ನಿಮ್ಮ ಮೈಲಿಗಲ್ಲುಗಳನ್ನು ನಿರ್ಧರಿಸಿರಿ- ಲೇಖಕಿ ಜಯಶ್ರೀ ಅಬ್ಬಿಗೇರಿ ಬರಹ
ನಿಮ್ಮ ಮೈಲಿಗಲ್ಲುಗಳನ್ನು ನಿರ್ಧರಿಸಿರಿ
ಜಯಶ್ರೀ.ಜೆ. ಅಬ್ಬಿಗೇರಿ.
ನಾವು ಅಂದುಕೊಂಡ ಕಾರ್ಯಗಳು ಕಠಿಣ ಪರಿಶ್ರಮದ ಹೊರತಾಗಿಯೂ ನಾವೇ ರೂಪಿಸಿಕೊಂಡ ಯೋಜನೆಗೆ ಅನುಸಾರವಾಗಿ ನಡೆಯುವುದಿಲ್ಲವೆಂಬುದು ಇಂದಿನ ಸಾವಿರ ಸಾವಿರ ಯುವಕರ ಗೊಣಗಾಟ.
ಹೀಗೇಕೆ ಎಂದು ಯೋಚಿಸಿದರೆ, ಗುರಿಯ ದಾರಿಯಲ್ಲಿ ಅಡೆತಡೆಗಳು ಸಾಲು ಸಾಲಾಗಿ ನಿಂತಿವೆ ಎಂಬ ಉತ್ತರ ಸಿಗುತ್ತದೆ. ಆದರೆ ಯಾವ ವ್ಯಕ್ತಿಗೆ ತನ್ನ ಸಾಮಥ್ರ್ಯದ ಬಗ್ಗೆ ವಿಶ್ವಾಸವಿದೆಯೋ ಆ ವ್ಯಕ್ತಿ ಸಿಂಹದಂತೆ ಅವಲೋಕನ ಮಾಡುತ್ತ ಅಗತ್ಯವಿರುವ ತಿದ್ದುಪಡಿಗಳನ್ನು ಮಾಡಿಕೊಳ್ಳುತ್ತ ಮುಂದೆ ಸಾಗುತ್ತಾನೆ.ಸಿಂಹಾವಲೋಕನ ಗುರಿಸಾಧನೆಯಲ್ಲಿ ಅತ್ಯಂತ ಅವಶ್ಯಕ.
ಕಾರ್ಯ ಅವಲೋಕನ ಹಾಗೂ ಅದಕ್ಕೆ ತಕ್ಕಂತೆ ಪರಿವರ್ತನೆಗಳನ್ನು ಮಾಡುವಲ್ಲಿ ಸ್ವಾಮಿ ವಿವೇಕಾನಂದರು ನಿಸ್ಸೀಮರಾಗಿದ್ದರು ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.
ಗುರಿ ಸಾಧನೆ ನಿಮ್ಮ ಮೈಲಿಗಲ್ಲುಗಳನ್ನು ನಿರ್ಧರಿಸಿರಿ. ನಿಮ್ಮ ಪ್ರಾಮುಖ್ಯತೆಗಳನ್ನು ತೀರ್ಮಾನಿಸಿರಿ. ಯಾವುದು ಪ್ರಮುಖವಲ್ಲ ಅಗತ್ಯವಲ್ಲ.
ತುಂಬ ಪ್ರಮುಖವಾದುದು ಆದರೆ ಅಗತ್ಯವಲ್ಲ. ಅತ್ಯಗತ್ಯ ಆದರೆ ಪ್ರಧಾನವಲ್ಲ ಅತ್ಯಗತ್ಯ ಮತ್ತು ಪ್ರಮುಖ ಎಂಬುದನ್ನು ನಿರ್ಧರಿಸಿ ಕಾರ್ಯ ಮಾಡಿ ಅದರೊಂದಿಗೆ ಪ್ರತಿಯೊಂದು ಕೆಲಸಕ್ಕೆ ಒಂದು ಸಮಯ. ಆ ಕೆಲಸ ಅದೇ ಸಮಯದಲ್ಲಿ ಮುಗಿಯಬೇಕು. ಸತತ ಪ್ರಯತ್ನಶೀಲರಾಗಿ ದೃಢಚಿತ್ತರಾಗಿ ಗುರಿಸಾಧನೆ ಖಂಡಿತ ಸಾಧ್ಯವೆಂಬುದನ್ನು ಸ್ವಾಮೀಜಿ ಒತ್ತಿ ಹೇಳಿದ್ದಾರೆ.
ಭವಿಷ್ಯದ ಬಾಳಿಗೆ ಬೆಳಕು ಚೆಲ್ಲಿದ್ದಾರೆ ಇಂದಿಗೂ ಲಕ್ಷಾಂತರ ಯುವಕರ ಏಳ್ಗೆಯ ರೂವಾರಿಗಳಾಗಿದ್ದಾರೆ. ಆಧುನಿಕತೆಯ ಅಬ್ಬರ ಬದುಕಿನಲ್ಲಿ ನಿಯಮ ಬದ್ಧ ಜೀವನವೆಂಬುದು ಸವೆದು ಹೋದ ನಾಣ್ಯದಂತೆ ಬೆಲೆ ಕಳೆದುಕೊಳ್ಳುತ್ತಿದೆ.
ಮಾತು ಕೃತಿ ಬದುಕಿನಲ್ಲಿ ಸಮನ್ವಯತೆಯಿಟ್ಟುಕೊಂಡು ಸರಳ ಸತ್ಸಂಗ ಸಚ್ಚಾರಿತ್ರ್ಯ ಸಾತ್ವಿಕ ಚಿಂತನೆಗಳಿಂದ ನಿನ್ನೊಳಗಿನ ಶಕ್ತಿಯನ್ನು ಗುರುತಿಸಿಕೊಂಡು ಸದಾ ಕ್ರಿಯಾಶೀಲರಾದರೆ, ಬದುಕಿನ ಗುರಿ ಸಾಧನೆ ಖಂಡಿತ ಸಾಧ್ಯ. ಸತ್ವಭರಿತ ಬದುಕಿನ ಸೂತ್ರಗಳನ್ನು ಬದುಕಿ ತೋರಿದ ಧೀರ ಸಂನ್ಯಾಸಿ ವಿವೇಕಾನಂದರು.
ಮೌಲ್ಯಾಧಾರಿತ ಬದುಕಿನ ಕಡೆಗೆ ಯುವ ಜನಾಂಗವನ್ನು ಹೊರಳಿಸಿದ ತನ್ಮೂಲಕ ಪ್ರಾಮಾಣಿಕ ತತ್ವ ನಿಷ್ಟ ಯುವ ಪಡೆಯನ್ನು ರೂಪಿಸುತ್ತಿರುವವರು ಸ್ವಾಮೀಜಿ. ಕೋಟಿ ಕೋಟಿ ವಿದ್ಯಾರ್ಥಿಗಳು ಯುವ ಜನಾಂಗ ವೀರ ಧೀರ ವಿವೇಕಾನಂದರ ವ್ಯಕ್ತಿತ್ವವನ್ನು ಮುನ್ನಡೆಸುತ್ತಿದೆ ಎಂದು ಪರಂಜ್ಯೋತಿಯಂಥ ವ್ಯಕ್ತಿತ್ವ.
ಪ್ರಾಧಾನ್ಯತೆ ಅಗತ್ಯತೆ ಗುರಿ ಸಾಧನೆಗೆ ಬಹಳಷ್ಟು ಕಾರ್ಯಗಳನ್ನು ಮಾಡಬೇಕು. ಆದರೆ ಅವುಗಳನ್ನು ಪ್ರಾಧಾನ್ಯತೆಯರಿತು ಅಗತ್ಯಾನುಸಾರ ಮಾಡಬೇಕೆಂಬುದು ಸ್ವಾಮೀಜಿ ತಮ್ಮ ಜೀವನದಿಂದ ನಮಗೆ ಕಲಿಸಿಕೊಡುತ್ತಾರೆ. ಚಲನೆ ಮತ್ತು ಪ್ರಗತಿ ಜೀವನದ ಕುರುಹು ಎಂಬುದನ್ನು ನೆನಪಿನಲ್ಲಿಡಿ. ಎಂದು ಸಾರಿದ್ದಾರೆ.
