ಉಗ್ರರ ದಾಳಿಃ ದಾಳಿ ಕೋರ ಸೇರಿ ಇಬ್ಬರ ಸಾವು
ಲಂಡನ್ : ಭಯೋತ್ಪಾದನೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಮಧ್ಯಾಹ್ನ ಜನನಿಬಿಡ ಪ್ರದೇಶದಲ್ಲಿ ಚೂರಿಯಿಂದ ಇರಿದು ಇಬ್ಬರನ್ನು ಹತ್ಯೆಗೈದಿದ್ದು, ದಾಳಿಕೋರ ಕೂಡಾ ಹತ್ಯೆಗೀಡಾಗಿದ ಘಟನೆ ನಡೆದಿದೆ.
ಶಂಕಿತ ಉಗ್ರನನ್ನು ಸಾರ್ವಜನಿಕರು ಸೆರೆ ಹಿಡಿಯುವ ಮುನ್ನ ಆತ ಬೇಕಾಬಿಟ್ಟಿ ಜನರ ಮೇಲೆ ದಾಳಿ ಮಾಡಲಾರಂಭಿಸಿದ ಎನ್ನಲಾಗಿದೆ. ನಂತರ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೇವಲ ಐದೇ ನಿಮಿಷಗಳಲ್ಲಿ ಹಂತಕನನ್ನು ಹೊಡೆದುರುಳಿಸಿದರು.
ಈ ಘಟನೆಯಲ್ಲಿ ಮೂರು ಜನ ಗಾಯಗೊಂಡಿದ್ದು, ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಿದೆ ಎನ್ನಲಾಗಿದೆ. ಈ ದಾಳಿ ಡಿಸೆಂಬರ್ 12ರಂದು ನಡೆಯುವ ಚುನಾವಣೆಯ ಪ್ರಚಾರದ ವೇಗ ತಗ್ಗಿಸಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಚುನಾವಣಾ ಪ್ರಚಾರವನ್ನು ಮೊಟಕುಗೊಳಿಸಿ ಪ್ರಧಾನಿ ಬೋರಿಸ್ ಜಾನ್ಸನ್ ಸ್ಥಳಕ್ಕೆ ಧಾವಿಸಿದರು. ಮೃತರ ಗೌರವಾರ್ಥವಾಗಿ ಇತರ ಪಕ್ಷಗಳು ಕೂಡಾ ಚುನಾವಣಾ ಪ್ರಚಾರ ಸ್ಥಗಿತಗೊಳಿಸಿವೆ.
ಗಂಭೀರ ಹಾಗೂ ಹಿಂಸಾತ್ಮಕ ಅಪರಾಧಿಗಳನ್ನು ಜೈಲಿನಿಂದ ಅವಧಿಪೂರ್ವವಾಗಿಯೇ ಹೊರಬಿಡುವ ಕ್ರಮವನ್ನು ಜಾನ್ಸನ್ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದರು. ಈ ಘಟನೆ ಲಂಡನ್ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿದೆ.