ಪ್ರಮುಖ ಸುದ್ದಿ

ಲೈಂಗಿಕ ಶೋಷಣೆ ತಡೆಗೆ ಸರ್ವರ ಸಹಕಾರ ಅಗತ್ಯ- ನ್ಯಾ.ಬಡಿಗೇರ

ಕಾನೂನು ಅರಿವು-ನೆರವು

ಯಾದಗಿರಿ, ಶಹಾಪುರಃ ಹಣದಾಸೆಯನ್ನೊತ್ತು ಹೆತ್ತ ಮಕ್ಕಳನ್ನೇ ಮಾರಿಕೊಳ್ಳುವ ಹೀನಾಯ ಸ್ಥಿತಿ ಮಾನವ ಸಮಾಜದಲ್ಲಿ ತಾಂಡವಾಡುತ್ತಿದ್ದು, ಇದನ್ನು ತಡೆಯಲು ಸಮಾಜದಲ್ಲಿ ಜಾಗೃತಿ ಅಗತ್ಯವಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಪ್ರಭು.ಎನ್.ಬಡಿಗೇರ ಅಭಿಪ್ರಾಯಪಟ್ಟರು.

ನಗರದ ಪೊಲೀಸ್ ಠಾಣಾ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರ, ತಾಲೂಕಾ ವಕೀಲರ ಸಂಘ ಮತ್ತು ಶಹಾಪುರ ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ನಡೆದ ಮಾನವ ಸಾಗಾಣಿಕೆ ಮತ್ತು ಲೈಂಗಿಕ ಶೋಷಣೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆಯಿಂದ ಇಡಿ ಮಾನವ ಕುಲಕ್ಕೆ ಕಳಂಕ. ಕಾರಣ ನಾಗರಿಕರು ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಸಿಡಿದೇಳಬೇಕಿದೆ. ಅಂತಹ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವದಲ್ಲದೆ. ಕಳಂಕಿತ ಅಪವಾದವನ್ನು ಬಯಲೆಗೆಳೆಯುವಲ್ಲಿ ನಾಗರಿಕರು ಸಹಕರಿಸಬೇಕು. ಅಂದಾಗ ಇಂತಹ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ.

ಅಲ್ಲದೆ ಇಂತದೆ ಸ್ಥಿತಿಯನ್ನು ಲೈಂಗಿಕ ಕೃತ್ಯಗಳಲ್ಲಿ ಕಾಣಬಹುದು. ಲೈಂಗಿಕ ಶೋಷಣೆ ಅಲಿಯಲು ಸಾರ್ವಜನಿಕರ ಸಹಾಯ ಸಹಕಾರ ಅತ್ಯಗತ್ಯ. ಸಂಶಯ ಬಂದ ತಕ್ಷಣ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಬೇಕು. ಲೈಂಗಿಕ ಕೃತ್ಯಗಳಿಂದ ಅನಾರೋಗ್ಯ ಸಮಾಜ ನಿರ್ಮಾಣವಾಗಲಿದೆ. ಕಾರಣ ಅದರ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು. ಲೈಂಗಿಕ ಶೋಷಣೆ ಮುಕ್ತ ನಾಡು ಕಟ್ಟಲು ಸಹಕರಿಸಬೇಕು.

ಶಾಂತಿ, ನೆಮ್ಮದಿಯುಕ್ತ ಜೀವನ ಬದುಕಿಗೆ ಆಧಾರ. ಕಾನೂನು ನಿಯಮಗಳನ್ನು ಅರಿತುಕೊಂಡಲ್ಲಿ ಅಪರಾಧಿಕ ಮನೋಭಾವನೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಕಾರಣ ಸರ್ವರು ಕಾನೂನು ಬಗ್ಗೆ ತಿಳುವಳಿಕೆ ಹೊಂದಿರಬೇಕು. ಆ ಮೂಲಕ ನ್ಯಾಯ ಒದಗಿಸುವಲ್ಲಿ ತಾವೆಲ್ಲರೂ ಪಾತ್ರವಹಿಸಿದ್ದಾಗ ಇಂತಹ ಪ್ರಕರಣಗಳು ಕಡಿಮೆಯಾಗಲಿವೆ ಎಂದರು.