ಸ್ವಾಮಿ ವಿವೇಕಾನಂದರು ಒಂದೆಡೆ ಹೀಗೆ ಹೇಳುತ್ತಾರೆ.’ಯಾಂತ್ರಿಕತೆಯ ಪ್ರಾರ್ಥನೆಗಿಂತ ತಾದಾತ್ಮ್ಯತೆಯಿಂದ ಕಾಲ್ಚೆಂಡನ್ನು ಒದೆಯುವುದೇ ನಿಮ್ಮನ್ನು ದೈವೀತೆಯತ್ತ ಕೊಂಡೊಯ್ಯಬಲ್ಲದು.’
ಪೂರ್ಣ ಏಕಾಗ್ರತೆಯಿಲ್ಲದೇ ಒಂದು ಚೆಂಡನ್ನು ಗುರಿಯತ್ತ ಕೊಂಡೊಯ್ಯಲಾರಿರಿ. ಇದರಲ್ಲಿ ವೈಯುಕ್ತಿಕ ಉದ್ದೇಶವಿಲ್ಲ.ಕೇವಲ ಒಳಗೊಳ್ಳುವಿಕೆಯಿದೆ. ನೀವೇನು ಮಾಡಬಲ್ಲಿರಿ ಏನು ಮಾಡಲಾರಿರಿ ಎಂಬುದು ಮೊದಲೇ ನಿಗದಿತವಾಗಿರುತ್ತದೆ.
ಮತ್ತು ನೀವು ಅನೇಕ ವರ್ಷಗಳ ತರಬೇತಿಯನ್ನು ಪಡೆದಿರುತ್ತೀರಿ. ಆಡುವ ಈ ಕ್ಷಣದಲ್ಲಿ ಕೇವಲ ಗಾಢವಾದ ಒಳಗೊಳ್ಳುವಿಕೆ ಮಾತ್ರವೇ ಯಾವುದೇ ಉದ್ದೇಶವಲ್ಲ.ಇದರಿಂದಾಗಿಯೇ ವಿವೇಕಾನಂದರು ಕಾಲ್ಚೆಂಡಿನ ಕುರಿತಾಗಿ ಮೇಲಿನಂತೆ ಹೇಳಿದ್ದು. ನೂರಾರು ವರುಷಗಳ ಹಿಂದೆ ವಿವೇಕಾನಂದರು ಹಚ್ಚಿದ ವೇದಾಂತದ ದೀವಿಗೆ ವಿಶ್ವದಾದ್ಯಂತ ಇನ್ನೂ ಬೆಳಕು ಚೆಲ್ಲುತ್ತಿದೆ.
ಶತಮಾನದ ನಂತರವೂ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ವಿವೇಕ ಎಂದರೆ ಜ್ಞಾನ – ಗ್ರಹಣಶಕ್ತಿ. ಜ್ಞಾನದಿಂದ ಉಂಟಾಗುವ ಸಂತೋಷವೇ ಆನಂದ. ಅದೇ ವಿವೇಕಾನಂದ. ನಾವು ಗ್ರಹಿಸುವುದು ಮಾತ್ರವೇ ನಮ್ಮ ಪಾಲಿಗೆ ಅಸ್ತಿತ್ವದಲ್ಲಿದೆ. ಸ್ವಾಮೀಜಿಯವರ ಸತ್ವ ಭರಿತ ಕೆಲ ವಿಚಾರಗಳನ್ನು ನೆನಯಬಹುದಾದರೆ. . . . .
ಮಹಿಳೆಯರ ಏಳಿಗೆ ಒಮ್ಮೆ ಓರ್ವ ಸಮಾಜ ಸುಧಾರಕ ವಿವೇಕಾನಂದರ ಬಳಿ ಬಂದು ಕೇಳುತ್ತಾನೆ.’ನೀವು ಕೂಡ ಮಹಿಳೆಯರ ಏಳಿಗೆಯನ್ನು ಬೆಂಬಲಿಸುತ್ತೀರಿ. ನನಗೂ ಅದರಲ್ಲಿ ಆಸಕ್ತಿಯಿದೆ. ಮಹಿಳೆಯರ ಸುಧಾರಣೆಗಾಗಿ ನಾ ಏನು ಮಾಡಲಿ? ಯಾವ ರೀತಿ ಬೆಂಬಲಿಸಲಿ? ವಿವೇಕಾನಂದರ ಉತ್ತರಿಸುತ್ತಾರೆ.’
ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ. ಅವರ ಸುಧಾರಣೆಗಾಗಿ ನೀವೇನೂ ಮಾಡಬೇಕಾಗಿಲ್ಲ. ಅವರ ಬೆಳವಣಿಗೆಯ ದಾರಿಗೆ ನೀವು ಅಡ್ಡ ಬರದಿದ್ದರೆ ಸುಧಾರಣೆ ತಾನಾಗಿಯೇ ಆಗುತ್ತದೆ. ಮಹಿಳೆಯರ ಸುಧಾರಣೆಗಾಗಿ ಪುರುಷರು ಏನೂ ಮಾಡಬೇಕಾಗಿಲ್ಲ. ನೀವು ಹಾಕಿರುವ ಬೇಲಿಗಳನ್ನು ನಿವಾರಿಸಿ. ಮಹಿಳೆ ಅಗತ್ಯತೆಗೆ ತಕ್ಕಂತೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತಾಳೆ.
ನಿಮ್ಮ ಹೆಗಲನ್ನು ನೊಗಕ್ಕೆ ಕೊಡಿ
‘ನನ್ನ ಧೀರ ಸುತರೆ, ನೊಗಕ್ಕೆ ನಿಮ್ಮ ಹೆಗಲನ್ನು ಕೊಡಿರಿ. ಹೆಸರು ಕೀರ್ತಿಗಾಗಿ ಅಥವಾ ಇನ್ನಾವುದೇ ಮೂರ್ಖ ವಸ್ತುವಿಗಾಗಿ ಹಿಂದಿರುಗಿ ನೋಡದಿರಿ. ನಿಮ್ಮನ್ನು ನೀವು ಮರೆತು, ಸ್ವಾರ್ಥವನ್ನು ಮೂಲೆಗೆಸೆದು ಕಾರ್ಯ ರಂಗಕ್ಕೆ ಧುಮುಕಿರಿ.
‘ಉತ್ತಿಷ್ಟಿತ ಜಾಗೃತ ಗುರಿಯನ್ನು ಸೇರುವವರೆಗೆ ನಿಲ್ಲದಿರಿ.’ ಎನ್ನುತ್ತದೆ ವೇದಗಳು. ಏಳಿ, ಸುದೀರ್ಘ ರಾತ್ರಿ ಕೊನೆಗೊಳ್ಳುತ್ತಿದೆ. ಅರುಣೋದಯವಾಗುತ್ತಿದೆ. ಅಲೆ ಮೇಲೆ ಏಳುತ್ತಿದೆ.
ಯಾರೂ ಅದನ್ನು ತಡೆಯಲಾರರು, ಸಿಡಿಲ ಸ್ಪೂರ್ತಿ ನನ್ನ ಸುತರೆ, ಪ್ರೇಮ, ಶ್ರದ್ಧೆ, ನಂಬಿಕೆ ಮತ್ತು ನಿರ್ಭಯತೆ! ಇದು ವಿಶ್ವಕೆಲ್ಲ ವಿವೇಕ ನೀಡಿದ ವಿವೇಕಾನಂದರು ಮದ್ರಾಸಿನ ಶಿಷ್ಯ ಆಳಸಿಂಗನಿಗೆ ಬರೆದ ಪತ್ರ. ಮಲಗಿದ ಭಾರತೀಯರನ್ನು ಬಡಿದೆಬ್ಬಿಸಲು ರಾಷ್ಟ್ರ ಮಟ್ಟದ ಸಂಸ್ಥೆಯನ್ನು ನೆಲೆ ನಿಲ್ಲಿಸುವುದು ಸ್ವಾಮೀಜಿ ಅವರ ದೊಡ್ಡ ಕನಸಾಗಿತ್ತು.
ಆ ಕನಸು ನನಸಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತ ತಮ್ಮ ಸೋದರ ಸನ್ಯಾಸಿಗೆ ಬರೆದ ಪತ್ರದಲ್ಲಿ ಹೀಗೆ ಬರೆಯುತ್ತಾರೆ.’ಶೀಘ್ರವಾಗಿ ಕಾರ್ಯ ಮಾಡುತ್ತ ಹೋಗಿರಿ. ಭಯ ಪಡದಿರಿ.
