ನಿಯತ್ತು ಬದಲಿಸಿದ ನಾಯಕರು !
ಬೆಂಗಳೂರು : ಅನರ್ಹತೆ ಭೀತಿಯಲ್ಲಿರುವ ಅತೃಪ್ತ ಶಾಸಕರ ಪೈಕಿ ಇಬ್ಬರು ಇಂದು ಕರೆ ಮಾಡಿದ್ದರು. ಆದರೆ, ನಾನು ಕರೆ ಸ್ವೀಕರಿಸಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಆದ್ರೆ, ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅತೃಪ್ತ ಶಾಸಕರಾದ ಬಿ.ಸಿ.ಪಾಟೀಲ್, ಮುನಿರತ್ನ ಹಾಗೂ ಎಂ.ಟಿ.ಬಿ ನಾಗರಾಜ್ ಕರೆ ಮಾಡುವ ಅಗತ್ಯವೇನಿದೆ. ನಾವು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಕಾನೂನು ಕ್ರಮ ಎದುರಿಸಲು ಸಿದ್ಧವಾಗಿಯೇ ನಾವು ಹೆಜ್ಜೆ ಇಟ್ಟಿದ್ದೇವೆ ಎಂದಿದ್ದಾರೆ.
ಅವರು ದೊಡ್ಡ ನಾಯಕರಿರಬಹುದು ಆದರೆ, ನಾವು ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದೇವೆ. ನಾನು ಎರಡನೇ ಬಾರಿಗೆ ರಾಜೀನಾಮೆ ನೀಡುತ್ತಿದ್ದೇನೆ. ಕುಟುಂಬದ ಭಾರೀ ವಿರೋಧದ ನಡುವೆಯೂ ನಾನು ಸ್ವಾಭಿಮಾನಕ್ಕಾಗಿ ಪಿಎಸ್ ಐ ಹುದ್ದೆಗೆ ರಾಜೀನಾಮೆ ನೀಡಿದ್ದೆ. ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ನಾನು ಸಿದ್ಧರಾಮಯ್ಯ ಅವರ ಬಗ್ಗೆ ಏನೂ ಮಾತನಾಡೋದಿಲ್ಲ. ಈ ಹಿಂದೆಯೂ ಮಾತಾಡಿಲ್ಲ, ಈಗಲೂ ಮಾತಾಡೋದಿಲ್ಲ. ಆದರೆ, ನನ್ನ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಾನು ದೃಢ ನಿರ್ಧಾರ ಮಾಡಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇನೆ ಎಂದು ಮುನಿರತ್ನ ಪ್ರತಿಕ್ರಿಯಿಸಿದ್ದಾರೆ.
ಇನ್ನು ಎಂ.ಟಿ.ಬಿ ನಾಗರಾಜ ಒಂದು ಹೆಜ್ಜೆ ಮುಂದೆ ಹೋಗಿ ಈ ಹಿಂದೆ ನನ್ನ ಎದೆ ಬಗೆದರೆ ಸಿದ್ಧರಾಮಯ್ಯ ಕಾಣುತ್ತಿದ್ದರು ಎಂದು ಹೇಳಿದ್ದೆ. ಆದರೆ, ಈಗ ಅವರನ್ನು ಬೆಂಗಳೂರಿನಲ್ಲೇ ಬಿಟ್ಟು ಬಂದಿದ್ದೇನೆ. ಈಗ ಎದೆ ಬಗೆದರೆ ದೇವರು ಕಾಣುತ್ತಾನೆ. ನಾನು ರಾಜಕೀಯ ನಿವೃತ್ತಿ ಪಡೆಯಲು ಸಹ ಸಿದ್ಧನಿದ್ದೇನೆ. ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ನಾವ್ಯಾರು ಕರೆ ಮಾಡಿಲ್ಲ ಎಲ್ಲಾ ಸುಳ್ಳು ಎಂದಿದ್ದಾರೆ. ಆ ಮೂಲಕ ಸಿದ್ಧರಾಮಯ್ಯಗೆ ನಿಷ್ಠರಾಗಿದ್ದವರು ಈಗ ನಿಯತ್ತು ಬದಲಿಸಿದ್ದಾರೆ.