ಹಿರಿಯ ವಕೀಲ ಅಮರೇಶ ದೇಸಾಯಿ ಮಾತನಾಡಿ, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ಥೆ ಮಹಿಳೆಗೆ ಸರ್ಕಾರ ವಿಶೇಷ ಸೌಲತ್ತು ನೀಡುತ್ತಿದ್ದು, ಅವರ ರಕ್ಷಣೆಗಾಗಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಕಾನೂನು ನಿಯಮಗಳನ್ನು ತಿಳಿದುಕೊಂಡು ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರು ಸೂಕ್ತ ನ್ಯಾಯ ಪಡೆಯಬಹುದು. ಸುಶಿಕ್ಷಿತ ಶಿಕ್ಷಣ ನೀಡುವ ಮೂಲಕ ಮಕ್ಕಳಿಗೆ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ.

ವಿಶೇಷವಾಗಿ ಅಪ್ರಾಪ್ತರ ಶೋಷಣೆ ಗಂಭೀರ ಸ್ವರೂಪವಾಗಿದ್ದು, ಈ ಕುರಿತು ಕಠಿಣ ಕ್ರಮಗಳಿವೆ. ಸಮರ್ಪಕ ಕಾನೂನು ಅರಿಯಬೇಕು. ಅಲ್ಲದೆ ಕಾನೂನು ಪ್ರಾಧಿಕಾರದ ಸಹಾಯ ಸಲಹೆ ಪಡೆಯಬಹುದಾಗಿದೆ ಎಂದರು.
ಮುಖ್ಯ ಅಥಿತಿಗಳಾಗಿ ಸ್ಥಳೀಯ ನ್ಯಾಯಲಯದ ಹೆಚ್ಚುವರಿ ಸಿವಿಲ್ ನ್ಯಾಯಧೀಶ ಹಣಮಂತರಾವ್ ಕುಲಕರ್ಣಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್ಫ್ರೆಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಿಪಿಐ ನಾಗರಾಜ ಜಿ,ವಹಿಸಿದ್ದರು. ವಕೀಲರಾದ ಶರಬಣ್ಣ ರಸ್ತಾಪುರ, ನಗರ ಪ್ರಮುಖರಾದ ಸಣ್ಣ ನಿಂಗಣ್ಣ ನಾಯ್ಕೋಡಿ, ಅಯ್ಯಣ್ಣ ಕನ್ಯಾಕೋಳೂರ ಸೇರಿದಂತೆ ವಿವಿಧ ಬಡಾವಣೆಗಳಿಂದ ನಾಗರಿಕರು ಭಾಗವಹಿಸಿದ್ದರು. ಪಿ.ಸಿ.ಶಿವನಗೌಡ ನಿರೂಪಿಸಿ, ವಂದಿಸಿದರು.

ವಾಹನಗಳ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲವಾದಲ್ಲಿ ಅಪಘಾತಗಳ ಸಂದರ್ಭ ಸಾಕಷ್ಟು ಸಾವು ನೋವು ಅನುಭವಿಸಬೇಕಾಗುತ್ತದೆ. ಹೆಲ್ಮೆಟ್ ಪ್ರಾಣ ರಕ್ಷಕ ಕವಚವಾಗಿದೆ. ಅದನ್ನು ಕಡೆಗಣಿಸಿ ವಾಹನ ನಡೆಸಬೇಡಿ. ಮುಂದೊಂದು ದಿನ ಅಪಾಯ ಎದುರಾದಾಗ ನೆನಸಬೇಕಾಗುತ್ತದೆ. ಪ್ರಸಕ್ತ ವರ್ಷ 16 ಕ್ಕೂ ಹೆಚ್ಚು ಜನರು ಹೆಲ್ಮೆಟ್ ಧರಿಸದ ಕಾರಣ ಮೃತಪಟ್ಟಿದ್ದಾರೆ. ಕಾನೂನು ಪಾಲನೆ ಉತ್ತಮ ಬದುಕಿಗೆ ಆಸರೆ. ಸರ್ವರೂ ಕಾನೂನಾತ್ಮಕ ಜೀವನ ಕಟ್ಟಿಕೊಳ್ಳಿ. ಎಲ್ಲರಿಗೂ ಅದು ಕಾಪಾಡಲಿದೆ.

-ಸಿಪಿಐ ನಾಗರಾಜ ಜಿ.

Related Articles

Leave a Reply

Your email address will not be published. Required fields are marked *

Back to top button