ನಾನೂ ಕಾರ್ಯರತನಾಗಲು ನಿರ್ಧರಿಸಿದ್ದೇನೆ. ನಾವು ಹತ್ತು ವರ್ಷಗಳಲ್ಲಿ ಇಡೀ ಭಾರತದಾದ್ಯಂತ ಹರಡಿಕೊಳ್ಳಬೇಕು. ಅದಕ್ಕಿಂತ ಕಡಿಮೆ ಸಲ್ಲದು. ನಾವು ಕ್ರೀಡಾಪಟುವಿನಂತೆ ಚುರುಕಾಗಿ ಕಾರ್ಯರತರಾಗಬೇಕು.
ಕಾರ್ಯ ಬಯಸುವವನು
ಸ್ವಾಮೀಜಿಯವರ ವಿದ್ವತ್ವಾಣಿಗೆ ಶರಣಾಗದವರು ಇಲ್ಲ. ಅಪಾರ ಜ್ಞಾನ ರಾಶಿ ಹೊಂದಿದ ಅವರು ಮಹಾನ್ ಕರ್ಮಯೋಗಿಗಳಾಗಿದ್ದರು.
ತಾವು ಕೈಗೊಂಡ ಕಾರ್ಯವನ್ನು ಪೂರ್ತಿಗೊಳಿಸುವಲ್ಲಿ ನಿಶ್ಚಿತ ಸಮಯಕ್ಕೆ ಅಂಟಿಕೊಳ್ಳಲು ಬಯಸುತ್ತಿದ್ದರು. ತಮ್ಮ ಸೋದರ ಸಂನ್ಯಾಸಿ ಸ್ವಾಮಿ ಬ್ರಹ್ಮಾನಂದರಿಗೆ ಬರೆದ ಪತ್ರದಲ್ಲಿ “ಒಬ್ಬ ವ್ಯಕ್ತಿ ಆರು ತಿಂಗಳು ಹೊಗಳಿಕೆ-ತೆಗಳಿಕೆ ಲಾಭ ನಷ್ಟವನ್ನು ಕುರಿತು ಗೊಣಗುವುದರಲ್ಲಿ ಕಳೆಯುವುದೇ. . . . ನಾನು ಕಾರ್ಯವನ್ನು ಬಯಸುವವನು.. . . ನನ್ನ ದೃಷ್ಟಿಯಲ್ಲಿ ಜೀವನವು ನಾನು – ನನ್ನ ಸುಖ ನನ್ನ ಗೌರವ ಇವುಗಳಿಗೆ ಗಮನವನ್ನು ಕೊಡಲು ಅಷ್ಟೊಂದು ದೀರ್ಘವಾಗಿಲ್ಲ.
ಕೊನೆಗೂ ಇವುಗಳ ಹಿಂದಿನ ಉದ್ದೇಶವೇನು? ಧನ- ಸಂಪದ, ಮತ ಸಂಸ್ಥೆಗಳು, ಜೀವನದುದ್ದಕ್ಕೂ ಇವೆಲ್ಲವುಗಳ ಒಂದೇ ಉದ್ದೇಶ ಶಿಕ್ಷಣ. ಇಲ್ಲದಿದ್ದರೆ ಸಂಸ್ಥೆಗಳ ಸಂಪತ್ತಿನ ಉಪಯೋಗವಾದರೂ ಏನು?
ಜನಮಾನಸದಲ್ಲಿ ಸ್ಪೂರ್ತಿಯ ಚಿಲುಮೆಯಾಗಿ ಚಿರಸ್ಥಾಯಿಯಾಗಿ ಅವಿಸ್ಮರಣೀಯರಾಗಿ ಉಳಿಯುವ ವಿಶ್ವಕೆಲ್ಲ ವಿವೇಕ ನೀಡಿದ ವಿವೇಕಾನಂದರ ಚಿಂತನೆ ನಿರಂತರ ಅಧ್ಯಯನಶೀಲತೆ ಕಾರ್ಯದಕ್ಷತೆ ನಮಗೆ ಸ್ಪೂರ್ತಿಯಾಗಲಿ ತನ್ಮೂಲಕ ನಮ್ಮೆಲ್ಲರ ಬಾಳು ಹದಗೊಳ್ಳಲಿ.
-ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142.