಹ ಮಹಾನ್ ಕೆಲಸ ಮಾಡುವ ಎಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು.
– ಬಸವರಾಜ ಮಹಾಮನಿ. ಹಾಸ್ಯ ಕಲಾವಿದರು.